ಮಲ್ಲಿಕಾರ್ಜುನ್ ಹೊಸಮನಿ

ಬಾದಾಮಿ(ಡಿ.02): ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ರಾಮ ಮಂದಿರ ನೆನಪಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಇಲ್ಲಿನ ನಿಲಗುಂದ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ, ಚುನಾವಣೆ ಸಮೀಪಿಸುತ್ತಿದ್ದಂತೇ ಆರ್‌ಎಸ್‌ಎಸ್ ಮತ್ತು ಬಿಜೆಪಿ ರಾಮನಾಮ ಜಪ ಶುರು ಮಾಡಿಕೊಳ್ಳುತ್ತವೆ ಎಂದು ಚುಚ್ಚಿದರು.

ಬಿಜೆಪಿಯವರಿಗೆ ರಾಮ ಮಂದಿರ ಸಮಸ್ಯೆ ಬಗೆಹರಿಯುವುದು ಬೇಕಿಲ್ಲ, ಈ ಸಮಸ್ಯೆ ಜೀವಂತವಾಗಿದ್ದರೆ ಮಾತ್ರ ಅವರಿಗೆ ವೋಟು ಸಿಗುತ್ತದೆ ಎಂದು ಸಿದ್ದು ಈ ವೇಳೆ ಹರಿಹಾಯ್ದರು.

"

ಇದೇ ವೇಳೆ ಸಮ್ಮಿಶ್ರ ಸರ್ಕಾರದಲ್ಲಿ ಬಾಗಲಕೋಟೆ ಜಿಲ್ಲೆಗೆ ಯಾವುದೇ ಸಚಿವ ಸ್ಥಾನ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಜಿಲ್ಲೆಯಲ್ಲಿ ನಾನು ಮತ್ತು ಆನಂದ್ ನ್ಯಾಮಗೌಡ ಇಬ್ಬರೇ ಶಾಸಕರು ಇರುವುದರಿಂದ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ಹಂಪಿ ಉತ್ಸವ ಆಚರಿಸದಿರುವ ರಾಜ್ಯ ಸರ್ಕಾರದ  ತೀರ್ಮಾನವನ್ನು ಸಮರ್ಥಿಸಿಕೊಂಡ ಸಿದ್ದು, ಬರಗಾಲ ಇರುವುದರಿಂದ ಆಚರಣೆ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಸ್ಪಷ್ಟಪಡಿಸಿದರು.

ಆದರೆ ಚಾಲುಕ್ಯ ಉತ್ಸವ ಮಾಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಇದೇ ವೇಳೆ ಸ್ಪಷ್ಟಪಡಿಸಿದರು.