ಕೈಲಾಗದಿದ್ದರೆ ಅಧಿಕಾರ ಬಿಟ್ಟು ತೊಲಗಿ: ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ಎಚ್‌ಡಿಕೆ

* ಕೋವಿಡ್‌ ನಿಭಾಯಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳೆರಡೂ ವಿಫಲ
* ಅತಿ ಹೆಚ್ಚು ಕೋವಿಡ್‌ ಪ್ರಕರಣಗಳಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮುಂದಿದೆ
* ಅತಿ ಹೆಚ್ಚು ಸೋಂಕು ಪ್ರಕರಣಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮುಂದು

Former CM HD Kumaraswamy Slams BJP Government grg

ಬೆಂಗಳೂರು(ಮೇ.14): ಬಿಜೆಪಿ ನಾಯಕರು ಕೈಲಾಗದ ಮಾತುಗಳನ್ನ ಬಿಡಿ. ಜನರನ್ನು ಮತ್ತಷ್ಟು ನಿರಾಶರನ್ನಾಗಿಸಬೇಡಿ. ಜನರ ಆರೋಗ್ಯ, ಜೀವ ಮುಖ್ಯ. ಅದಕ್ಕಾಗಿ ಸಕಲವನ್ನೂ ಮಾಡಿ. ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಂಸದರು, ಸಚಿವರು ಶ್ರೀಕೃಷ್ಣನ ಮಾತುಗಳನ್ನು ನೆನಪಿಸಿಕೊಳ್ಳಿ. 'ನಿಮ್ಮ ಕರ್ತ್ಯವ್ಯ ನೀವು ಮಾಡಿ.' ಈ ಮೂಲಕ ರಾಜ್ಯಕ್ಕೆ ಬರಬೇಕಾದ್ದನ್ನು ತನ್ನಿ ಎಂದು ಬಿಜೆಪಿ ನಾಯಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಇಂದು(ಶುಕ್ರವಾರ) ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಸರಣಿ ಟ್ವೀಟ್‌ ಮಾಡುವ ಮೂಲಕ ರಾಜ್ಯ ಹಾಗೂ ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

 

ಕೇರಳ, ಆಂಧ್ರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ, ದೆಹಲಿಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಬರುತ್ತಿದೆ. ಕೋವಿಡ್‌ ಪರಿಸ್ಥಿತಿ ನಿಭಾಯಿಸುವ ವೇಳೆ ಜನರಿಗೆ ಆದ ತೊಂದರೆಗೆ ಈ ರಾಜ್ಯಗಳಲ್ಲಿ ಪರಿಹಾರಗಳನ್ನೂ ನೀಡಲಾಗಿದೆ. ಜನರಿಗೆ ಉಚಿತ ಆಹಾರ, ಆರೋಗ್ಯ ಸೇವೆ ನೀಡಲಾಗಿದೆ. ಜನರೆಡೆಗೆ ಪ್ರಾದೇಶಿಕ ಪಕ್ಷಗಳಿಗೆ ಇರುವ ಬದ್ಧತೆಗೆ ಇದು ಸಾಕ್ಷಿ ಎಂದು ತಿಳಿಸಿದ್ದಾರೆ.

 

ಸರ್ಕಾರದ ನಡವಳಿಕೆ ಬಗ್ಗೆ ಕೋರ್ಟ್ ಮಾತ್ರವಲ್ಲ, ಜನ ಸಾಮಾನ್ಯರಲ್ಲೂ ಆಕ್ರೋಶ: ಎಚ್‌ಡಿಕೆ

ಪರಸ್ಪರ ಗೂಬೆ ಕೂರಿಸುವುದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಖಯಾಲಿ. ಇದನ್ನು ಅರಿತೇ ಜನ ಪ್ರಾದೇಶಿಕ ಪಕ್ಷಗಳಿಗೆ ಮಣೆ ಹಾಕುತ್ತಿದ್ದಾರೆ. ಕೋವಿಡ್‌ ನಿಭಾಯಿಸುವಲ್ಲಿ ಪ್ರಾದೇಶಿಕ ಪಕ್ಷಗಳ ಸರ್ಕಾರವಿರುವ ರಾಜ್ಯಗಳು ಯಶಸ್ವಿಯಾಗಿವೆ. ಜನರಿಗೆ ಸವಲತ್ತು ನೀಡುತ್ತಿವೆ. ಆದರೆ, ರಾಷ್ಟ್ರೀಯ ಪಕ್ಷಗಳ ಸರ್ಕಾರಗಳಿರುವೆಡೆ ಅಂಥ ಬದ್ಧತೆ ಕಾಣುತ್ತಿಲ್ಲ ಎಂದು ಕಾಂಗ್ರೆಸ್‌ ಹಾಗೂ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

 

ಅಸಮರ್ಥತೆ ಮುಚ್ಚಿಕೊಳ್ಳಲು ಬಿಜೆಪಿ ನಾಯಕರು ಈಗ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಕೈಲಾಗದ ಮಾತಾಡುತ್ತಿದ್ದಾರೆ. ವಿರೋಧ ಪಕ್ಷಗಳನ್ನು ಟೀಕಿಸುತ್ತಿದ್ದಾರೆ. ಭೂ ಕೈಲಾಸ ಸೃಷ್ಟಿಸುವ ಬಿಜೆಪಿ ಮಾತು ನಂಬಿ ಜನ ಅಧಿಕಾರ ನೀಡಿದ್ದಾರೆ. ಜನರ ಆಶಯಕ್ಕೆ ತಕ್ಕಂತೆ ಬಿಜೆಪಿ ನಡೆದುಕೊಳ್ಳಬೇಕು. ಕೈಲಾಗದಿದ್ದರೆ ಅಧಿಕಾರ ಬಿಟ್ಟು ತೊಲಗಬೇಕು ಎಂದು ಖಾರವಾಗಿ ಟೀಕಿಸಿದ್ದಾರೆ.

 

ಕೋವಿಡ್‌ ನಿಭಾಯಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳೆರಡೂ ವಿಫಲವಾಗಿವೆ. ಅತಿ ಹೆಚ್ಚು ಕೋವಿಡ್‌ ಪ್ರಕರಣಗಳಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮುಂದಿದೆ. ಕೇಂದ್ರ ಕೋವಿಡ್‌ ಅನ್ನು ಅಸಮರ್ಪಕವಾಗಿ ನಿರ್ವಹಿಸಿದ್ದೇ ಇದಕ್ಕೆ ಕಾರಣ. ಅತಿ ಹೆಚ್ಚು ಸೋಂಕು ಪ್ರಕರಣಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮುಂದಿದೆ. ಇದು ರಾಜ್ಯ ಸರ್ಕಾರದ ಅಸಮರ್ಥತೆ ಎಂದು ಹೇಳಿದ್ದಾರೆ. 

 

'ಅವರು ಅಷ್ಟು ವರ್ಷ ಅಧಿಕಾರ ಮಾಡಿದರು, ಇವರು ಅಷ್ಟು ವರ್ಷ ತಿಂದರು', ಎಂದು ದೂಷಿಸಿಕೊಂಡೇ ಅಧಿಕಾರಕ್ಕೆ ಬಂದ ಬಿಜೆಪಿ ಈಗ ಹೊಣೆಗೇಡಿತನ ಪ್ರದರ್ಶಿಸುತ್ತಿದೆ. ಪ್ರತಿಯೊಂದಕ್ಕೂ ವಿರೋಧ ಪಕ್ಷಗಳನ್ನು ದೂಷಿಸುವ ಬಿಜೆಪಿಗೆ ಅಧಿಕಾರವೇಕೆ? 'ಕೊಟ್ಟ ಕುದುರೆಯನ್ನು ಏರಲಾಗದವನು ಧೀರನೂ ಅಲ್ಲ, ಶೂರನೂ ಅಲ್ಲ,' ಎಂಬ ಮಾತು ಬಿಜೆಪಿಗೆ ಹೊಂದುವಂಥದ್ದು ಎಂದು ಹೇಳಿದ್ದಾರೆ.

 

-ನಾವೇನ್‌ ನೋಟ್‌ ಪ್ರಿಂಟ್‌ ಮಾಡ್ತೀವಾ?
-ಜಡ್ಜ್‌ಗಳು ಸರ್ವಜ್ಞರಲ್ಲ. ಕೊರೊನಾ ವೈರಸ್‌ಗಾಗಿ ಚೀನಾವನ್ನು ದೂಷಿಸಬೇಕು
-ನೇಣು ಹಾಕಿಕೊಳ್ಳಲು ಆಗುತ್ತಾ?
-ಕೋವಿಡ್‌ ಪ್ಯಾಕೇಜ್‌ ಕೊಡಲು ಆಗಲ್ಲ
-ದೇಶದ ದುಸ್ಥಿತಿಗೆ ವಿರೋಧ ಪಕ್ಷಗಳು ಕಾರಣ.
ಧರೆಗೆ ಸ್ವರ್ಗ ಇಳಿಸುವ ಭರವಸೆಯೊಂದಿಗೆ ಅಧಿಕಾರ ಹಿಡಿದ ಬಿಜೆಪಿಯ ಅಸಮರ್ಥರ ಕೈಲಾಗದ ಮಾತುಗಳಿವು ಎಂದು ಬಿಜೆಪಿ ವಿರುದ್ಧ ಎಚ್‌ಡಿಕೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios