ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಬಸ್ ಮಾತ್ರ ಓಡ್ತಿದೆ ಉಳಿದವು ಠುಸ್: ಕೆಎಸ್ ಈಶ್ವರಪ್ಪ ವಾಗ್ದಾಳಿ
ರಾಜ್ಯದಲ್ಲಿ ತೀವ್ರ ಬರಗಾಲವಿದೆ. ರೈತರ ಆತ್ಮಹತ್ಯೆಗಳು ಲೆಕ್ಕಕ್ಕೆ ಸಿಗ್ತಾ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರದ ಒಬ್ಬನೇ ಒಬ್ಬ ಉಸ್ತುವಾರಿ ಸಚಿವ ರೈತರ ಸಮಸ್ಯೆ ಕೇಳುತ್ತಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇರಬಾರದು ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರು (ನ.3): ರಾಜ್ಯದಲ್ಲಿ ತೀವ್ರ ಬರಗಾಲವಿದೆ. ರೈತರ ಆತ್ಮಹತ್ಯೆಗಳು ಲೆಕ್ಕಕ್ಕೆ ಸಿಗ್ತಾ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರದ ಒಬ್ಬನೇ ಒಬ್ಬ ಉಸ್ತುವಾರಿ ಸಚಿವ ರೈತರ ಸಮಸ್ಯೆ ಕೇಳುತ್ತಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇರಬಾರದು ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರು ಆತ್ಮಹತ್ಯೆ ಮಾಡಿಕೊಳ್ಳಲು ರಾಜ್ಯದಲ್ಲಿ ಈ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ರೈತರ ಸಮಸ್ಯೆ ಕೇಳುವ ಬದಲು ಮುಖ್ಯಮಂತ್ರಿ ಸ್ಥಾನದ ಬಗ್ಗೆ ಬಡಿದಾಡುತ್ತಿದ್ದಾರೆ ಇದು ನಾಚಿಕೆಗೇಡು. ಈ ಸರ್ಕಾರ ಬರಘೋಷಣೆ ಮಾಡಿದ್ದಷ್ಟೇ ಬಂತು, ಇದುವರೆಗೂ ಬೆಳೆ ಪರಿಹಾರಕ್ಕಾಗಲಿ, ಬರ ಪರಿಹಾರಕ್ಕಾಗಲಿ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ ಎಂದು ಕಿಡಿಕಾರಿದರು.
5 ವರ್ಷ ಸಿದ್ದರಾಮಯ್ಯ ಸಿಎಂ ಹೇಳಿಕೆಗೆ ಸಚಿವ ಸಂತೋಷ್ ಲಾಡ್ ಸಹಮತ
ನಿಮ್ಮ ನಾಯಕರಾದ ಸುರ್ಜೇವಾಲ, ವೇಣುಗೋಪಾಲ್ ಹೇಳಿದ ಮೇಲೂ ನಿಮ್ಮಿಷ್ಟದ ಹೇಳಿಕೆ ಕೊಡುತ್ತಿದ್ದೀರಾ ಅಂದರೆ ನಿಮ್ಮಲ್ಲಿ ಶಿಸ್ತಿಲ್ಲ. ರೈತರ ಬಗ್ಗೆ ಕಾಳಜಿ ಇಲ್ಲ. ಹೀಗಾಗಿ ಆಡಳಿತದ ಚುಕ್ಕಾಣಿ ಹಿಡಿಯುವ ಅಧಿಕಾರ, ಯೋಗ್ಯತೆ ಇಲ್ಲ. ಇವರು ಘೋಷಣೆ ಮಾಡಿದ ಗ್ಯಾರಂಟಿಗಳಲ್ಲಿ ಬಸ್ ಮಾತ್ರ ಓಡುತ್ತಿದೆ. ಇನ್ಯಾವ ಗ್ಯಾರಂಟಿಯೂ ಯಶಸ್ವಿ ಆಗಿಲ್ಲ. ರಾಜ್ಯದ ಜನರಿಗೆ ಮೋಸ ಮಾಡಿ ಆಡಳಿತ ಮಾಡ್ತಿದ್ದೀರಾ. ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆಗೆ ಹೋಗಿ ವಾಗ್ದಾಳಿ ನಡೆಸಿದರು.
ಇವರದು ಸಮ್ಮಿಶ್ರ ಸರ್ಕಾರ:
ಇದು ಕಾಂಗ್ರೆಸ್ ಸರ್ಕಾರ ಅಲ್ಲ, ಸಮ್ಮಿಶ್ರ ಸರ್ಕಾರ. ಒಂದು ಕಡೆ ಸಿದ್ದರಾಮಯ್ಯ, ಕಾಂತರಾಜು ವರದಿ ಜಾರಿಗೆ ತರ್ತೀವಿ ಅಂತಾರೆ, ಇನ್ನೊಂದು ಕಡೆ ಒಕ್ಕಲಿಗರ ನೇತೃತ್ವದಲ್ಲಿ ಡಿಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ಜಾರಿಗೆ ತರಲು ಬಿಡಲ್ಲ ಅಂತಾರೆ. ಒಂದೇ ಪಕ್ಷದ ಸರ್ಕಾರದಲ್ಲಿ ಸಿಎಂ, ಡಿಸಿಎಂ ಬೇರೆ ಬೇರೆ ಹೇಳಿಕೆ ಕೊಡ್ತಾರೆ. ಇದ್ರಿಂದ ರಾಜ್ಯದ ಜನ ಯಾಕಾದ್ರೂ ಇವರಿಗೆ ವೋಟು ಕೊಟ್ಟೆವೋ ಅಂತಿದ್ದಾರೆ.
ಬಿಜೆಪಿ ಲೀಡರ್ ಅಂತಾ ಜಗತ್ತಿಗೆ ಗೊತ್ತು, ಕಾಂಗ್ರೆಸ್ ನಾಯಕ ಯಾರು?
ಬಿಜೆಪಿ ಲೀಡರ್‌ಲೆಸ್, ಜೆಡಿಎಸ್ ಪೀಪಲ್‌ಲೆಸ್ ಎಂದ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಈಶ್ವರಪ್ಪ, ಇಡೀ ದೇಶದಲ್ಲಿ ಯಾವುದೇ ವ್ಯಕ್ತಿಯನ್ನು ಕೇಳಿದ್ರೂ ಮೋದಿ ಗೊತ್ತು. ವಿಶ್ವದ ಯಾರನ್ನೆ ಕೇಳಿದ್ರೂ ಈ ದೇಶದ ಪ್ರಧಾನಿ ಯಾರು ಅಂತಾ ಹೇಳ್ತಾರೆ. ನಿಮ್ಮ ನಾಯಕ ಯಾರು? ರಾಹುಲ್ ಗಾಂಧಿನಾ? ಇವರು ಲೀಡರ್ ಲೆಸ್ ಅಂತಾ ಹೇಳೊದು ಬಹಳ ಸುಲಭ. ರಾಜ್ಯದಲ್ಲಿ ನಿಮ್ಮದೇ ಇಬ್ಬರು ಲೀಡರ್‌ಗಳು ಕುಸ್ತಿ ಆಡ್ತಿದ್ದಾರೆ. ನಿಮ್ಮದನ್ನು ಲೀಡರ್ ಪಕ್ಷ ಅಂತಾ ಕರೆಯುತ್ತೀರಾ? ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದರು.
ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಹೇಳಿಕೆ ನೀಡಿದ್ದೇ ತಡ, ಡಿಕೆಶಿ ಬಣದಿಂದ ಹಾರಿ ಬಂತು ಮಿಸೈಲ್!
ನಾವು ಹೆಮ್ಮೆಯಿಂದ ಹೇಳಿಕೊಳ್ತೇವೆ ನಮ್ಮ ನಾಯಕ ಮೋದಿ ಅಂತಾ. ಯಾವ ಹಳ್ಳಿಯಲ್ಲಿ ನಿಮ್ಮ ರಾಹುಲ್ ಗಾಂಧಿ ಹೆಸರೇಳುತ್ತಾರೆ? ಪ್ರಿಯಾಂಕ್ ಖರ್ಗೆಗೆ ಮಾನ ಮರ್ಯಾದೆ ಇದ್ದಿದ್ರೆ ಪ್ರಾರಂಭದಲ್ಲಿ ಸಿದ್ದರಾಮಯ್ಯ ಸಿಎಂ ಆಗಿರಲಿ ಅಂದವರು ಈಗ ನಾನೇ ಸಿಎಂ ಸಿಎಂ ಎನ್ನುವ ಮಟ್ಟಕ್ಕೆ ಬೆಳೆದಿದ್ದಾರೆ. ಇದು ಯಾವ ನ್ಯಾಯ. ಸಿದ್ದರಾಮಯ್ಯ ಸಿಎಂ ಅಂತಿದ್ದ ಸಚಿವ ರಾಜಣ್ಣ ನಿನ್ನೆ ಇದ್ದಕ್ಕಿದ್ದಂತೆ ಪರಮೇಶ್ವರ್ ಸಿಎಂ ಆಗಲಿ ಅಂದಿದ್ದಾರೆ. ಸಿದ್ದರಾಮಯ್ಯರನ್ನ ಕೈ ಬಿಟ್ಟರು. ಈಗ ಕಾಂಗ್ರೆಸ್‌ಗೆ ಬಂದಿರುವ ದುಸ್ಥಿತಿ ಹಿಂದೆ ಯಾವ ಸರ್ಕಾರಕ್ಕೂ ಬಂದಿಲ್ಲ. ಹಾಗಾಗಿ ರಾಜೀನಾಮೆ ಕೊಟ್ಟು ಚುನಾವಣೆಗೆ ಹೋಗಲಿ ಎಂದು ಆಗ್ರಹಿಸಿದರು.
ಕುರುಬರಿಗೆ ಸಿದ್ರಾಮಯ್ಯ, ಒಕ್ಕಲಿಗರಿಗೆ ಡಿಕೆಶಿ ಸಿಎಂ ಆಗಲಿ
ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನದ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಈ ಪ್ರಶ್ನೆಯನ್ನ ಸಿಎಂ ಸಿದ್ದರಾಮಯ್ಯನವರನ್ನೇ ಕೇಳಿ. ಈ ಹಿಂದೆ ಯಾವುದೇ ಮುಖ್ಯಮಂತ್ರಿಗೂ 5 ವರ್ಷ ನಾನೇ ಮುಖ್ಯಮಂತ್ರಿ ಅಂತಾ ಹೇಳುವ ದುಸ್ಥಿತಿ ಬಂದಿರ್ಲಿಲ್ಲ. 135 ಸೀಟು ಇಟ್ಕೊಂಡು ಕಾಂಗ್ರೆಸ್‌ಗೆ ಈ ರೀತಿ ಹೇಳುವ ದುಸ್ಥಿತಿ ಬರಬಾರದಿತ್ತು. ಮೂರು ದಿನದ ಕೆಳಗೆ ಕಾಂಗ್ರೆಸ್ ನಾಯಕರಾದ ಸುರ್ಜೇವಾಲ, ವೇಣುಗೋಪಾಲ್ ಬೆಂಗಳೂರಿಗೆ ಬಂದಿದ್ರು. ಎಲ್ಲಾ ಶಾಸಕರಿಗೂ ಯಾವುದೇ ರೀತಿಯ ಬಹಿರಂಗ ಹೇಳಿಕೆ ಕೊಡಬಾರದು ಅಂತಾ ಸೂಚನೆ ನೀಡಿದ್ದಾರೆ. ಆದ್ರೆ ಸ್ವತಃ ಮುಖ್ಯಮಂತ್ರಿಗಳೇ ಬಹಿರಂಗವಾಗಿ ಹೇಳಿಕೆ ಕೊಟ್ರು. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅನ್ನೋದು ಕೆಲ ಶಾಸಕರ ಆಸೆ. ಇನ್ನು ಕೆಲವರು ಪ್ರಿಯಾಂಕ ಖರ್ಗೆ, ಪರಮೇಶ್ವರ್ ದಲಿತರು ಮುಖ್ಯಮಂತ್ರಿ ಆಗಬೇಕು ಅಂತಾ ಹೇಳ್ತಾರೆ. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗೋಕೆ ತುದಿಗಾಲಲ್ಲಿ ನಿಂತಿದ್ದಾರೆ. ನನ್ನದೊಂದು ಸಲಹೆ ನಾನು ಪ್ರಧಾನ ಮಂತ್ರಿಗೆ ಪತ್ರ ಬರೆಯಬೇಕೋ ಏನೋ ಗೊತ್ತಿಲ್ಲ. ಒಂದೊಂದು ಜಾತಿಗೆ ಒಂದೊ ಎರಡೋ ಮುಖ್ಯಮಂತ್ರಿ ಕೊಟ್ಟುಬಿಡಿ ಅನ್ನಬೇಕು. ಸಿದ್ದರಾಮಯ್ಯ ಕುರುಬರಿಗೆ, ಒಕ್ಕಲಿಗರಿಗೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಈಶ್ವರಪ್ಪ ವ್ಯಂಗ್ಯ ಮಾಡಿದರು.