Asianet Suvarna News Asianet Suvarna News

ದೇಶದಲ್ಲೇ ಮೊದಲ ಬಾರಿಗೆ ಪಶುಗಳಿಗೂ ಆ್ಯಂಬುಲೆನ್ಸ್‌!

- 1962ಕ್ಕೆ ಕರೆ ಮಾಡಿದರೆ ರೈತರ ಮನೆ ಬಾಗಿಲಿಗೇ ಬಂದು ಚಿಕಿತ್ಸೆ

- 11 ಜಿಲ್ಲೆಗಳಲ್ಲಿ 70 ಆ್ಯಂಬುಲೆನ್ಸ್‌ಗಳ ಹಂಚಿಕೆ: ಸಚಿವ ಚವ್ಹಾಣ್‌

- ವಿನೂತನ ಯೋಜನೆಗೆ ಸಿಎಂ ಬೊಮ್ಮಾಯಿ ಚಾಲನೆ
 

for the First time in Country Mobile veterinary ambulance clinics to begin functioning in Karnataka San
Author
Bengaluru, First Published May 8, 2022, 4:30 AM IST

ಬೆಂಗಳೂರು (ಮೇ.8): ರಾಜ್ಯದ ರೈತರ ಜಾನುವಾರುಗಳಿಗೆ (Animals) ಮನೆ ಬಾಗಿಲಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕೇಂದ್ರ ಸರ್ಕಾರದ (Central government) ಅನುದಾನದೊಂದಿಗೆ ಆರಂಭಿಸಿರುವ ಸಂಚಾರಿ ಪಶು ಚಿಕಿತ್ಸಾ (Mobile veterinary ambulance) ವಾಹನಗಳನ್ನು (ಆ್ಯಂಬುಲೆನ್ಸ್‌) ಲೋಕಾರ್ಪಣೆ ಮಾಡಲಾಯಿತು.

ಕೇಂದ್ರ ಸರ್ಕಾರ ದೇಶಾದ್ಯಂತ 4000 ಸಂಚಾರಿ ಪಶು ಚಿಕಿತ್ಸಾ ವಾಹನ ಸೇವೆ ಆರಂಭಿಸಲು ಉದ್ದೇಶಿಸಿದ್ದು, ಕರ್ನಾಟಕಕ್ಕೆ (Karnataka) 275 ಘಟಕ ಮಂಜೂರು ಮಾಡಲಾಗಿದೆ. ಈ ಪೈಕಿ ಮೊದಲ ಹಂತದಲ್ಲಿ ಸುಸಜ್ಜಿತ 70 ವಾಹನಗಳನ್ನು ವಿಧಾನಸೌಧ (Vidhana Soudha) ಆವರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (cm basavaraj bommai) ಅವರು ಲೋಕಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ (Minister of Animal Husbandry Prabhu Chauhan), ‘ಪಶು ಸಂಗೋಪನಾ ಇಲಾಖೆಯ ಟೋಲ್‌ ಫ್ರೀ ಸಂಖ್ಯೆ 1962ಕ್ಕೆ ಕರೆ ಮಾಡುವ ಮೂಲಕ ಜಾನುವಾರು ಮಾಲೀಕರು ಪಶುವೈದ್ಯ ಸೇವೆ ಪಡೆಯಬಹುದು. ಈ ವಾಹನದಲ್ಲಿ ಒಬ್ಬ ವೈದ್ಯ, ಒಬ್ಬ ಸಹಾಯಕರು ಇರುತ್ತಾರೆ. ಚಿಕಿತ್ಸೆಗೆ ಬೇಕಾದ ಔಷಧಿ, ಪ್ರಾಥಮಿಕ ಚಿಕಿತ್ಸೆ, ಸಣ್ಣ ಪುಟ್ಟಆಪರೇಷನ್‌ ಮಾಡುವಂತಹ ಸೌಲಭ್ಯಗಳನ್ನು ಈ ವಾಹನ ಒಳಗೊಂಡಿರುತ್ತದೆ’ ಎಂದರು.

‘ದನ, ಎಮ್ಮೆ, ಕುರಿ, ಮೇಕೆ, ಹಂದಿಗಳು ಅನಾರೋಗ್ಯ ಸೇರಿದಂತೆ ಬೇರೆ ರೀತಿಯ ಸಮಸ್ಯೆಗೆ ಸಿಲುಕಿದಾಗ ರೈತರು, ಸಾಕಣೆ ಮಾಡುವವರು, ಹೈನುಗಾರಿಕೆಯಲ್ಲಿ ತೊಡಗಿರುವವರು ದೂರವಾಣಿ ಮಾಡಿ ವಿಷಯ ತಿಳಿಸಿದರೆ, ಸಂಬಂಧಪಟ್ಟವೈದ್ಯರಿಗೆ ತಿಳಿಸಿ ಚಿಕಿತ್ಸೆಗೆ ಕಳುಹಿಸಿಕೊಡಲಾಗುತ್ತದೆ. ರಾಜ್ಯ ಸರ್ಕಾರದ ಅನುದಾನದಿಂದ ಈಗಾಗಲೇ ಪಶು ಸಂಜೀವಿನಿ ಹೆಸರಿನಲ್ಲಿ ಜಾನುವಾರುಗಳಿಗೆ ತುರ್ತು ಸೇವೆ ನೀಡಲಾಗುತ್ತಿದ್ದು, ಇದೇ ಮಾದರಿ ಸೇವೆಯನ್ನು ಹೊಸ ವಾಹನಗಳು ನೀಡಲಿವೆ’ ಎಂದರು.

11 ಜಿಲ್ಲೆಗೆ 70 ವಾಹನ: ಮೊದಲ ಹಂತದಲ್ಲಿ ಬೆಂಗಳೂರು ನಗರಕ್ಕೆ 3 ವಾಹನ, ಬೆಂಗಳೂರು ಗ್ರಾಮಾಂತರ- 4, ಚಿಕ್ಕಬಳ್ಳಾಪುರ 10, ಚಿತ್ರದುರ್ಗ-10, ದಾವಣಗೆರೆ-6, ಕೋಲಾರ-8, ದಕ್ಷಿಣ ಕನ್ನಡ-2, ಹಾಸನ-9, ಕೊಡಗು-1, ಮೈಸೂರು-9 ಹಾಗೂ ಮಂಡ್ಯ ಜಿಲ್ಲೆಗೆ 8 ವಾಹನ ನೀಡಲಾಗಿದೆ. ಲೋಕಾರ್ಪಣೆ ನಂತರ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಜಾನುವಾರುಗಳ ರಕ್ಷಣೆ, ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಜಾನುವಾರು ಸಂಪತ್ತು ಹೆಚ್ಚಿಸಲು ಇನ್ನಷ್ಟುಪುಷ್ಟಿಕೊಡಲಾಗುವುದು ಎಂದರು.

ವೀರ‍್ಯ ಕೇಂದ್ರ: ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪುರುಷೋತ್ತಮ ರೂಪಾಲ ಮಾತನಾಡಿ, ರಾಜ್ಯದಲ್ಲಿ ಹಾಲಿ ಇರುವ ಜಾನುವಾರುಗಳ ‘ವೀರ್ಯ ಕೇಂದ್ರ’ವನ್ನು ಮೇಲ್ದರ್ಜೆಗೆ ಏರಿಸಲು ಸಹಕಾರ ನೀಡಲಾಗುವುದು, ತಳಿ ಸಂವರ್ಧನ ಕೇಂದ್ರಕ್ಕೆ ಎಲ್ಲ ರೀತಿಯ ಪ್ರೋತ್ಸಾಹ ಕೊಡಲಾಗುವುದು ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ಇಲಾಖಾ ಯೋಜನೆಗಳ ಕೊಡುಗೆಯನ್ನು ಗಣ್ಯರು ವಿತರಿಸಿದರು. ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ಪರಿಷತ್‌ ಸದಸ್ಯರಾದ ರಮೇಶ್‌ ಗೌಡ, ಗೋಪಿನಾಥ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಗೋವುಗಳ ರಕ್ಷಣೆ, ಅಭಿವೃದ್ಧಿಗೆ ಇನ್ನಷ್ಟುಹೆಚ್ಚಿನ ಒತ್ತು ನೀಡಲಾಗುವುದು. ಗೋವುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು, ಇನ್ನಷ್ಟುಗೋ ಶಾಲೆಗಳನ್ನು ಆರಂಭಿಸಲಾಗುವುದು. ಸುಮಾರು 2000 ಹೊಸ ಗೋವುಗಳ ತಳಿಯನ್ನು ರೈತರಿಗೆ ನೀಡಲಾಗುವುದು.
- ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಮೂಕ ಪ್ರಾಣಿಗಳಿಗೂ ಮನೆ ಬಾಗಿಲಿಗೆ ತೆರಳಿ ವೈದ್ಯಕೀಯ ಸೇವೆ ನೀಡಬೇಕೆಂಬ ಪರಿಕಲ್ಪನೆ, ಚಿಂತನೆ ಪ್ರಧಾನಿ ನರೇಂದ್ರ ಮೋದಿ ಅವರದ್ದು. ಹೀಗಾಗಿ ಇಡೀ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಸಂಚಾರಿ ಚಿಕಿತ್ಸಾ ವಾಹನ ಸೇವೆಯನ್ನು ಆರಂಭಿಸಲಾಗಿದೆ.
- ಪ್ರಭು ಬಿ. ಚವ್ಹಾಣ್‌ ಪಶು ಸಂಗೋಪನೆ ಸಚಿವ

ರಾಜ್ಯದಲ್ಲಿ ಹೈನುಗಾರಿಕೆ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ. ಉತ್ತಮ ಜಾನುವಾರುಗಳ ತಳಿಗಳ ಅಭಿವೃದ್ಧಿಗೆ ಹಾಲಿ ಇರುವ ‘ವೀರ್ಯ ಕೇಂದ್ರ’ವನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ.
- ಪುರುಷೋತ್ತಮ ರೂಪಾಲ ಕೇಂದ್ರ ಸಚಿವ
 

Follow Us:
Download App:
  • android
  • ios