ತುಂಗಭದ್ರಾ ಜಲಾಶಯದ 7 ಗೇಟ್‌ಗಳ ದುರಸ್ತಿ ವಿಳಂಬವನ್ನು ಖಂಡಿಸಿ ಮಾಜಿ ಸಚಿವ ವೆಂಕಟರಾವ್ ನಾಡಗೌಡರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರೈತರ ಬದುಕಿನ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ ಅವರು, ಎರಡನೇ ಬೆಳೆಗೆ ನೀರು ಕೊಡದಿರಲು ಸರ್ಕಾರ ಹುನ್ನಾರ ನಡೆಸಿದೆ ಎಂದರು.

ಕೊಪ್ಪಳ (ಆ.16): ತುಂಗಭದ್ರಾ ಜಲಾಶಯದ (ಟಿಬಿ ಡ್ಯಾಂ) ವ್ಯಾಪ್ತಿಗೆ ಒಳಪಡುವ ನಾಲ್ಕು ಜಿಲ್ಲೆಗಳ ರೈತರ 2ನೇ ಬೆಳೆಗೆ ನೀರು ಕೊಡಲಾಗದ ಪರಿಸ್ಥಿತಿಗೆ ಬಂದಿರುವ ಸರ್ಕಾರ, ಇದೀಗ 7 ಗೇಟ್‌ಗಳ ದುರಸ್ತಿಯ ನಾಟಕ ಮಾಡುತ್ತಿದೆ. ಕಳೆದ ವರ್ಷ ಒಂದು ಗೇಟ್ ರಿಪೇರಿ ಮಾಡಲಾಗದೇ ಬೇಸಿಗೆಯಲ್ಲಿ ಮಲಗಿದ್ದರಾ? 'ಈ ಸರ್ಕಾರಕ್ಕೆ ಮಾನ ಮರ್ಯಾದೆ ಏನೂ ಇಲ್ಲ, ರೈತರ ಬದುಕಿನ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ' ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡರ (Former Minister Venkatarao Nadagowda) ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ 19ನೇ ಗೇಟ್ ಕಿತ್ತುಹೋದಾಗ ನೀರಾವರಿ ಸಚಿವರು ಒಂದು ವರ್ಷದೊಳಗೆ ಎಲ್ಲ ಗೇಟ್‌ಗಳನ್ನು ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ಕೇವಲ ಒಂದು ಗೇಟ್ ರಿಪೇರಿ ಮಾಡಲೂ ಅವರಿಗೆ ಸಾಧ್ಯವಾಗಿಲ್ಲ. 'ಅವರಿಗೆ ಇಷ್ಟು ದಿನ ಏನು ಕೆಲಸವಿತ್ತು? ಬೇಸಿಗೆ ಅವಧಿಯಲ್ಲಿ ಎಲ್ಲರೂ ಮಲಗಿದ್ದರಾ?' ಎಂದು ಪ್ರಶ್ನಿಸಿದರು.

ಮಳೆಗಾಲದಲ್ಲಿ ಭರ್ಜರಿ ಮಳೆಯಾಗಿದ್ದು, ಡ್ಯಾಮಿನೊಳಗೆ ನೀರು ತುಂಬಿಕೊಂಡಿದೆ. ಈಗ ಗೇಟ್‌ಗಳು ಬಾಗಿದೆ, ಸೊಟ್ಟಗಾಗಿದೆ ಎಂದು ಹೇಳುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು. ಈ ಹಿಂದೆಯೇ ಡ್ಯಾಂನ ಎಲ್ಲ ಗೇಟ್‌ಗಳನ್ನು ಬದಲಾಯಿಸಬೇಕು ಎಂದು ಕನ್ನಯ್ಯ ಎಂಬುವರು ವರದಿ ನೀಡಿದ್ದರು. ಈಗ ಗೇಟ್‌ಗಳು ಕೆಟ್ಟಿವೆ ಎಂದು ಹೇಳುತ್ತಿರುವುದು ಸರ್ಕಾರದ ಸಂಪೂರ್ಣ ವೈಫಲ್ಯವನ್ನು ತೋರಿಸುತ್ತದೆ ಎಂದು ನಾಡಗೌಡ್ರ ಟೀಕಿಸಿದರು.

ಎರಡನೇ ಬೆಳೆಗೆ ನೀರು ಕೊಡದಿರಲು ಹುನ್ನಾರ:

ತುಂಗಭದ್ರಾ ಜಲಾಶಯದ ಒಂದು ಗೇಟ್ ದುರಸ್ತಿಗೆ 7-8 ತಿಂಗಳು ಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಹೇಳುತ್ತಾರೆ. ಈಗಿನ ತಂತ್ರಜ್ಞಾನದಲ್ಲಿ ಗೇಟ್ ಸಿದ್ಧವಿದ್ದರೆ ಒಂದೇ ದಿನದಲ್ಲಿ ಅಳವಡಿಸಬಹುದು. ಆದರೂ ಇಷ್ಟೊಂದು ಸಮಯ ಬೇಕು ಎಂದು ಹೇಳುತ್ತಿರುವುದು ಗೊಂದಲ ಮೂಡಿಸುತ್ತಿದೆ. ಇನ್ನು ಕಲ್ಯಾಣ ಕರ್ನಾಟಕದ ಜೀವನಾಡಿ ಆಗಿರುವ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು (Ballari, Vijayanagara, Koppala, Raichur) ಜಿಲ್ಲೆಗಳ ರೈತರಿಗೆ ಬೇಸಿಗೆ ಅವಧಿಗೆ ಬೆಳೆಯುವ ಎರಡನೇ ಬೆಳೆಗೆ ನೀರು ಕೊಡಬಾರದು ಎನ್ನುವುದು ಈ ಸರ್ಕಾರದ ಹುನ್ನಾರವಾಗಿದೆ. ಇದಕ್ಕಾಗಿ ಟಿಬಿ ಡ್ಯಾಂ ಗೇಟ್ ದುರಸ್ತಿಯ ಬಗ್ಗೆ ನಾಟಕ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ತುಂಗಭದ್ರಾ ಜಲಾಶಯದ ಗೇಟುಗಳನ್ನು ರಿಪೇರಿ (Tungabhadra Dam Gate Repair) ಮಾಡುವುದಕ್ಕೆ ಬೇಸಿಗೆಯಲ್ಲಿ ಟೆಂಡರ್ ಕರೆಯಲು ರಾಜ್ಯ ಸರ್ಕಾರಕ್ಕೆ ಯಾಕೆ ನೆನಪಾಗಲಿಲ್ಲವಾ? ಇದೀಗ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಕೇಂದ್ರದವರು ಬಂದು ಗೇಟ್ ರಿಪೇರಿ ಮಾಡಲಾಗುತ್ತದೆಯೇ? ಟಿಬಿ ಡ್ಯಾಂ ಗೇಟ್ ದುರಸ್ತಿ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆ ಸರಿಯಲ್ಲ. ಈ ಜಲಾಶಯವನ್ನು ಬೋರ್ಡ್ ನಿರ್ವಹಣೆ ಮಾಡುತ್ತದೆ. ಗೇಟ್ ದುರಸ್ತಿಯನ್ನೂ ಬೋರ್ಡ್ ಮಾಡಬೇಕಿದೆ. ಇದೀಗ ಸಭೆ ಮಾಡಿದ್ದೇವೆ ಎಂದು ಹೇಳುತ್ತೀರಿ? ಬೇಸಿಗೆಯಲ್ಲಿ ಬೋರ್ಡ್‌ನೊಂದಿಗೆ ಏಕೆ ಸಭೆ ನಡೆಸಲಿಲ್ಲ? ಎಂದು ಪ್ರಶ್ನಿಸಿದರು.

ಇದೇ ಪರಿಸ್ಥಿತಿ ಮುಂದುವರೆದರೆ ರೈತರ ಎರಡನೇ ಬೆಳೆ ಸಂಪೂರ್ಣವಾಗಿ ನಾಶವಾಗುತ್ತದೆ. ಇದರಿಂದ ರೈತರ ಬದುಕು ಅತಂತ್ರವಾಗಲಿದೆ ಎಂದು ಎಚ್ಚರಿಕೆ ನೀಡಿದರು. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಡ್ಯಾಂ ಒಡೆಯುತ್ತದೆ ಎಂಬ ಆತಂಕ ಜನರಲ್ಲಿ ಹೆಚ್ಚಾಗಿದೆ. ಈ ಸಂಪೂರ್ಣ ವೈಫಲ್ಯಕ್ಕೆ ಸರ್ಕಾರವೇ ನೇರ ಹೊಣೆ ಎಂದು ನಾಡಗೌಡ್ರ ಖಂಡಿಸಿದರು. ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಮುಂದಿನ ವರ್ಷ ಎಲ್ಲ ಗೇಟ್ ಬದಲಾಯಿಸುತ್ತೇವೆ ಎಂದು ಹೇಳಿದ್ದರು, ಆದರೆ, ಯಾವ ಆಧಾರದಲ್ಲಿ ಹೇಳಿದ್ದರೋ ಗೊತ್ತಿಲ್ಲ. ಆದರೆ, ಈಗ ಮಳೆಗಾಲದಲ್ಲಿ ಬೋರ್ಡ್ ನೆನಪು ಮಾಡಿಕೊಂಡಿದ್ದಾರೆ. ಸರ್ಕಾರ ರೈತರ 2ನೇ ಬೆಳೆಗೆ ನೀರು ಕೊಡದೇ ಚೆಲ್ಲಾಟ ಆಡಬಾರದು ಎಂದು ಆಕ್ರೋಶ ಹೊರಹಾಕಿದರು.