Asianet Suvarna News Asianet Suvarna News

ಅರಣ್ಯ ಸಿಬ್ಬಂದಿಗೆ ಇನ್ನೂ ಇಲ್ಲ ಪೊಲೀಸ್‌ ರೀತಿ ಕ್ಯಾಂಟೀನ್‌..!

ಅರಣ್ಯ ಇಲಾಖೆ ಸಿಬ್ಬಂದಿಗಾಗಿಯೇ ಪೊಲೀಸ್‌ ಅಥವಾ ಮಿಲಿಟರಿ ಕ್ಯಾಂಟೀನ್‌ ಮಾದರಿಯಲ್ಲಿ ಅರಣ್ಯ ಕ್ಯಾಂಟೀನ್‌ ತೆರೆಯಬೇಕು ಎಂಬ ಮನವಿಯನ್ನು ಅರಣ್ಯ ಇಲಾಖೆಯೇ ಸಿಬ್ಬಂದಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

Forest Department Staff still do not have Canteen like Police in Karnataka grg
Author
First Published Jan 10, 2024, 5:19 AM IST

ಗಿರೀಶ್‌ ಗರಗ

ಬೆಂಗಳೂರು(ಜ.10): ರಾಜ್ಯ ಅರಣ್ಯ ಇಲಾಖೆಯಲ್ಲಿ ಕಾಡು-ಮೇಡು ಅಲೆಯುತ್ತಾ ಅರಣ್ಯ, ವನ್ಯಜೀವಿ ರಕ್ಷಣೆ ಮಾಡುವ ಅರಣ್ಯ ಇಲಾಖೆ ಸಿಬ್ಬಂದಿಗೆ ಸಮಾನ ಕೆಲಸಕ್ಕೆ ಸಮಾನ ವೇತನವಿಲ್ಲದೆ ಜೀವನ ನಿರ್ವಹಣೆಯೇ ಕಷ್ಟ ಎನ್ನುವಂತಾಗಿದೆ. ಹೀಗಾಗಿಯೇ ಕಡಿಮೆ ಬೆಲೆಯಲ್ಲಿ ಪಡಿತರ ಸಿಗಲು ಪೊಲೀಸ್‌ ಕ್ಯಾಂಟೀನ್‌ ಮಾದರಿಯಲ್ಲಿ ‘ಅರಣ್ಯ ಇಲಾಖೆ ಕ್ಯಾಂಟೀನ್‌’ ಮಾಡುವಂತೆ ಹಲವು ವರ್ಷಗಳಿಂದ ಆಗ್ರಹಿಸಲಾಗುತ್ತಿದ್ದರೂ, ಸರ್ಕಾರ ಮಾತ್ರ ಆ ಬೇಡಿಕೆಯನ್ನು ಈವರೆಗೆ ಪರಿಗಣಿಸಿಲ್ಲ.

ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಅಥವಾ ಕಾಯಂ ಡಿ ದರ್ಜೆ ನೌಕರರಿಗೆ ಈಗಲೂ ಕನಿಷ್ಠ ವೇತನವಷ್ಟೇ ಸಿಗುತ್ತಿದೆ. ಅರಣ್ಯ ಪ್ರದೇಶದಲ್ಲಿಯೇ ಬಹುಪಾಲು ಕಳೆಯುವ ಅವರಿಗೆ ಸಿಗುತ್ತಿರುವ ವೇತನದಿಂದ ಜೀವನ ನಿರ್ವಹಣೆಯೂ ಕಷ್ಟ ಎನ್ನುವಂತಾಗಿದೆ. ಅಲ್ಲದೆ, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸಮರ್ಪಕವಾಗಿ ಮಾಸಿಕ ವೇತನ ದೊರೆಯದೇ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಎಲ್ಲದರ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯೂ ಅವರ ಸಮಸ್ಯೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಾಗಿಯೇ ಪೊಲೀಸ್‌ ಅಥವಾ ಮಿಲಿಟರಿ ಕ್ಯಾಂಟೀನ್‌ ಮಾದರಿಯಲ್ಲಿ ಅರಣ್ಯ ಕ್ಯಾಂಟೀನ್‌ ತೆರೆಯಬೇಕು ಎಂಬ ಮನವಿಯನ್ನು ಅರಣ್ಯ ಇಲಾಖೆಯೇ ಸಿಬ್ಬಂದಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಅರಣ್ಯ ರಕ್ಷಕರಿಗೆ 3 ತಿಂಗಳಿಂದ ಸಂಬಳವೇ ಇಲ್ಲ..!

ರಾಜ್ಯದಲ್ಲಿ 5 ಹುಲಿ ಸಂರಕ್ಷಿತ ಅರಣ್ಯ ಸೇರಿದಂತೆ 36 ವನ್ಯಜೀವಿ ಅಭಯಾರಣ್ಯ, 17 ಸಂರಕ್ಷಿತ ಅರಣ್ಯ ಹಾಗೂ 1 ಸಮುದಾಯ ಮೀಸಲು ಅರಣ್ಯವಿದ್ದು, ಒಟ್ಟಾರೆ 40,649.30 ಚದರ ಕಿ.ಮೀ ವಿಸ್ತೀರ್ಣದ ಅರಣ್ಯ ಪ್ರದೇಶವಿದೆ. ಈ ಅರಣ್ಯಗಳ ಹಾಗೂ ವನ್ಯಜೀವಿಗಳ ಸಂರಕ್ಷಣೆಗಾಗಿ ಸರ್ಕಾರ 14,766 ಹುದ್ದೆಗಳನ್ನು ಮಂಜೂರು ಮಾಡಿದ್ದರೂ ಸದ್ಯ 8,551 ಹುದ್ದೆ ಭರ್ತಿ ಮಾಡಲಾಗಿದೆ. ಭರ್ತಿಯಾಗಿರುವ ಹುದ್ದೆಗಳ ಪೈಕಿ 3 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ ಅರಣ್ಯ ಪ್ರದೇಶದಲ್ಲಿಯೇ ಕೆಲಸ ಮಾಡುತ್ತಾರೆ.

ಅಲ್ಲದೆ ಖಾಲಿ ಇರುವ ಹುದ್ದೆಗಳ ಪೈಕಿ 2800ಕ್ಕೂ ಹೆಚ್ಚಿನ ಮಂದಿ ಹೊರಗುತ್ತಿಗೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಹೀಗೆ ನೇಮಕ ಮಾಡಿಕೊಳ್ಳಲಾದ ಹೊರಗುತ್ತಿಗೆ ನೌಕರರು ಹಾಗೂ ಸಿ ಮತ್ತು ಡಿ ದರ್ಜೆಯ ಸಿಬ್ಬಂದಿಗಳ ಅನುಕೂಲಕ್ಕಾಗಿ, ಕಡಿಮೆ ಬೆಲೆಯಲ್ಲಿ ಪಡಿತರ ಸೇರಿದಂತೆ ಮತ್ತಿತರ ಸೌಲಭ್ಯ ಕಲ್ಪಿಸಬೇಕು. ಅದಕ್ಕಾಗಿಯೇ ‘ಅರಣ್ಯ ಕ್ಯಾಂಟೀನ್‌’ ತೆರೆಯಬೇಕು ಎಂಬುದು ತಳಮಟ್ಟದ ಸಿಬ್ಬಂದಿಯ ಬಹುಕಾಲದ ಬೇಡಿಕೆಯಾಗಿದೆ.

ಕ್ಯಾಂಟೀನ್‌ಗಳಲ್ಲಿ ಶೇ.30 ರಿಯಾಯಿತಿ:

ರಾಜ್ಯದ 14 ಸಾವಿರ ಪೊಲೀಸ್‌ ಸಿಬ್ಬಂದಿಯ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ 4 ಹಾಗೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ತಲಾ ಒಂದು ಪೊಲೀಸ್‌ ಕ್ಯಾಂಟೀನ್‌ಗಳಿವೆ. ಈ ಕ್ಯಾಂಟೀನ್‌ಗಳಲ್ಲಿ ದಿನಸಿ ಸಾಮಗ್ರಿಗಳು, ಎಲೆಕ್ಟ್ರಿಕ್‌ ವಸ್ತುಗಳು, ವಸ್ತ್ರಗಳು, ಪಾದರಕ್ಷೆ, ಪಾತ್ರೆ ಮುಂತಾದವುಗಳನ್ನು ಶೇ.30ರವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿಗಳಿಗಾಗಿ ಬೆಂಗಳೂರು, ಬೆಳಗಾವಿ, ಬೀದರ್‌, ಕಾರವಾರ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಇರುವ 9 ಮಿಲಿಟರಿ ಕ್ಯಾಂಟೀನ್‌ಗಳಲ್ಲಿಯೂ ಕೂಡ ರಿಯಾಯಿತಿ ದರದಲ್ಲಿ ವಸ್ತುಗಳನ್ನು ನೀಡಲಾಗುತ್ತದೆ.

ಅರಣ್ಯ ಇಲಾಖೆ ಅಕ್ರಮಕ್ಕೆ ದಾಖಲೆ ಕೊಡುವೆ, ತನಿಖೆ ನಡೆಸುವ ತಾಕತ್ತು ಖಂಡ್ರೆಗೆ ಇದೆಯಾ?: ಕುಮಾರಸ್ವಾಮಿ

ಅರಣ್ಯದಲ್ಲಿ ಕೆಲಸ ಮಾಡುವವರಿಗೆ ಅನುಕೂಲ:

ಪೊಲೀಸ್‌ ಮತ್ತು ಮಿಲಿಟರಿ ಕ್ಯಾಂಟೀನ್‌ ಮಾದರಿಯಲ್ಲಿಯೇ ಅರಣ್ಯ ಸಿಬ್ಬಂದಿಗಾಗಿ ಅರಣ್ಯ ಕ್ಯಾಂಟೀನ್‌ಗಾಗಿ ಬೇಡಿಕೆ ಬರುತ್ತಿದೆ. ಈ ರೀತಿ ರಿಯಾಯಿತಿ ದರದಲ್ಲಿ ಪದಾರ್ಥಗಳನ್ನು ನೀಡುವ ಕ್ಯಾಂಟೀನ್‌ಗಳಿಂದಾಗಿ ಅರಣ್ಯದಲ್ಲಿ ಕೆಲಸ ಮಾಡುವ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ, ರಾಜ್ಯದಲ್ಲಿನ 500ಕ್ಕೂ ಹೆಚ್ಚಿನ ಕಳ್ಳಬೇಟೆ ತಡೆ ಶಿಬಿರದ 1500 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿಗೆ ಅನುಕೂಲವಾಗಲಿದೆ. ಅವರುಗಳು ಬಹುತೇಕ ಅವಧಿ ಅರಣ್ಯ ಮತ್ತು ಕಾಡಂಚಿನ ಗ್ರಾಮಗಳಲ್ಲಿಯೇ ಕಾಲ ಕಳೆಯುವುದರಿಂದ ಹಾಗೂ ವೇತನ ಶ್ರೇಣಿಯೂ ಕಡಿಮೆ ಇರುವ ಕಾರಣ ಅವರುಗಳಿಗೆ ಅನುಕೂಲವಾಗಲಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಗಳ ಆಗ್ರಹವಾಗಿದೆ.

‘ಕ್ಯಾಂಟೀನ್‌ ಮಾಡುತ್ತೇವೆ’

ಅರಣ್ಯ ಸಿಬ್ಬಂದಿಗೆ ಪಡಿತರ ಸೇರಿದಂತೆ ಅಗತ್ಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡಲು ಪೊಲೀಸ್‌ ಕ್ಯಾಂಟೀನ್‌ ಮಾದರಿ ಅರಣ್ಯ ಕ್ಯಾಂಟೀನ್‌ ಸ್ಥಾಪಿಸಬೇಕೆಂಬ ಬೇಡಿಕ ಹಲವು ವರ್ಷಗಳಿಂದ ಇದೆ. ತಮಿಳುನಾಡಿನಲ್ಲಿ ಪೊಲೀಸ್‌ ಕ್ಯಾಂಟೀನ್‌ಗಳಲ್ಲೇ ಅರಣ್ಯ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಪಡಿತರ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲಾಗುತ್ತದೆ. ಅದೇ ಮಾದರಿ ರಾಜ್ಯದಲ್ಲೂ ಅಳವಡಿಸುವ ಸಂಬಂಧ ತಮಿಳುನಾಡಿನಿಂದ ವರದಿ ತರಿಸಿಕೊಳ್ಳಲಾಗಿದೆ. ಅದನ್ನು ಅಧ್ಯಯನ ನಡೆಸಿ, ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್‌ ಕುಮಾರ್‌ ತಿಳಿಸಿದ್ದಾರೆ. 

Follow Us:
Download App:
  • android
  • ios