Asianet Suvarna News Asianet Suvarna News

ಆರ್ಥಿಕ ಸಚಿವರು ಅಡ್ಡಕಸುಬಿ: ಸಿದ್ದರಾಮಯ್ಯ ಸಿಡಿಮಿಡಿ

ಜಿಡಿಪಿ ಮಹಾ ಕುಸಿತ ಕಂಡಿರುವುದು ಆಘಾತಕಾರಿ ಬೆಳವಣಿ| ಈ ಕುಸಿತದ ಪೂರ್ಣ ಹೊಣೆಯನ್ನು ಕೊರೊನಾ ರೋಗದ ಮೇಲೆ ಹೇರುವ ಮೂಲಕ ಪ್ರಧಾನಿ ಮೋದಿ ತನ್ನ ಜವಾಬ್ದಾರಿಯನ್ನು ನುಣುಚಿಕೊಳ್ಳುವುದು ಇನ್ನೂ ದೊಡ್ಡ ಆಘಾತಕಾರಿ ಬೆಳವಣಿಗೆ| ರೋಗದ ಕಾರಣ ತಿಳಿಯದೆ ಔಷಧಿ ಕೊಟ್ಟರೆ ರೋಗ ಗುಣವಾಗಲಾರದು ಎಂದ ಸಿದ್ದರಾಮಯ್ಯ| 

Former CM Siddaramaiah Talks Over GDP Slump
Author
Bengaluru, First Published Sep 2, 2020, 10:33 AM IST

ಬೆಂಗಳೂರು(ಸೆ.02): ಜಿಡಿಪಿ ಶೇ.23.9ರಷ್ಟು ಕುಸಿತದೊಂದಿಗೆ ದೇಶ ಎದುರಿಸುತ್ತಿರುವ ಈಗಿನ ಆರ್ಥಿಕ ದುಸ್ತಿತಿಗೆ ಅಡ್ಡ ಕಸುಬಿ ಆರ್ಥಿಕ ನಿರ್ವಹಣೆ ಮತ್ತು ಕೆಲಸವೇ ಗೊತ್ತಿಲ್ಲದ ಅಡ್ಡ ಕಸುಬಿ ಸಚಿವರು ಕೂಡ ಕಾರಣ ಎಂದು ಕೇಂದ್ರ ಸರ್ಕಾರದ ದೇಶದ ಜನರ ಮುಂದೆ ತಪ್ಪೊಪ್ಪಿಕೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ದೇಶದ ಜಿಟಿಪಿಯ ಮಹಾ ಕುಸಿತ ಸಂಬಂಧ ಮಂಗಳವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಜಿಡಿಪಿ ಮಹಾ ಕುಸಿತ ಕಂಡಿರುವುದು ಆಘಾತಕಾರಿ ಬೆಳವಣಿಗೆ ನಿಜ. ಆದರೆ, ಈ ಕುಸಿತದ ಪೂರ್ಣ ಹೊಣೆಯನ್ನು ಕೊರೊನಾ ರೋಗದ ಮೇಲೆ ಹೇರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಜವಾಬ್ದಾರಿಯನ್ನು ನುಣುಚಿಕೊಳ್ಳುವುದು ಇನ್ನೂ ದೊಡ್ಡ ಆಘಾತಕಾರಿ ಬೆಳವಣಿಗೆ. ದೇಶ ಎದುರಿಸುತ್ತಿರುವ ಈಗಿನ ಆರ್ಥಿಕ ದುಸ್ಥಿತಿಗೆ ನೋಟು ಅಮಾನ್ಯೀಕರಣ, ದೋಷಪೂರಿತ ಜಿಎಸ್‌ಟಿಯ ಅವೈಜ್ಞಾನಿಕ ಜಾರಿ ಮತ್ತು ಕೆಲಸವೇ ಗೊತ್ತಿಲ್ಲದ ಅಡ್ಡಕಸುಬಿ ಸಚಿವರು ಕೂಡಾ ಕಾರಣ ಎಂದು ಅವರು ದೇಶದ ಮುಂದೆ ಮೊದಲು ತಪ್ಪೊಪ್ಪಿಕೊಳ್ಳಬೇಕು. ರೋಗದ ಕಾರಣ ತಿಳಿಯದೆ ಔಷಧಿ ಕೊಟ್ಟರೆ ರೋಗ ಗುಣವಾಗಲಾರದು ಎಂದು ಹೇಳಿದ್ದಾರೆ.

ಜಿಡಿಪಿ ಮಹಾಕುಸಿತ, 'ದೈವಿಚ್ಛೆ' ಹೇಳಿಕೆಗೆ ಸೋಶಿಯಲ್ ಮೀಡಿಯಾ ಕುಹಕ ಅಬ್ಬಬ್ಬಾ!

ಲಾಕ್‌ಡೌನ್‌ ಅಗತ್ಯವಿತ್ತು ನಿಜ, ನಮ್ಮ ಪಕ್ಷ ಕೂಡಾ ಅದನ್ನು ಬೆಂಬಲಿಸಿತ್ತು. ಆದರೆ ಅವೈಜ್ಞಾನಿಕವಾಗಿ, ದಿನಕ್ಕೊಂದು ರೀತಿಯ ಅನಿಶ್ಚಿತ ನಿರ್ಧಾರಗಳ ಮೂಲಕ ಲಾಕ್‌ ಡೌನ್‌ ಜಾರಿಗೊಳಿಸಿದ್ದ ಪರಿಣಾಮವಾಗಿ ಅದರಿಂದ ಲಾಭವಾಗಲಿಲ್ಲ, ನಷ್ಟವಾಗಿದ್ದೇ ಹೆಚ್ಚು. ಇದರ ಪೂರ್ಣ ಹೊಣೆಯನ್ನು ಪ್ರಧಾನಿಯೇ ವಹಿಸಿಕೊಳ್ಳಬೇಕಾಗುತ್ತದೆ. ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ದೇಶದ ಆರ್ಥಿಕತೆ ರೋಗಗ್ರಸ್ತವಾಗಿದೆ ಎನ್ನವುದನ್ನು ಸರ್ಕಾರದ ಅಧಿಕೃತ ದಾಖಲೆಗಳೇ ಹೇಳುತ್ತಿವೆ. ಆರ್‌ಬಿಐ ಗವರ್ನರ್‌ ಅವರಿಂದ ಹಿಡಿದು ಆರ್ಥಿಕ ಸಲಹೆಗಾರರ ವರೆಗೆ ದೇಶದ ಪ್ರಖ್ಯಾತ ಆರ್ಥಿಕ ತಜ್ಞರೆಲ್ಲರೂ ದೇಶದ ಆರ್ಥಿಕತೆ ಸಾಗುವ ದಾರಿ ಬಗ್ಗೆ ಆತಂಕ ಪಟ್ಟು ಎಚ್ಚರಿಸಿದ್ದಾರೆ. ಆಗ ಕುರುಡು-ಕಿವುಡು ಆಗಿದ್ದ ಸರ್ಕಾರ ಈಗ ಕೊರೊನಾಕ್ಕಾಗಿ ರೋದಿಸುತ್ತಿದೆ’ ಎಂದು ಹೇಳಿದ್ದಾರೆ.
 

Follow Us:
Download App:
  • android
  • ios