ಡಬಲ್‌ ಎಂಜಿನ್‌ ಸರ್ಕಾರವು ದಕ್ಷಿಣದ ರಾಜ್ಯಗಳ ಜತೆ ಡಬಲ್‌ ಗೇಮ್‌ ಆಡುತ್ತಿದೆ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು(ಏ.11): ಕೆಎಂಎಫ್‌ ಆಪೋಶನಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಮೂರನೇ ಸಂಚು ರೂಪಿಸಿದೆ ಎಂದು ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, 2008ರಲ್ಲಿಯೇ ನಂದಿನಿಯನ್ನು ಮುಗಿಸಲು ಬಿಜೆಪಿ ಹೊರಟಿತ್ತು ಎಂದು ಹೇಳಿದ್ದಾರೆ.

ಪ್ರತಿಯೊಂದನ್ನು ಪ್ರಶ್ನಿಸುವ, ನ್ಯಾಯ ಕೇಳುವ ಕನ್ನಡಿಗರನ್ನು ದುರ್ಬಲಗೊಳಿಸುವುದು ಎಂದರೆ ಆರ್ಥಿಕವಾಗಿ ಕರ್ನಾಟಕದ ಬೆನ್ನುಮೂಳೆ ಮುರಿಯುವುದು. ಉತ್ತರಕ್ಕೆ ಬೆಣ್ಣೆ, ದಕ್ಷಿಣಕ್ಕೆ ಸುಣ್ಣ ಎಂಬ ನೀತಿ ಅನುಸರಿಸುವ ಬಿಜೆಪಿ ಡಬಲ್‌ ಎಂಜಿನ್‌ ಸರ್ಕಾರವು ದಕ್ಷಿಣದ ರಾಜ್ಯಗಳ ಜತೆ ಡಬಲ್‌ ಗೇಮ್‌ ಆಡುತ್ತಿದೆ. ಇಂದು ಕರ್ನಾಟಕ, ನಾಳೆ ತಮಿಳುನಾಡು, ನಾಡಿದ್ದು ಆಂಧ್ರಪ್ರದೇಶ ಮತ್ತು ತೆಲಂಗಾಣ, ಆಚೆ ನಾಡಿದ್ದು ಕೇರಳ! ಬಿಜೆಪಿಯ ಸುಪಾರಿ ಆಟ ಶುರುವಾಗಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ನಂದಿನಿ ರಾಜ್ಯದ ರೈತರ ಬದುಕಿನ ಪ್ರಶ್ನೆ: ನಂದಿನಿ ಉತ್ಪನ್ನ ಖರೀದಿಸಿ ರೈತರನ್ನು ಉಳಿಸಿ: ಡಿಕೆಶಿ

ಕರ್ನಾಟಕವನ್ನು ಗುಜರಾತಿಗಳಿಗೆ ಒತ್ತೆ ಇಡುವ ಪಾಪದ ಕೆಲಸವನ್ನಂತೂ ನಾವು ಮಾಡುತ್ತಿಲ್ಲ. ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗಲೇ ಕೆಎಂಎಫ್‌ ಮುಗಿಸಲು ಸುಪಾರಿ ಕೊಡಲಾಗಿತ್ತು. 2008ರಲ್ಲಿಯೇ ಕನ್ನಡಿಗರ ಮೇಲೆ ಅಮುಲ್‌ ಹೇರಿ ನಂದಿನಿಯ ಕತ್ತು ಹಿಸುಕುವ ಕರಾಳ ಪ್ರಯತ್ನ ನಡೆದಿತ್ತು. ಆಗ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಅಮುಲ್‌ ಮಾರಾಟ ಘಟಕ ಸ್ಥಾಪಿಸಲು ಹೊರಟಿತ್ತು ಅಂದಿನ ರಾಜ್ಯ ಬಿಜೆಪಿ ಸರ್ಕಾರ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಕರ್ನಾಟಕವನ್ನು ಗುಜರಾತಿನ ವಸಾಹತು ಮಾಡುವ ಬಿಜೆಪಿ ಹುನ್ನಾರ ಇಂದು ನಿನ್ನೆಯದಲ್ಲ. ವೈಬ್ರೆಂಟ್‌ ಗುಜರಾತಿನ ಮಹಾತ್ವಕಾಂಕ್ಷೆಯ ಹಿಂದೆಯೇ ಕರ್ನಾಟಕವನ್ನು ಕೆಳಕ್ಕೆ ಕೆಡಹುವ ಬಿಜೆಪಿಯ ಧೂರ್ತ ಅಜೆಂಡಾ ಈ ಚುನಾವಣೆ ಹೊತ್ತಿನಲ್ಲಿ ಬಟಾಬಯಲಾಗಿದೆ. 15 ವರ್ಷಗಳ ಹಳೆಯ ಸಂಚಿಗೆ ಮತ್ತೆ ಜೀವ ನೀಡಲಾಗಿದೆ. ಕರ್ನಾಟಕದ ಬ್ಯಾಂಕ್‌ಗಳು ಹೋದವು. ಭದ್ರಾವತಿಯ ವಿಎಸ್‌ಎನ್‌ಎಲ್‌ ಇನ್ನೇನು ಯಾರೋ ಗುಜರಾತಿ ಉದ್ದಿಮೆದಾರನ ಪಾಲಾಗುವ ಹಂತದಲ್ಲಿದೆ. ಈಗ ನಂದಿನಿ. ಲಾಭದಾಯಕವಾಗಿರುವ ರಾಜ್ಯದ ಒಂದೊಂದೇ ಉದ್ಯಮವನ್ನು ಮುಗಿಸಲು ಬಿಜೆಪಿ ಹೊಂಚು ಹಾಕಿರುವುದು ಸ್ಪಷ್ಟ ಎಂದು ಕುಮಾರಸ್ವಾಮಿ ಟ್ವೀಟ್‌ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.