ವಿಶ್ವ ವಿಖ್ಯಾತ ಕೆಆರ್‌ಎಸ್‌ ಬೃಂದಾವನದಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಚಿರತೆ ವಿರುದ್ಧದ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸ್ಥಗಿತಗೊಳಿಸಿದೆ.

ಮಂಡ್ಯ (ನ.14): ವಿಶ್ವ ವಿಖ್ಯಾತ ಕೆಆರ್‌ಎಸ್‌ ಬೃಂದಾವನದಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಚಿರತೆ ವಿರುದ್ಧದ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸ್ಥಗಿತಗೊಳಿಸಿದೆ. ಮುಂಜಾಗ್ರತೆಯಾಗಿ ಬೃಂದಾವನಕ್ಕೆ ಪ್ರವಾಸಿಗರ ನಿಷೇಧವನ್ನು ಮುಂದುವರೆಸಿದ್ದು, ನಾತ್‌ರ್‍ ಬ್ಯಾಂಕ್‌ ಬಳಿ ಬೆಳೆದುನಿಂತಿದ್ದ ಗಿಡ-ಗಂಟೆಗಳನ್ನು ತೆರವುಗೊಳಿಸುವ ಕಾರ್ಯ ನಡೆದಿದೆ. ಅ.22ರಂದು ಕೆಆರ್‌ಎಸ್‌ ಅಣೆಕಟ್ಟೆಮೇಲ್ಭಾಗದಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಚಿರತೆ, ಮತ್ತೆ ಅಕ್ಟೋಬರ್‌ 28ರಂದು ಸಂಜೆ ಬೃಂದಾವನದೊಳಗೆ ಚಿರತೆ ಕಾಣಿಸಿಕೊಂಡು ಇನ್ನಷ್ಟುಭಯ ಹುಟ್ಟುವಂತೆ ಮಾಡಿತ್ತು. ಚಿರತೆ ಕಾಣಿಸಿಕೊಂಡಿದ್ದ ದೃಶ್ಯಗಳು ಸೀಸಿ ಟೀವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದರಿಂದ ಪ್ರವಾಸಿಗರಿಗೆ ಬೃಂದಾವನ ಪ್ರವೇಶವನ್ನು ನಿಷೇಧಿಸಿತ್ತು.

ಬೋನಿನ ಬಳಿ ಸುಳಿಯಲಿಲ್ಲ: ನಂತರದಲ್ಲಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬೃಂದಾವನದ ಉತ್ತರ ಮತ್ತು ದಕ್ಷಿಣ ದ್ವಾರದ ಮಾರ್ಗಗಳಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿ ರಾಯಲ್‌ ಆರ್ಕಿಡ್‌ ಹೋಟೆಲ್‌ ಹಿಂಭಾಗ ಬೋನನ್ನು ಇರಿಸಿ ನಾಯಿಯೊಂದನ್ನು ಕಟ್ಟಿಹಾಕಿ ಚಿರತೆ ಸೆರೆಗೆ ಕಾದುಕುಳಿತರು. ಆದರೆ, ಚಿರತೆ ಬೋನಿನ ಬಳಿ ಸುಳಿಯಲೇ ಇಲ್ಲ. ಮೊದಲು ದಕ್ಷಿಣ ದ್ವಾರದ ಬಳಿ ಕಾಣಿಸಿಕೊಂಡಿದ್ದ ಚಿರತೆ ಅ.28ರಂದು ಉತ್ತರ ಬೃಂದಾವನ ಬಳಿ ಓಡಾಡುತ್ತಿರುವ ದೃಶ್ಯ ಸೀಸಿ ಟೀವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದರಿಂದ ಅಲ್ಲಿಯೂ ಸಹ ಒಂದು ಬೋನ್‌ ಇಟ್ಟು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯವರು ನಡೆಸಿದರಾದರೂ ಅದೂ ಫಲ ನೀಡಲೇ ಇಲ್ಲ.

ಕೆಆರ್‌ಎಸ್‌ನಲ್ಲಿ ಚಿರತೆ ಹಾವಳಿ : ಕಳೆದ 20 ದಿನಗಳಿಂದ ಮುಂದುವರಿದ ಆತಂಕ

ಟ್ರ್ಯಾಪ್‌ ಕ್ಯಾಮೆರಾಗಳಲ್ಲೂ ಕಂಡಿಲ್ಲ: ಚಿರತೆ ಚಲನವಲನದ ಮೇಲೆ ನಿಗಾ ಇಡಲು ಹತ್ತು ಕಡೆಗಳಲ್ಲಿ ಟ್ರ್ಯಾಪ್‌ ಕ್ಯಾಮೆರಾಗಳನ್ನು ಅಳವಡಿಸಲಾಯಿತು. ಕೂಂಬಿಂಗ್‌ ಕಾರ್ಯಾಚರಣೆಗೆ ಅಡ್ಡಿಯಾಗಿದ್ದ ಗಿಡ-ಗಂಟೆಗಳನ್ನೆಲ್ಲಾ ದಕ್ಷಿಣ ದ್ವಾರದ ಬಳಿ ತೆರವುಗೊಳಿಸಿದರೂ ಚಿರತೆ ಮಾತ್ರ ಎಲ್ಲಿಯೂ ಕಾಣಸಿಗಲೇ ಇಲ್ಲ. ಕೊನೆಗೆ ಕಾವೇರಿ ನೀರಾವರಿ ನಿಗಮ ಹಾಗೂ ಅರಣ್ಯ ಇಲಾಖೆಯವರು ಸಭೆ ನಡೆಸಿ ಡ್ರೋನ್‌ ಕ್ಯಾಮೆರಾ ಬಳಸಿ ಚಿರತೆಯ ಇರುವಿಕೆಯ ಜಾಗ ಪತ್ತೆ ಹಚ್ಚುವುದರೊಂದಿಗೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುವ ನಿರ್ಧಾರ ಕೈಗೊಂಡರು. ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಗೆ ವನ್ಯಜೀವಿ ವಲಯದವರ ನೆರವನ್ನು ಪಡೆಯುವುದಕ್ಕೂ ತೀರ್ಮಾನಿಸಲಾಗಿತ್ತು. ಆದರೆ, ಸಭೆ ನಡೆಸಿ ಕೈಗೊಂಡ ತೀರ್ಮಾನದಂತೆ ಯಾವುದೂ ಜಾರಿಯಾಗಲೇ ಇಲ್ಲ. ಕಳೆದ ಮೂರು ದಿನಗಳಿಂದಲೂ ಕೆಆರ್‌ಎಸ್‌ನಲ್ಲಿ ಚಿರತೆ ವಿರುದ್ಧದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಬೃಂದಾವನದಲ್ಲಿದೆಯೋ ಇಲ್ಲವೋ ಗೊತ್ತಿಲ್ಲ: ಅ.28ರಂದು ಪ್ರತ್ಯಕ್ಷವಾಗಿದ್ದ ಚಿರತೆ ಇದುವರೆಗೂ ಎಲ್ಲಿಯೂ ಸಹ ಕಾಣಿಸಿಕೊಂಡಿಲ್ಲ. ಚಿರತೆ ಇನ್ನೂ ಬೃಂದಾವನದಲ್ಲೇ ಇದೆಯೋ ಅಥವಾ ಕಾಡಿಗೆ ಮರಳಿದೆಯೋ ಎನ್ನುವುದೂ ಗೊತ್ತಾಗಿಲ್ಲ. ಕಳೆದ 16 ದಿನಗಳಿಂದ ಚಿರತೆ ಕೆಆರ್‌ಎಸ್‌ ಸುತ್ತಮುತ್ತ ಎಲ್ಲಿಯೂ ಕಾಣಿಸಿಕೊಂಡಿಲ್ಲದ ಹಿನ್ನೆಲೆಯಲ್ಲಿ ಚಿರತೆ ಅಲ್ಲಿಂದ ವಾಪಸ್‌ ತೆರಳಿರುವ ಸಾಧ್ಯತೆಗಳಿವೆ ಎಂದು ಅರಣ್ಯ ಇಲಾಖೆಯವರು ನಂಬಿದ್ದಾರೆ. ಅದೇ ಕಾರಣಕ್ಕೆ ವ್ಯರ್ಥ ಕಾರ್ಯಾಚರಣೆ ನಡೆಸದೆ ಸುಮ್ಮನಾಗಿದ್ದಾರೆಂದು ತಿಳಿದುಬಂದಿದೆ.

ಅರಣ್ಯಕ್ಕೆ ವಾಪಸಾಗಿರುವ ಶಂಕೆ: ಸಂತಾನಾಭಿವೃದ್ಧಿ ಕಾರಣದಿಂದ ಒಮ್ಮೊಮ್ಮೆ ಚಿರತೆಗಳು ಅರಣ್ಯದ ಹೊರಗೆ ಕಾಣಿಸಿಕೊಳ್ಳುವುದುಂಟು. ಚಿರತೆಗಳು ಆಹಾರವನ್ನು ಹುಡುಕಲು ಸುಲಭಗುವುದರಿಂದ ಹಳ್ಳಿಗಳು, ಪಟ್ಟಣದ ಕಡೆಗಳಲ್ಲಿ ಅಲೆದಾಡುವುದುಂಟು. ನಂತರ ಮರಳಿ ಕಾಡಿಗೆ ವಾಪಸಾಗುವ ನಿದರ್ಶನಗಳಿವೆ. ಹಾಗೆಯೇ ಕೆಆರ್‌ಎಸ್‌ನಲ್ಲಿ ಕಾಣಿಸಿಕೊಂಡಿರುವ ಚಿರತೆ ಆಹಾರ ಹುಡುಕಿಕೊಂಡು ಬಂದು ಕೆಲ ದಿನಗಳ ಬಳಿಕ ವಾಪಸಾಗಿರಬಹುದೆಂದು ಹೇಳಲಾಗುತ್ತಿದೆ. ಚಿರತೆ ಕೆಆರ್‌ಎಸ್‌ ವ್ಯಾಪ್ತಿಯಲ್ಲೇ ಇದ್ದಿದ್ದರೆ ಇಷ್ಟೊತ್ತಿಗೆ ಎಲ್ಲಾದರೂ ಕಾಣಿಸಿಕೊಳ್ಳಬೇಕಿತ್ತು. ಬೇಟೆಯನ್ನರಸಿಕೊಂಡಾದರೂ ಬರಬೇಕಿತ್ತು. ಚಿರತೆ ಹಲವಾರು ದಿನಗಳಿಂದ ಕಾಣಿಸಿಕೊಳ್ಳದಿರುವುದರಿಂದ ಕೆಆರ್‌ಎಸ್‌ನಿಂದ ನಿರ್ಗಮಿಸಿರಬಹುದೆಂದು ಹೇಳಲಾಗುತ್ತಿದ್ದರೂ, ಒಳಗೊಳಗೆ ಆತಂಕ, ಭಯವೂ ಕೂಡ ಅರಣ್ಯ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಕಾಡುತ್ತಿದೆ.

ಪ್ರವಾಸಿಗರಿಲ್ಲದೆ ಆದಾಯಕ್ಕೆ ಕುತ್ತು: ವಾರಾಂತ್ಯದ ದಿನಗಳನ್ನು ಮಜವಾಗಿ ಕಳೆಯಲು ಬೃಂದಾವನಕ್ಕೆ ಬರುತ್ತಿದ್ದ ಸಾವಿರಾರು ಪ್ರವಾಸಿಗರಲ್ಲಿ ನಿರಾಸೆ ಆವರಿಸಿದೆ. ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಮಾರು ಹತ್ತು ದಿನಗಳಿಂದಲೂ ಬೃಂದಾವನ ಪ್ರವೇಶವನ್ನು ಪ್ರವಾಸಿಗರಿಗೆ ನಿಷೇಧಿಸಿದೆ. ಆದರೆ, ಚಿರತೆ ಸೆರೆಗೆ ಬೀಳದಿರುವುದರಿಂದ ಪ್ರವಾಸಿಗರಿಗೆ ಪ್ರವೇಶ ನೀಡಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಚಿರತೆ ಕೆಆರ್‌ಎಸ್‌ನಲ್ಲಿ ಕಾಣಿಸಿಕೊಂಡ ನಂತರದಲ್ಲಿ ಕೆಆರ್‌ಎಸ್‌ ಪ್ರವೇಶ ನಿಷೇಧಿಸಿರುವುದರಿಂದ ಆದಾಯಕ್ಕೂ ಕುತ್ತು ಬಿದ್ದಿದೆ. 

ಸಾಮಾನ್ಯ ದಿನಗಳಲ್ಲಿ ನೂರಾರು ಹಾಗೂ ವಾರಾಂತ್ಯದ ದಿನಗಳಲ್ಲಿ ಸಾವಿರಾರು ಪ್ರವಾಸಿಗರು ಬೃಂದಾವನ ವೀಕ್ಷಣೆಗೆ ಬರುತ್ತಿದ್ದರು. ರಜಾ ದಿನಗಳು ಒಟ್ಟಿಗೆ ಬಂದಿದ್ದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಇನ್ನೂ ಹೆಚ್ಚಳವಾಗುತ್ತಿತ್ತು. ಹತ್ತು ದಿನಗಳ ನಿಷೇಧದಿಂದ ನಿಗಮಕ್ಕೆ ಬರುತ್ತಿದ್ದ ಸುಮಾರು 25 ಲಕ್ಷಕ್ಕೂ ಹೆಚ್ಚಿನ ಆದಾಯ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಚಿರತೆ ಪ್ರತ್ಯಕ್ಷವಾದ ದಿನದಿಂದ ಬೃಂದಾವನ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ. ನಿಷೇಧದ ಕಾರಣದಿಂದ ಪ್ರವಾಸಿಗರು ಕೆಆರ್‌ಎಸ್‌ನತ್ತ ಸುಳಿಯುತ್ತಲೇ ಇಲ್ಲ. ಹದಿನೈದು ದಿನಗಳಿಂದ ಆದಾಯವೂ ಶೂನ್ಯವಾಗಿದೆ.

ಕಾಡುತ್ತಿರುವ ಆತಂಕ: ಚಿರತೆ ಸೆರೆ ಸಿಕ್ಕಿದ್ದರೆ ಎಲ್ಲರ ಮನಸ್ಸು ನಿರಾಳವಾಗುತ್ತಿತ್ತು. ಚಿರತೆ ಬಗೆಗಿನ ಭಯವೂ ದೂರವಾಗುತ್ತಿತ್ತು. ಚಿರತೆ ಸೆರೆ ಸಿಗದಿರುವುದರಿಂದ ಸ್ಥಳೀಯರು ಹಾಗೂ ಪ್ರವಾಸಿಗರು ಭಯದ ನೆರಳಿನಲ್ಲೇ ಉಳಿಯುವಂತಾಗಿದೆ. ಪ್ರವಾಸಿಗರಿಗೆ ಕೆಆರ್‌ಎಸ್‌ ಬೃಂದಾವನಕ್ಕೆ ಪ್ರವೇಶ ನೀಡುವುದಕ್ಕೂ ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ. ಸೋಮವಾರದಿಂದ ಬೃಂದಾವನಕ್ಕೆ ಪ್ರವೇಶ ನೀಡುವುದೋ ಅಥವಾ ಇನ್ನು ಸ್ವಲ್ಪ ದಿನ ಕಾದುನೋಡೋಣವೇ ಎಂಬ ಗೊಂದಲದಲ್ಲೇ ಇದ್ದಾರೆ.

ಕೆಆರ್‌ಎಸ್‌ ಬಳಿ ಚಿರತೆ ಮತ್ತೆ ಪ್ರತ್ಯಕ್ಷ: ಕಳೆದ 20 ದಿನಗಳಿಂದ ಐದಾರು ಬಾರಿ ಪ್ರತ್ಯಕ್ಷ

ಚಿರತೆ ವಿರುದ್ಧದ ಕಾರ್ಯಾಚರಣೆ ಮಾಹಿತಿ ಪಡೆಯಲು ಮಂಡ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರನ್‌ ಅವರಿಗೆ ಕರೆ ಮಾಡಿದರೆ ಅವರು ಕರೆಯನ್ನೇ ಸ್ವೀಕರಿಸುತ್ತಿಲ್ಲ. ಶ್ರೀರಂಗಪಟ್ಟಣ ವಲಯ ಆರಣ್ಯಾಧಿಕಾರಿ ಅನಿತಾ ಅವರಿಗೆ ಕರೆ ಮಾಡಿದರೂ ಉತ್ತರಿಸುತ್ತಿಲ್ಲ. ಎಲ್ಲರೂ ಯಾವುದೇ ಮಾಹಿತಿಯನ್ನು ನೀಡದೆ ಮೌನಕ್ಕೆ ಶರಣಾಗಿ ಕಾರ್ಯಾಚರಣೆಯಿಂದ ದೂರವೇ ಉಳಿದಿದ್ದಾರೆ.

ಕೆಆರ್‌ಎಸ್‌ನಲ್ಲಿ ಚಿರತೆ ಕಾಣಿಸಿಕೊಂಡು 20 ದಿನಗಳಾಗಿದೆ. ಅದರಲ್ಲಿ ಸುಮಾರು 10 ದಿನ ಬೃಂದಾವನ ಪ್ರವೇಶವನ್ನು ನಿಷೇಧಿಸಿತ್ತು. ಇದರಿಂದ ನಿಗಮಕ್ಕೆ 25 ಲಕ್ಷ ರು.ನಷ್ಟು ನಷ್ಟವಾಗಿದೆ. ಈಗ ಹಲವಾರು ದಿನಗಳಿಂದ ಚಿರತೆ ಸುಳಿವು ಪತ್ತೆಯಾಗಿಲ್ಲ. ಮುನ್ನೆಚ್ಚರಿಕೆಯಾಗಿ ನಮ್ಮ ವ್ಯಾಪ್ತಿಯಲ್ಲಿನ ಗಿಡ-ಗಂಟೆಗಳನ್ನು ತೆರವುಗೊಳಿಸಿದ್ದು, ಅರಣ್ಯ ಇಲಾಖೆಯವರೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೂರು ದಿನ ರಜೆ ಇದ್ದ ಕಾರಣ ಡ್ರೋನ್‌ ಕಾರ್ಯಾಚರಣೆ ನಡೆಸಲಾಗಿಲ್ಲ. ಚಿರತೆ ಎಲ್ಲಿಯೂ ಕಾಣಿಸಿಕೊಳ್ಳದಿರುವುದರಿಂದ ಕಾಡಿಗೆ ವಾಪಸಾಗಿರಬಹುದೆಂದು ಭಾವಿಸಿದ್ದೇವೆ. ಬೃಂದಾವನಕ್ಕೆ ಪ್ರವಾಸಿಗರಿಗೆ ಪ್ರವೇಶ ನೀಡುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು.
-ಫಾರೂಖ್‌ ಅಬು, ಎಇಇ, ಕಾವೇರಿ ನೀರಾವರಿ ನಿಗಮ