ಬೆಂಗಳೂರು :  ಸಚಿವ ಕೃಷ್ಣ ಭೈರೇಗೌಡರ ಮನವಿಯಂತೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಕ್ಕೂರ್ ವಾರ್ಡ್ ಬೆಳ್ಳಹಳ್ಳಿ ಸರ್ಕಲ್ ಗೆ ಟಿಪ್ಪು ಸರ್ಕಲ್ ಎಂದು ನಾಮಕರಣ ಮಾಡಿದರೆ ಸಚಿವರ ಮನೆಗೆ ಮುತ್ತಿಗೆ ಹಾಕುವುದಾಗಿ  ಬಿಜೆಪಿ ಮುಖಂಡರು ಎಚ್ಚರಿಕೆ ನೀಡಿದ್ದಾರೆ. 

ಬೆಟ್ಟಹಳ್ಳಿ ಸರ್ಕಲ್ ಗೆ ಟಿಪ್ಪು ಹೆಸರು ನಾಮಕರಣ ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ್ದು, ಯಲಹಂಕ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದರು.  ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಎ.ರವಿ ಹೆಸರು ಬದಲಾದಲ್ಲಿ ಸೂಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಬೆಳ್ಳಳ್ಳಿ ಸರ್ಕಲ್ ಅನ್ನು ಟಿಪ್ಪು ಸರ್ಕಲ್ ಎಂದು ಬದಲಾಯಿಸಲು ಸ್ಥಳೀಯ ಶಾಸಕ ಹಾಗೂ ಸಚಿವರಾಗಿರುವ ಕೃಷ್ಣ ಬೈರೇಗೌಡರು ಪಾಲಿಕೆಗೆ ಪತ್ರ ಬರೆದಿದ್ದಾರೆ. ಆದರೆ ವೋಟ್ ಬ್ಯಾಂಕಿಂಗ್ ಗೋಸ್ಕರ ಸಚಿವರು ಈ ರೀತಿ ಮಾಡುತ್ತಿದ್ದಾರೆ. 

ಹಿಂದೂ ವಿರೋಧಿ, ನರಹಂತಕ ಟಿಪ್ಪುವಿನ ಹೆಸರನ್ನು ಇಡುವ ಬದಲು ಹೆಬ್ಬಾಳ, ಯಲಹಂಕ ಅಭಿವೃದ್ಧಿಗೆ ಶ್ರಮಿಸಿದ ಬಿ.ಬಸವಲಿಂಗಪ್ಪ ಹೆಸರನ್ನು ನಾಮಕರಣ ಮಾಡಬೇಕೆಂದು ಪ್ರತಿಭಟನಾಕಾರರು ಈ ವೇಳೆ ಆಗ್ರಹಿಸಿದರು.
  
ಈಗಾಗಲೇ ಟಿಪ್ಪು ನಾಮಕರಣ ವಿಚಾರವಾಗಿ ಫ್ಲೆಕ್ಸ್ ಹಾಕಿರುವುದನ್ನೂ ವಿರೋಧಿಸಿದ್ದು, ಸ್ಥಳೀಯ ಶಾಸಕ ಹಾಗೂ ಸಚಿವ ಕೃಷ್ಣ ಬೈರೇಗೌಡ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈಗಾಗಲೇ ಅನೇಕ ರಸ್ತೆಗಳಿಗೆ ಹೆಸರು ಬದಲಾವಣೆಗೆ ಪ್ರಸ್ತಾಪವಿದ್ದು, ಸಾಕಷ್ಟು ರೀತಿಯಲ್ಲಿ ವಿರೋಧ ವ್ಯಕ್ತವಾಗಿದೆ. ಇದೀಗ ಈ ಸಾಲಿಗೆ ಬೆಳ್ಳಹಳ್ಳಿ ಕ್ರಾಸ್ ಕೂಡ ಸೇರಿದಂತಾಗಿದೆ.