'ಮೋದಿ ಎದುರು ಬಿಎಸ್‌ವೈ ಭಿಕ್ಷುಕರಂತೆ ಬೇಡುತ್ತಿದ್ದಾರೆ, ಸಂಸದರು ಯಾವ ಬಿಲ ಸೇರಿದ್ದಾರೆ?'
ರಾಜ್ಯದಲ್ಲಿ ಕೊರೋನಾ ಅವಾಂತರ| ಬೆಂಗಳೂರಿನ ಬೆಡ್ ಬ್ಲಾಕಿಂಗ್ ದಂಧೆ ಬಗ್ಗೆ ಮಾಜಿ ಸಿಎಂ ಟ್ವೀಟ್| ದಂಧೆ ಹಿಂದಿನ ದೊಡ್ಡ ತಿಮಿಂಗಿಲ ರಕ್ಷಿಸಲು ಹುನ್ನಾರವೇ ಎಂದ ಪ್ರಶ್ನೆ
ಬೆಂಗಳೂರು(ಮೇ.05): ದೇಶದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರಿಸುತ್ತಿದ್ದು, ಸೋಂಕಿತರ ಸಂಖ್ಯೆ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಇತ್ತ ಕರ್ನಾಟಕದಲ್ಲೂ ಸೋಂಕಿಉತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಮಹಾಮಾರಿಗೆ ಬಲಿಯಾಗುತ್ತಿರುವವರ ಸಂಖ್ಯೆ ರಾಜ್ಯ ಸರ್ಕಾರವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ನಡುವೆ ಆಕ್ಸಿಜನ್, ಔಷಧ, ಆಸ್ಪತ್ರೆ ಹೀಗೆ ಆರೋಗ್ಯ ಸೌಲಭ್ಯಗಳ ಕೊರತೆಯೂ ಕಂಡು ಬಂದಿದ್ದು, ರಾಜ್ಯ ಸರ್ಕಾರ ಇವುಗಳ ಪೂರೈಕೆಗಾಗಿ ಕೇಂದ್ರದ ಮೊರೆ ಹೋಗಿದೆ. ಹೀಗಿರುವಾಗ ರಾಜ್ಯದ ಈ ಪರಿಸ್ಥಿತಿ ಬಗ್ಗೆ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದು, ಮೌನ ವಹಿಸಿರುವ ಸಂಸದರು ಹಾಗೂ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.
ಹೌದು ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಬೆಡ್ ಬ್ಲಾಕಿಂಗ್ ದಂಧೆ, ಕೇಂದ್ರದ ಧೋರಣೆ ಹೀಗೆ ಎಲ್ಲಾ ವಿಚಾರಗಳ ಕುರಿತು ಉಲ್ಲೇಖಿಸಿದ್ದಾರೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಬೆಡ್ ಬ್ಲಾಕಿಂಗ್ ದಂಧೆಯ ಗುಪ್ತ ಕಾರ್ಯಾಚರಣೆ ವಿಚಾರವಾಗಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಅಧಿಕಾರಿಗಳ ವಿರುದ್ಧ ಮಾಡಬೇಕಾಗಿದ್ದು, ಸಚಿವರು ಹಾಗೂ ಮುಖ್ಯಮಂತ್ರಿಗಳ ವಿರುದ್ಧ. ಇಂತಹ ಕಾರ್ಯಾಚರಣೆಯಿಂದ ದೊಡ್ಡ ತಿಮಿಂಗಿಲಗಳನ್ನು ರಕ್ಷಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಇನ್ನು ಇಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ನಾನು ಈ ಹಿಂದೆ ಸಲ್ಲಿಸಿದ ದಾಖಲೆ ಹಾಗೂ ಗುಪ್ತ ಕಾರ್ಯಾಚರಣೆಯ ದಾಖಲೆಯನ್ನು ಸೇರಿಸಿ ಈ ಪ್ರಕರಣದ ನ್ಯಾಯಾಂಗ ತನಿಖೆ ನಡೆಸಲೂ ಮನವಿ ಮಾಡಿದ್ದಾರೆ. ಅಲ್ಲದೇ ಈ ದಂಧೆ ಗಮನಕ್ಕೆ ಬಂದು ಹತ್ತು ದಿನಗಳ ಬಳಿಕ ಬಹಿರಂಗಪಡಿಸಿದ್ದಕ್ಕೆ ಕಿಡಿ ಕಾರಿದ್ದಾರೆ.
ಈ ಟ್ವೀಟ್‌ಗಳಲ್ಲಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಿಡಿ ಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಬೆಡ್ ಬ್ಲಾಕಿಂಗ್ ದಂಧೆ ವಿಚಾರದಲ್ಲಿ ಜಾತಿ-ಧರ್ಮ ಎಳೆದು ತಂದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಮು ವಿಚಾರ ಪ್ರಸ್ತಾಪಿಸಿರುವ ತೇಜಸ್ವಿ ಸೂರ್ಯ ಅವರೇ ಈ ದಂಧೆ ಹಿಂದಿನ ಮುಖ್ಯ ಆರೋಪಿಗಳಾದ ಸಿಎಂ ಹಾಗೂ ಸಚಿವರು ಯಾವ ಧರ್ಮದವರು? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಇನ್ನು ಕೊರೋನಾ ನಿರ್ವಹಣೆಯಲ್ಲಿ ಕೇಂದ್ರ ತೋರುತ್ತಿರುವ ಅಸಡ್ಡೆ ಬಗ್ಗೆಯೂ ಉಲ್ಲೇಖಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ, ಸಂಸದರ ಮೌನದ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಕೊರೊನಾ ರೋಗಿಗಳಿಗೆ ಬೆಡ್ ಕೊಡಿ, ವೆಂಟಿಲೇಟರ್ ಕೊಡಿ, ಆಕ್ಸಿಜನ್ ಕೊಡಿ ಎಂದು ಸಿಎಂ ಯಡಿಯೂರಪ್ಪ ಭಿಕ್ಷುಕರ ರೀತಿ ಪ್ರಧಾನಿಯನ್ನು ಬೇಡುತ್ತಿದ್ದಾರೆ. ರಾಜ್ಯದ 25 ಬಿಜೆಪಿ ಸಂಸದರು ಯಾವ ಬಿಲ ಸೇರಿದ್ದಾರೆ? ಎಂದು ನೇರ ವಾಗ್ದಾಳಿ ನಡೆಸಿದ್ದಾರೆ