Asianet Suvarna News Asianet Suvarna News

ಕಾಂಗ್ರೆಸ್‌–ಬಿಜೆಪಿಗಳೆರಡೂ ಶೋಷಣೆ ಪರ ನಿಂತಿವೆ: ರಾಷ್ಟ್ರೀಯ ಪಕ್ಷಗಳ ವಿರುದ್ಧ ಹರಿಹಾಯ್ದ HDK

* ಕಾಂಗ್ರೆಸ್‌ ಹೋರಾಡುತ್ತಿರುವುದು ಬೆಲೆ ಇಳಿಸಲೋ, ಪೆಟ್ರೋಲ್‌ ಅನ್ನು GSTಗೆ ಸೇರಿಸಲೋ? 
* ಮೂಲಕ ಬೆಲೆ ಏರಿಕೆ ತಗ್ಗಿಸಬೇಕು ಎಂಬುದು ಜೆಡಿಎಸ್‌ ಒತ್ತಾಯ
* ಪೆಟ್ರೋಲನ್ನು ಜಿಎಸ್‌ಟಿಗೆ ಸೇರಿಸುವ ರಾಷ್ಟ್ರೀಯ ಪಕ್ಷಗಳ ಹುನ್ನಾರದ ವಿರುದ್ಧ ಹೋರಾಟ ನಮ್ಮ ನಿಲುವು

Former CM HD Kumaraswamy Slams BJP Congress grg
Author
Bengaluru, First Published Jun 13, 2021, 1:50 PM IST

ಬೆಂಗಳೂರು(ಜೂ.13): ಕೇಂದ್ರ ಸರ್ಕಾರ ಪೆಟ್ರೋಲ್‌ ಬೆಲೆ ಏರಿಸುತ್ತಿದೆ. ಇತ್ತ ಕಾಂಗ್ರೆಸ್‌ ದೇಶದಾದ್ಯಂತ ಹೋರಾಡುತ್ತಿದೆ. ಪೆಟ್ರೋಲ್‌ ಬೆಲೆ ಇಳಿಯಬೇಕಿದ್ದರೆ ಅದನ್ನು GSTಗೆ ಸೇರಿಸಬೇಕೆಂದು ಕೇಂದ್ರ ಹೇಳಿದರೆ, ಕಾಂಗ್ರೆಸ್‌ ಕೂಡ ಅದನ್ನೇ ಪ್ರತಿಪಾದಿಸಿದೆ. ಹಾಗಾದರೆ, ಕಾಂಗ್ರೆಸ್‌ ಹೋರಾಡುತ್ತಿರುವುದು ಬೆಲೆ ಇಳಿಸಲೋ, ಪೆಟ್ರೋಲ್‌ ಅನ್ನು GSTಗೆ ಸೇರಿಸಲೋ? ಎಂದು ಕಾಂಗ್ರೆಸ್‌ ವಿರುದ್ಧ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಇಂದು(ಭಾನುವಾರ) ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ನರೆದುಕೊಂಡಿರುವ ಕುಮಾರಸ್ವಾಮಿ, ಪೆಟ್ರೋಲಿಯಂ ಖಾತೆಯ ಮಾಜಿ ಸಚಿವರೂ, ಕಾಂಗ್ರೆಸ್‌ನ ಹಿರಿಯರೂ ಆಗಿರುವ ನಾಯಕರೊಬ್ಬರು ಪೆಟ್ರೋಲನ್ನು GSTಗೆ ಸೇರಿಸಬೇಕೆಂದು ಆಗ್ರಹಿಸಿದ್ದಾರೆ. ಪೆಟ್ರೋಲ್‌ ಮೇಲಿನ ಮಿತಿ ಇಲ್ಲದ ತೆರಿಗೆ ಇಳಿಸುವುದು ಕಾಂಗ್ರೆಸ್‌ ಉದ್ದೇಶವಲ್ಲ, ಅದನ್ನು GSTಗೆ ಸೇರಿಸುವುದಷ್ಟೇ ಅದರ ಉದ್ದೇಶ ಎಂಬುದು ಸಾಬೀತಾಗಿದೆ. ಆದರೆ ಅದರ ಅಪಾಯ ಕಾಂಗ್ರೆಸ್‌ಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. 

 

ಕೇಂದ್ರದ ಅಧಿಕಾರದ ಮೇಲೆ ಕಣ್ಣಿಟ್ಟು ಅದರ ಸುತ್ತಲೇ ರಾಜಕಾರಣ ಮಾಡುವುದಷ್ಟೇ ರಾಷ್ಟ್ರೀಯ ಪಕ್ಷಗಳ ಅಜೆಂಡಾ. ಅವುಗಳಿಗೆ ರಾಜ್ಯಗಳ ಹಿತಾಸಕ್ತಿ, ಸ್ಥಳೀಯ ಅಗತ್ಯಗಳು ಲೆಕ್ಕಕ್ಕೇ ಇಲ್ಲ. ಪೆಟ್ರೋಲ್‌ ಅನ್ನು GSTಗೆ ಸೇರಿಸುವುದು ರಾಜ್ಯಗಳನ್ನು ಶೋಷಿಸಿದಂತೆ. ಈಗ ಕಾಂಗ್ರೆಸ್‌–ಬಿಜೆಪಿಗಳೆರಡೂ ಆ ಶೋಷಣೆ ಪರವಾಗಿ ನಿಂತಿವೆ ಎಂಬುದು ಬಹಿರಂಗವಾಗಿದೆ ಎಂದು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ. 

ಗೆಸ್ಟ್‌ಹೌಸ್‌ ವಿಷಯಕ್ಕೆ ಎಚ್‌ಡಿಕೆ-ಜಮೀರ್‌ ಜಟಾಪಟಿ, ಮಾಜಿ ಮಿತ್ರರ ನಡುವೆ ಏನಿದು ಮುನಿಸು.?

ಪೆಟ್ರೋಲ್‌ ಅನ್ನು GSTಗೆ ತಂದರೆ ಜನರಿಗೆ ತಕ್ಷಣಕ್ಕೆ ಬೆಲೆ ಇಳಿದಂತೆ ಅನ್ನಿಸಬಹುದು. ಆದರೆ, ಪೆಟ್ರೋಲನ್ನು GSTಗೆ ಸೇರಿಸುತ್ತಲೇ ಅದರ ಮೇಲಿನ ತೆರಿಗೆಯಿಂದ ಬರುತ್ತಿದ್ದ ಸಂಪನ್ಮೂಲ ರಾಜ್ಯಗಳ ಕೈತಪ್ಪಿ ಹೋಗುತ್ತದೆ. ಎಲ್ಲ ತೆರಿಗೆಯೂ ಕೇಂದ್ರದ ಪಾಲಾಗಿ ರಾಜ್ಯಗಳು ಸಂಪನ್ಮೂಲ ಬರ ಎದುರಿಸುತ್ತವೆ. ರಾಜ್ಯಗಳ ಅಭಿವೃದ್ಧಿಗೆ ಪೆಟ್ಟು ಬೀಳುತ್ತದೆ ಎಂದು ತಿಳಿಸಿದ್ದಾರೆ. 

ತೈಲ ಬೆಲೆ ಇಳಿಸುವ ಉದ್ದೇಶದೊಂದಿಗೆ ಪೆಟ್ರೋಲನ್ನು GSTಗೆ ಸೇರಿಸುವುದು ಪರಿಹಾರವಲ್ಲ. ಅದು ಶೋಷಣೆ. ಬದಲಿಗೆ ಕೇಂದ್ರ ಈಗ ವಿಧಿಸುತ್ತಿರುವ ಮಿತಿಮೀರಿದ ಸುಂಕ ಕಡಿತ ಮಾಡಲಿ. ರಾಜ್ಯ ಸರ್ಕಾರವೂ ತೆರಿಗೆ ಇಳಿಸಲಿ. ಈಗ ತೈಲದ ಮೇಲೆ ಕೇಂದ್ರ, ರಾಜ್ಯಗಳೆರಡೂ ಶೇ. 68ರಷ್ಟು ತೆರಿಗೆ ವಿಧಿಸುತ್ತಿವೆ. ಈ ತೆರಿಗೆ ಪ್ರಮಾಣ ಕಡಿಮೆಯಾಗಬೇಕಾದ್ದು ಅಗತ್ಯ ಎಂದು ಸರ್ಕಾರಗಳಿಗೆ ಸಲಹೆ ನೀಡಿದ್ದಾರೆ. 

ಅಂದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈಗ ಒಂದು ಲೀಟರ್‌ ಪೆಟ್ರೋಲ್‌ ಮೇಲೆ 60–65 ರು. ತೆರಿಗೆ ಹಣ  ಸಿಗುತ್ತಿದೆ. ಆದರೆ, ಎರಡೂ ಸರ್ಕಾರಗಳೂ ಲೀಟರ್‌ ಪೆಟ್ರೋಲ್‌ ಮೇಲೆ ಸಂಗ್ರಹಿಸುವ ಹಣ 30 ರು. ಮೀರಬಾರದು. ಆಗ ಪೆಟ್ರೋಲ್‌ 65–70 ರು. ಗೆ ಬಂದು ನಿಲ್ಲಲಿದೆ. ನಿಜವಾಗಿಯೂ ಆಗಬೇಕಾದ್ದು ಇದು. ಈ ನಿಟ್ಟಿನಲ್ಲಿ ನಾವೆಲ್ಲರೂ ಹೋರಾಡಬೇಕಿದೆ ಎಂದು ಹೇಳಿದ್ದಾರೆ. 

ಜನರ ಆಕ್ರೋಶದಿಂದ ಪ್ರಧಾನಿ ಮೋದಿ ಭಸ್ಮಾಸುರನಂತೆ ನಾಶವಾಗ್ತಾರೆ: ಉಗ್ರಪ್ಪ

ಪೆಟ್ರೋಲ್‌ ಬೆಲೆ ಏರಿಕೆ ವಿರುದ್ಧದ ಹೋರಾಟಗಳು ತೆರಿಗೆ, ಸುಂಕ ಇಳಿಕೆಯ ಉದ್ದೇಶದ್ದಾಗಿರಬೇಕೇ ವಿನಾ GSTಗೆ ಸೇರಿಸುವುದಾಗಿರಬಾರದು. ಈಗ ಕಾಂಗ್ರೆಸ್‌ ಪ್ರತಿಭಟಿಸುತ್ತಿರುವುದು ತೆರಿಗೆ ಇಳಿಸಲೋ ಅಥವಾ ಪೆಟ್ರೋಲನ್ನು GSTಗೆ ಸೇರಿಸಲೋ ಎಂಬುದು ಸ್ಪಷ್ಟವಾಗಬೇಕು. GSTಗೆ ಸೇರಿಸುವುದೇ ಕಾಂಗ್ರೆಸ್‌ ಉದ್ದೇಶವಾಗಿದ್ದರೆ ಅದು ಶೋಷಣೆ ಪರವಾದ ಹೋರಾಟ ಎಂದಿದ್ದಾರೆ. 

ಪೆಟ್ರೋಲ್‌ ಮೇಲೆ ಕೇಂದ್ರ, ರಾಜ್ಯ ಸರ್ಕಾರಗಳೆರಡು ವಿಧಿಸುತ್ತಿರುವ ಅತ್ಯಧಿಕ ತೆರಿಗೆ ಇಳಿಸುವ ಮೂಲಕ ಬೆಲೆ ಏರಿಕೆ ತಗ್ಗಿಸಬೇಕು ಎಂಬುದು JDS ಒತ್ತಾಯ. ಜತೆಗೆ ಪೆಟ್ರೋಲನ್ನು GSTಗೆ ಸೇರಿಸುವ ರಾಷ್ಟ್ರೀಯ ಪಕ್ಷಗಳ ಹುನ್ನಾರದ ವಿರುದ್ಧ ಹೋರಾಡುವುದೂ ನಮ್ಮ ನಿಲುವು.  ಇದರ ಸುತ್ತಲೇ ನಾವು ಹೋರಾಟ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios