ಬಾಗಲಕೋಟೆ (ಅ.31): ಟಿಪ್ಪು ಸುಲ್ತಾನ್‌ ಇತಿಹಾಸವನ್ನು ಪಠ್ಯದಿಂದ ಕೈಬಿಡುವ ರಾಜ್ಯ ಸರ್ಕಾರದ ನಿಲುವಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಟಿಪ್ಪು ವಿಚಾರವನ್ನು ಪಠ್ಯದಿಂದ ಕೈಬಿಟ್ಟರೆ ಇತಿಹಾಸ ತಿರುಚಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜಮಖಂಡಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸತ್ಯವನ್ನು ಬದಲಾಯಿಸಲು ಬಿಡಬಾರದು. ಇತಿಹಾಸ ತಿರುಚುವ ಕೆಲಸಕ್ಕೆ ಯಾರೂ ಹೋಗಬಾರದು. ಇತಿಹಾಸದಿಂದ ಮಕ್ಕಳು ಪಾಠ ಕಲಿಯಬೇಕು. ಟಿಪ್ಪು ಸುಲ್ತಾನ್‌ ಮತಾಂಧನಾಗಿದ್ದ ಎಂದು ಕರೆಯುವ ಬಿಜೆಪಿಯವರೇ ಮತಾಂಧರು ಎಂದು ಇದೇ ವೇಳೆ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಟಿಪ್ಪು ಸುಲ್ತಾನ್: ಹೆಸರು ಬದಲಾವಣೆಗೆ ವಿರೋಧ

ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ

 ಬೀಳಗಿ: ಟಿಪ್ಪು ಸುಲ್ತಾನ ಪಾಠವನ್ನು ಪಠ್ಯದಿಂದ ತೆಗೆಯುವುದು ಒಳ್ಳೆಯದಲ್ಲ. ಇದರಿಂದ ಇತಿಹಾಸ ತಿರುಚಿದಂತಾಗುವುದು. ಟಿಪ್ಪು ಸುಲ್ತಾನನು ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಇಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ರಾಜ್ಯ ಬಿಜೆಪಿ ಸರ್ಕಾರ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ ಪಾಠ ತೆಗೆದು ಹಾಕುವುದು ಅಲ್ಪಸಂಖ್ಯಾತರಿಗೆ ಅಷ್ಟೇ ಅಲ್ಲ ಸಮಸ್ತ ಕನ್ನಡ ನಾಡಿನ ಜನತೆಗೆ ಮಾಡಿದ ಅವಮಾನ ಎಂದು ಕೆಪಿಸಿಸಿ ಕಾರ್ಯದರ್ಶಿ ಎಂ ಎನ್‌ ಪಾಟೀಲ ತಿಳಿಸಿದರು.

ಸುದ್ದಿಗಾರರೊಂದಿಗೆ ಬುಧವಾರ ಈ ವಿಷಯ ಮಾತನಾಡಿದ ಅವರು, ಈ ಬಿಜೆಪಿ ಸರ್ಕಾರ ಅನಾವಶ್ಯಕ ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಈ ಹಿಂದೆ ಹೊರಡಿಸಿರುವ 7ನೇ ತರಗತಿಯ ಪಬ್ಲಿಕ್‌ ಪರೀಕ್ಷೆ ನಡೆಸುವುದು ಅವೈಜ್ಞಾನಿಕ ಕ್ರಮವೆಂದು ಹಿಂದೆ ಇದನ್ನು ಜಾರಿಗೆ ತಂದಾಗ ಸರ್ಕಾರಕ್ಕೆ ಮನವರಿಕೆಯಾಗಿದೆ. ಇದನ್ನು ಮತ್ತೊಮ್ಮೆ ಜಾರಿಗೆ ತಂದಿದೆ. ಇದರ ಪರಿಣಾಮ ಆದರೆ 7ನೇ ವರ್ಗದಲ್ಲಿ ಅನುತ್ತೀರ್ಣವಾಗಿ ಶಾಲೆ ಬಿಡುವು ಮಕ್ಕಳ ಸಂಖ್ಯೆ ಹೆಚ್ಚುವುದಲ್ಲದೆ, ತಂದೆ ತಾಯಿಗಳ ಅವರನ್ನು ಧನ ಕರು ಕಾಯಲು, ಕೂಲಿ ಕೆಲಸಕ್ಕೆ ಕಳುಹಿಸಲು ಅಥವಾ ಮನೆ ಕೆಲಸಗಳಲ್ಲಿ ಸಹಾಯಕ್ಕಾಗಿ ಬಳಸಿಕೊಂಡಿರುವ ಉದಾಹರಣೆ ಬಹಳಷ್ಟಿರುವಾಗ ಮತ್ತು ಇಂತಹ ಕ್ರಮ ಕೈಗೊಳ್ಳುವುದು ಅವೈಜ್ಞಾನಿಕ ಎಂದರು.

ಮೈಸೂರು ಹುಲಿ ಅಧ್ಯಾಯ ಅಂತ್ಯ: ಬಿಜೆಪಿ, ಕೈ ನಡುವೆ ಮಾತಿನ ಯುದ್ಧ

ನಮ್ಮ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರು ಹಿಂದುಳಿದ ಸಮಾಜದಲ್ಲಿ ಹುಟ್ಟಿಬೆಳೆದಿರುವ ಕಾರಣ ಅವರಿಗೆ ಇದರ ಅನುಭವ ಜಾಸ್ತಿ ಇದ್ದು, ದಯವಿಟ್ಟು ಅವರು ಈ ಕ್ರಮದ ಕುರಿತು ಮುಖ್ಯ ಮಂತ್ರಿಗಳಿಗೆ ಮತ್ತು ಶಿಕ್ಷಣ ಮಂತ್ರಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ.

ಟಿಪ್ಪು ಪಠ್ಯ ರದ್ದು ಹೇಳಿಕೆ: ಕೊಡಗಿನಲ್ಲಿ ಸ್ವಾಗತ

ಮಡಿಕೇರಿ: ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಘೋಷಿಸಿದ್ದ ಟಿಪ್ಪು ಜಯಂತಿ ಜಿಲ್ಲೆ ಒಳಗೊಂಡಂತೆ ಇಡೀ ರಾಜ್ಯದಾದ್ಯಂತ ವಿವಾದ ಹಾಗೂ ಹಿಂಸಾತ್ಮಕ ಕೃತ್ಯಗಳಿಗೆ ಕಾರಣವಾಗಿತ್ತು. ಇದೀಗ ಶಾಲಾ ಪಠ್ಯಪುಸ್ತಕದಲ್ಲಿ ಇರುವ ಟಿಪ್ಪು ಸುಲ್ತಾನ್‌ ಕುರಿತ ಪಾಠವನ್ನು ತೆಗೆದು ಹಾಕಲು ಸಿಎಂ ಬಿ.ಎಸ್‌.ಯಡಿಯೂರಪ್ಪ ಸಮ್ಮತಿ ಹಾಗೂ ನಿರ್ಧಾರ ಮಾಡಿರುವುದಕ್ಕೆ ಶಾಸಕರು ಮತ್ತು ಸ್ಥಳೀಯರು ಪ್ರತಿ​ಕ್ರಿಯೆ ನೀಡಿದ್ದು, ಬಹು​ತೇ​ಕರು ನಿರ್ಧಾ​ರ​ವನ್ನು ಸ್ವಾಗ​ತಿ​ಸಿ​ದ್ದಾ​ರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಟಿಪ್ಪು ಜಯಂತಿಯನ್ನು ನಮ್ಮೆಲ್ಲರ ಮನವಿ ಮೇರೆಗೆ ರಾಜ್ಯ ಸರ್ಕಾರ ರದ್ದು ಮಾಡಿದೆ. 7ನೇ ತರಗತಿಯ ಪಠ್ಯಪುಸ್ತಕದಲ್ಲಿ ಟಿಪ್ಪುವಿನ ಇತಿಹಾಸ ಇತ್ತು. ಅದನ್ನು ತೆಗೆಯಲು ಶಾಸಕ ಅಪ್ಪಚ್ಚು ರಂಜನ್‌ ಮನವಿ ಮಾಡಿದ್ದರು. ಸರ್ಕಾರ ಅದಕ್ಕೆ ತಕ್ಷಣ ಸ್ಪಂದಿಸುವ ಕೆಲಸ ಮಾಡಿರುವುದು ಸ್ವಾಗತಾರ್ಹ ಎಂದರು.

ಟಿಪ್ಪು ಸುಲ್ತಾನ್‌ ನಾಡಿನ ಬಗ್ಗೆ ಆಭಿಮಾನ ಇಟ್ಟವನೂ ಕೂಡ ಅಲ್ಲ. ಪುಸ್ತಕದಲ್ಲಿ ಬಿಂಬಿಸಿದ ಹಾಗೆ ಸ್ವಾತಂತ್ರ್ಯ ಹೋರಾಟಗಾರ ಅಲ್ಲ. ಆತ ಕೊಡವರು ಸೇರಿದಂತೆ, ಕ್ರೈಸ್ತರಿಗೆ ಸಾಕಷ್ಟುತೊಂದರೆ ಕೊಟ್ಟಿದ್ದಾನೆ. ಟಿಪ್ಪು ದರೋಡೆ ಮಾಡಿದ್ದಾನೆ ಹಾಗೂ ದೇವಾಲಯಗಳನ್ನು ನಾಶ ಮಾಡಿದ್ದಾನೆ ಎಂದ​ರು.

ಟಿಪ್ಪು ಸುಲ್ತಾ​ನ್‌ ರಾಜ್ಯ ಉಳಿಸಿಕೊಳ್ಳಲು ಹೋರಾಟ ಮಾಡಿದ್ದಾನೆ ಅಷ್ಟೆ. ಮತಾಂಧ ಟಿಪ್ಪುವಿನ ಇತಿಹಾಸ ಪಠ್ಯ ಪುಸ್ತಕದಲ್ಲಿರಲು ಅರ್ಹನಲ್ಲ. ನಮಗೂ ಕೂಡ ಟಿಪ್ಪು ‘ಮೈಸೂರ ಹುಲಿ’ ಅಂತ ಪಠ್ಯ ಪುಸ್ತಕದಲ್ಲಿತ್ತು. ಅಂತಹ ಟಿಪ್ಪು ಇತಿಹಾಸ ಮಕ್ಕಳಿಗೆ ಕಲಿಸಿದರೆ ಮಕ್ಕಳ ಭವಿಷ್ಯ ಏನಾಗಬಹುದು ಎಂದು ಬೋಪಯ್ಯ ಟಿಪ್ಪು ಇತಿಹಾಸವನ್ನು ಪಠ್ಯ ಪುಸ್ತಕದಿಂದ ತೆಗೆಯುವ ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಪ್ರತಿಕ್ರಿಯಿಸಿ, ಸಿಎಂ ಯಡಿಯೂರಪ್ಪ ನಿರ್ಧಾರವನ್ನು ಕೊಡವರು ಸ್ವಾಗತಿಸುತ್ತೇವೆ. ಟಿಪ್ಪು ಕೊಡವ ಸಮುದಾಯದ ಮೇಲೆ ದೌರ್ಜನ್ಯ ಮಾಡಿದ ದುರುಳ. ಆತನ ಬಗ್ಗೆ ಪಠ್ಯಪುಸ್ತಕದಲ್ಲಿ ವೈಭ​ವೀ​ಕ​ರಿ​ಸಿ​ದ್ದಕ್ಕೆ ನಮ್ಮ ವಿರೋಧ ಇತ್ತು. ಸದ್ಯ ಸರ್ಕಾರ ಆತನ ಇತಿಹಾಸವನ್ನು ಪುಸ್ತಕದಿಂದ ತೆಗೆಯಲು ಮುಂದಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ನಾವು ಶ್ಲಾಘಿಸಿ ಸ್ವಾಗತಿಸುತ್ತೇವೆ ಎಂದಿದ್ದಾರೆ.

ಟಿಪ್ಪು ಓರ್ವ ಮಾತಂಧ, ಕೊಲೆಗಡುಕ, ಹೇಡಿ. ಆತನ ಪರಾಕ್ರಮ ಏನೂ ಇಲ್ಲ.ಆತನಿಂದ ದೌರ್ಜನ್ಯಕ್ಕೆ ಒಳಗಾದವರ ಮಕ್ಕಳು ಆತನ ಇತಿಹಾಸ ಓದುವುದಿಲ್ಲ. ಪಠ್ಯಪುಸ್ತಕದಿಂದ ಆತನ ಇತಿಹಾಸ ತೆಗೆಯಲು ಮುಂದಾಗಿರುವುದು ಒಳ್ಳೆಯದು ಎಂದು ಸಾಮಾಜಿಕ ಯುವ ಹೋರಾಟಗಾರ ಸತ್ಯ ತಿಳಿಸಿದ್ದಾರೆ.