ವಿಶ್ವವಿಖ್ಯಾತ ಕೆಆರ್‌ಎಸ್ ಡ್ಯಾಂ ಹಾಗೂ ಬೃಂದಾವನದಲ್ಲಿ ಚಿರತೆಗಳು ಪದೇ ಪದೇ ಕಾಣಿಸಿಕೊಳ್ಳುವ ಮೂಲಕ ಸ್ಥಳೀಯರು, ಅಲ್ಲಿನ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದೆ. ಇದೀಗ ಚಿರತೆ ಸೆರೆಗೆ ಅರಣ್ಯ ಇಲಾಖೆ ಆಕ್ಟಿವ್ ಆಗಿದ್ದು, ಕ್ಯಾಮರಾ ಟ್ರ್ಯಾಪ್ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಡ್ಯ (ನ.10): ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ವಿಶ್ವವಿಖ್ಯಾತ ಕೆಆರ್‌ಎಸ್ ಡ್ಯಾಂ ಹಾಗೂ ಬೃಂದಾವನದಲ್ಲಿ ಚಿರತೆಗಳು ಪದೇ ಪದೇ ಕಾಣಿಸಿಕೊಳ್ಳುವ ಮೂಲಕ ಸ್ಥಳೀಯರು, ಅಲ್ಲಿನ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದೆ. ಇದೀಗ ಚಿರತೆ ಸೆರೆಗೆ ಅರಣ್ಯ ಇಲಾಖೆ ಆಕ್ಟಿವ್ ಆಗಿದ್ದು, ಕ್ಯಾಮರಾ ಟ್ರ್ಯಾಪ್ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಕೆಆರ್‌ಎಸ್ ಡ್ಯಾಂ ಹಾಗೂ ಬೃಂದಾವನ ಗಾರ್ಡನ್ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆ ಪಡೆದಿರುವಂತಹ ಪ್ರವಾಸಿ ಸ್ಥಳ. ಇದೀಗ ಈ ವಿಶ್ವ ವಿಖ್ಯಾತಿ ಪಡೆದಿರುವ ಸ್ಥಳದಲ್ಲಿ ಕಳೆದ 20 ದಿನಗಳಿಂದ ಚಿರತೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಕೆಆರ್‌ಎಸ್ ಡ್ಯಾಂ ಹಾಗೂ ಬೃಂದಾವನದಲ್ಲಿ ಚಿರತೆಗಳು ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆ ಇಲ್ಲಿನ ಸಿಬ್ಬಂದಿಗಳು ಹಾಗೂ ಜನರಲ್ಲಿ ಸಾಕಷ್ಟು ಆತಂಕ ಮನೆ ಮಾಡಿದೆ. ಇದರಿಂದ ಗಾಬರಿಗೊಂಡಿರುವ ಕಾವೇರಿ ನೀರಾವರಿ ನಿಗಮ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಬೃಂದಾವನಕ್ಕೆ ಪ್ರವಾಸಿಗರ ನಿರ್ಬಂಧ ಏರಿದೆ. ಅಲ್ಲದೇ ಇಲ್ಲಿರುವ ಸಿಬ್ಬಂದಿಗಳು ಹಾಗೂ ಭದ್ರತಾ ಪಡೆಯ ಸಿಬ್ಬಂದಿಗಳಿಗೆ ಯಾವ ಸಮಯದಲ್ಲಿ ಚಿರತೆ ಬಂದು ಬಿಡುತ್ತಪ್ಪಾ ಎಂಬ ಆತಂಕ ಸೃಷ್ಟಿಯಾಗಿದೆ. ಯಾಕದಂದ್ರೆ 20 ದಿನಗಳ ವ್ಯಾಪ್ತಿಯಲ್ಲಿ ಐದಾರು ಬಾರಿ ಚಿರತೆ ಸಿಸಿ ಕ್ಯಾಮರಾಗೆ ಹಾಗೂ ಸಿಬ್ಬಂದಿಗಳ ಕಣ್ಣಿಗೆ ಬಿದ್ದಿದೆ. ಈ ಭಾಗದಲ್ಲಿ ಎರಡು ಚಿರತೆ ಇದ್ದು, ಒಂದು ಚಿರತೆ ಬೀದಿ ನಾಯಿಗಳ ಮೇಲೆ ದಾಳಿ ಮಾಡುತ್ತಿದ್ರೆ, ಇನ್ನೊಂದು ಚಿರತೆ ಅಪರೂಪದ ಪ್ರಾಣಿಯಾದ ನೀರು ನಾಯಿಗಳನ್ನು ಬೇಟೆಯಾಡಲು ಇಲ್ಲಿಯೇ ವಾಸ್ತವ್ಯ ಹೂಡಿವೆ ಎಂದು ಹೇಳಲಾಗುತ್ತಿದೆ.
Mandya : ಚಿರತೆ ಸೆರೆಗೆ ಕಾರ್ಯಾಚರಣೆ ಚುರುಕು
ಚಿರತೆಯ ಹಾವಳಿ ಕೆಆರ್‌ಎಸ್ ಹಾಗೂ ಬೃಂದಾವನದಲ್ಲಿ ಹೆಚ್ಚಾಗಿರುವ ಹಿನ್ನೆಲೆ ಕಾವೇರಿ ನೀರಾವರಿ ನಿಗಮ ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ. ಒಂದು ಕಡೆ ಕಾವೇರಿ ನೀರಾವರಿ ನಿಗಮ ಇಲ್ಲಿ ಬೆಳೆದಿರುವ ಬೇಲಿಗಳನ್ನು ಕ್ಲೀನ್ ಮಾಡಿ ಕಾರ್ಯಾಚರಣೆಗೆ ಅನುಕೂಲ ಮಾಡುತ್ತಿದೆ. ಇನ್ನೂ ಅರಣ್ಯ ಇಲಾಖೆ ಚಿರತೆ ಕಾಣಿಸಿಕೊಂಡಿರುವ 4 ಸ್ಥಳದಲ್ಲಿ ಕ್ಯಾಮರಾ ಟ್ರ್ಯಾಪ್ ಹಾಕಿದೆ. ಈ ಕ್ಯಾಮರಾ ಟ್ರ್ಯಾಪ್ ಚಿರತೆಯ ಚಲನವಲನಗಳನ್ನು ಸೆರೆ ಹಿಡಿಯಲಿದ್ದು, ಇದರಿಂದ ಚಿರತೆ ಸೆರೆಗೆ ಅನುಕೂಲವಾಗುತ್ತದೆ. ಚಿರತೆ ಕ್ಯಾಪ್ಚರ್ ಆದರೇ ಆ ಭಾಗದಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ನಡೆಸಬಹುದಾಗಿದೆ. ಇದಲ್ಲದೇ ಇದುವರೆಗೆ ಎರಡು ಬೋನ್‌ಗಳನ್ನು ಇರಿಸಿದ್ದ ಅರಣ್ಯ ಇಲಾಖೆ, ಇದೀಗ ಮತ್ತೆರಡು ಬೋನ್ ಇಟ್ಟು ಕಾರ್ಯಾಚರಣೆ ಮಾಡುತ್ತಿದ್ದೆ.
ಕೆಆರ್‌ಎಸ್ ಬಳಿ ಚಿರತೆ ಮತ್ತೆ ಪ್ರತ್ಯಕ್ಷ: ಕಳೆದ 20 ದಿನಗಳಿಂದ ಐದಾರು ಬಾರಿ ಪ್ರತ್ಯಕ್ಷ
ಚಿರತೆ ಪ್ರತ್ಯಕ್ಷ ಹಿನ್ನೆಲೆ ವಾಕಿಂಗ್ ತೆರಳದಂತೆ ಎಚ್ಚರಿಕೆ: ಕೆಆರ್‌ಎಸ್ ಡ್ಯಾಂ, ಬೃಂದಾವನದಲ್ಲಿ ಚಿರತೆ ಪದೇ ಪದೇ ಕಾಣಿಸಿಕೊಳ್ಳುತ್ತಿದೆ. 20 ದಿನಕಳೆದ್ರು ಚಿರತೆ ಸೆರೆಯಾಗದಿರುವುದು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಅಕ್ಕಪಕ್ಕದ ಗ್ರಾಮದ ಜನರು ವಾಕಿಂಗ್ ತೆರಳುವ ವೇಳೆಯೂ ಚಿರತೆ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಕೆಆರ್‌ಎಸ್ ಗ್ರಾಮ ಪಂಚಾಯತಿ ಜನರಿಗೆ ಎಚ್ಚರಿಕೆ ನೀಡುತ್ತಿದೆ. ಬೆಳಿಗ್ಗೆ, ಸಂಜೆ ವೇಳೆ ಯಾರು ವಾಕಿಂಗ್ ಗೆ ಹೋಗಬೇಡಿ. ಚಿರತೆ ಸೆರೆಹಿಡಿಯುವವರೆಗು ಒಬ್ಬಂಟಿಯಾಗಿ ಜಾನುವಾರು ಹೊಡೆದುಕೊಂಡು ಓಡಾಡಬೇಡಿ. ನಿಮ್ಮ ಜೀವ ರಕ್ಷಣೆ ನೀವೇ ಮಾಡಿಕೊಳ್ಳಬೇಕು. ಎಚ್ಚರ ಎಚ್ಚರ ಎಂದು ಧ್ವನಿವರ್ಧಕದ ಮೂಲಕ ಡಂಗೂರ ಸಾರಿಸಿ ಕೆಆರ್‌ಎಸ್ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದೆ. ಈಗಾಗಲೇ ಡ್ಯಾಂ ಹಾಗೂ ಬೃಂದಾವನ ಸುತ್ತಲೂ ನಾಲ್ಕು ಬೋನ್, ನಾಲ್ಕು ಟ್ರಾಪ್ ಕ್ಯಾಮೆರಾ ಇಟ್ಟರು ಚಿರತೆ ಸೆರೆ ಸಿಕ್ಕಿಲ್ಲ.
