Asianet Suvarna News Asianet Suvarna News

13.10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿ

ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದ  ಸುಮಾರು 13.10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ.
 

Flood Effect 13 Lakh Hectare Crop Loss in Karnataka snr
Author
Bengaluru, First Published Oct 21, 2020, 7:36 AM IST

ಬೆಂಗಳೂರು (ಅ.21):  ರಾಜ್ಯದಲ್ಲಿ ಏಪ್ರಿಲ್‌ನಿಂದ ಅಕ್ಟೋಬರ್‌ 19ರವರೆಗೆ ಸುರಿದ ಸುರಿದ ಭಾರೀ ಮಳೆಯಿಂದಾಗಿ ಬೆಳಗಾವಿ, ರಾಯಚೂರು, ಕಲಬುರಗಿ, ವಿಜಯಪುರ ಸೇರಿದಂತೆ ರಾಜ್ಯದ 24 ಜಿಲ್ಲೆಗಳ 1386 ಗ್ರಾಮಗಳು ತೀವ್ರ ಹಾನಿ ಅನುಭವಿಸಿದ್ದು, ಪ್ರಾಥಮಿಕ ಹಂತದ ಲೆಕ್ಕಾಚಾರದಂತೆ ಸುಮಾರು 13.10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ.

ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಸರಾಸರಿ ಮಳೆ ಶೇ. 27 ರಷ್ಟುಹೆಚ್ಚಾಗಿದೆ. ಕೆಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ದುಪ್ಪಟ್ಟು ಮಳೆ ಸುರಿದಿದೆ. ಬೆಳಗಾವಿಯಲ್ಲಿ ಮಳೆಯ ಅಬ್ಬರದ ಜೊತೆಗೆ ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ ಸುರಿದು ಜಲಾಶಯಗಳಿಗೆ ಬಿಟ್ಟಹೆಚ್ಚುವರಿ ನೀರು ಸಹ ಹಾನಿ ಹೆಚ್ಚಾಗಲು ಕಾರಣವಾಗಿದೆ. ಕಳೆದ ಏಪ್ರಿಲ್‌ ಒಂದರಿಂದ ಅಕ್ಟೋಬರ್‌ 19 ರವರೆಗೆ 13.10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಇನ್ನೂ ಕೆಲವು ಪ್ರದೇಶಗಳಲ್ಲಿ ಸಾಕಷ್ಟುನೀರು ನಿಂತಿರುವುದರಿಂದ ಬೆಳೆ ನಾಶದಿಂದ ಆಗಿರುವ ನಷ್ಟದ ಮೊತ್ತವನ್ನು ಸಮೀಕ್ಷೆ ಮಾಡಲು ಆಗದಂತಹ ಸ್ಥಿತಿ ಇದೆ.

ಮಳೆಗೆ 3000 ಕೋಟಿ ರು. ಹಾನಿ : ಜಿಲ್ಲಾಧಿಕಾರಿ ಖಾತೆಗೆ ಹಣ ...

ಮೂಲ ಸೌಕರ್ಯಗಳಿಗೆ ಹಾನಿ:

30,164 ಕಿ.ಮೀ. ರಸ್ತೆ ಹಾನಿಯಾಗಿದ್ದು, ಈ ಪೈಕಿ ರಾಜ್ಯ ಹೆದ್ದಾರಿ ಮತ್ತು ಮುಖ್ಯ ಜಿಲ್ಲಾ ರಸ್ತೆ 4692 ಕಿ.ಮೀ. ಗ್ರಾಮೀಣ ರಸ್ತೆ 22,800 ಕಿ.ಮೀ., ನಗರ ರಸ್ತೆ 2672 ಕಿ.ಮೀ. ಸೇತುವೆ ಮತ್ತು ಕಲ್ವರ್ಟ್‌ 3419, ಕಿರು ನೀರಾವರಿ ಮತ್ತು ಜಿ.ಪಂ ಕೆರೆಗಳು 826, ವಿದ್ಯುತ್‌ ಕಂಬಗಳು 27,224, ವಿದ್ಯುತ್‌ ಮಾರ್ಗ 11,765 ಕಿ.ಮೀ, ಹಾಗೂ 2258 ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳು ಹಾನಿಯಾಗಿವೆ.

ಮಳೆಯಿಂದಾಗಿ ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಸಾಕಷ್ಟುಹಾನಿಯಾಗಿದೆ. 2925 ಶಾಲೆಗಳು, ಅಂಗನವಾಡಿ ಮತ್ತು ಸಮುದಾಯ ಕೇಂದ್ರಗಳು 1979, ಪ್ರಾಥಮಿಕ ಆರೋಗ್ಯ ಕೇಂದ್ರ 155, ಕುಡಿಯುವ ನೀರು ಪೂರೈಕೆ ಘಟಕ 219 ಹಾಗೂ 119 ನೀರು ಸರಬರಾಜು ಮತ್ತು ನೈರ್ಮಲ್ಯ ಘಟಕಗಳು ಹಾನಿಯಾಗಿವೆ. 5923 ಮನೆಗಳು ಸಂಪೂರ್ಣ ಹಾಗೂ 34,176 ಮನೆಗಳು ಭಾಗಶಃ ಹಾನಿಯಾಗಿವೆ

1.66 ಲಕ್ಷ ಜನರಿಗೆ ತೊಂದರೆ:

ಮಳೆ, ಪ್ರವಾಹದಿಂದ 1,66,919 ಜನರು ಸಂಕಷ್ಟಕ್ಕೆ ಸಿಲುಕಿದ್ದು, ಈವರೆಗೆ 39,662 ಜನರನ್ನು ತೆರವು ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಈ ಪೈಕಿ 244 ಪರಿಹಾರ ಕೇಂದ್ರಗಳಲ್ಲಿ 34,798 ಜನರು ಆಶ್ರಯ ಪಡೆದಿದ್ದಾರೆ. ಇದೇ ವೇಳೆ 142 ಜನರು ಮೃತಪಟ್ಟಿದ್ದಾರೆ, ಆರು ಜನರು ನಾಪತ್ತೆಯಾಗಿದ್ದಾರೆ. ಪ್ರಮುಖವಾಗಿ ರಾಯಚೂರು ಜಿಲ್ಲೆಯಲ್ಲಿ 17 ಜನ,ಕಲಬುರಗಿ 11, ವಿಜಯಪುರ ಹಾಗೂ ಬೆಳಗಾವಿಯಲ್ಲಿ ತಲಾ 10, ಚಿಕ್ಕಮಗಳೂರು 9, ಬಾಗಲಕೋಟೆ, ಚಿತ್ರದುರ್ಗ, ಬಾಗಲಕೋಟೆ, ಉಡುಪಿಯಲ್ಲಿ ತಲಾ ಎಂಟು ಜನರು ಮಳೆ ಅವಘಡಕ್ಕೆ ಬಲಿಯಾಗಿದ್ದಾರೆ. ಇದೇ ವೇಳೆ 2708ಕ್ಕೂ ಹೆಚ್ಚು ಜಾನುವಾರುಗಳು ಸತ್ತಿವೆ.

3 ಜಿಲ್ಲೆಗಳು ಹೆಚ್ಚು ಬಾಧಿತ

ಮಳೆಯಿಂದಾಗಿ ಪ್ರಮುಖವಾಗಿ ಬೆಳಗಾವಿ,ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚಿನ ಬೆಳೆ, ಮನೆ, ಆಸ್ತಿ-ಪಾಸ್ತಿ, ಜೀವ ಹಾನಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 1500 ಮನೆ ಸಂಪೂರ್ಣ ಹಾಗೂ 3779 ಮನೆಗಳು ಭಾಗಶಃ ಹಾನಿಯಾಗಿವೆ. ಸುಮಾರು 50ಕ್ಕೂ ಹೆಚ್ಚು ಜಾನುವಾರುಗಳು ಸತ್ತಿವೆ. ಅದೇ ರೀತಿ ಕಲಬುರಗಿಯಲ್ಲಿ 1453 ಮನೆ ಸಂಪೂರ್ಣ, 7934 ಭಾಗಶಃ ಹಾನಿಯಾಗಿವೆ. ಒಂದು ಸಾವಿರಕ್ಕೂ ಹೆಚ್ಚು ಜಾನುವಾರು ಸೇರಿದಂತೆ ಕುರಿ, ಕೋಳಿ ಇತ್ಯಾದಿಗಳು ಸತ್ತಿವೆ. ಬಾಗಲಕೋಟೆಯಲ್ಲಿ 1125 ಮನೆಗಳು ಸಂಪೂರ್ಣ 4116 ಮನೆಗಳು ಭಾಗಶಃ ಹಾನಿಯಾಗಿದೆ.

ಪರಿಹಾರ ಕಾರ್ಯಕ್ಕೆ ಕೇಂದ್ರ ಸರ್ಕಾರ ಈವರೆಗೆ 13 ಎನ್‌ಡಿಆರ್‌ಎಫ್‌ ತಂಡದ ಜೊತೆಗೆ ಅಗತ್ಯ ಪ್ರಮಾಣದ ಹೆಲಿಕಾಪ್ಟರ್‌ಗಳನ್ನು ಒದಗಿಸಿದೆ. ರಾಜ್ಯ ಸರ್ಕಾರದ ನಾಲ್ಕು ಎಸ್‌ಡಿಆರ್‌ಎಫ್‌ ತಂಡಗಳು ಪರಿಹಾರ ಕಾರ್ಯದಲ್ಲಿ ತೊಡಗಿವೆ. ಸುಮಾರು 100 ಬೋಟ್‌ಗಳ ಮೂಲಕ ಜನರನ್ನು ರಕ್ಷಿಸುವ ಕಾರ್ಯ ಮಾಡಲಾಗುತ್ತಿದೆ.

Follow Us:
Download App:
  • android
  • ios