Asianet Suvarna News Asianet Suvarna News

ತಗ್ಗಿದ ಮಳೆ, ತಗ್ಗದ ನೆರೆ: ಕಲ್ಯಾಣ ಕರ್ನಾಟಕ ಸೇರಿ ಕೆಲವೆಡೆ ಪ್ರವಾಹ ಮುಂದುವರಿಕೆ

ಕೃಷ್ಣಾ ನದಿಗೆ 1.70 ಲಕ್ಷ ಕ್ಯೂಸೆಕ್‌ನಷ್ಟು ಒಳಹರಿವಿದ್ದರೆ, ಆಲಮಟ್ಟಿ ಜಲಾಶಯದಿಂದ 1.50 ಲಕ್ಷ ಕ್ಯೂಸೆಕ್‌, ಬಸವಸಾಗರ ಜಲಾಶಯದಿಂದ 1.35 ಲಕ್ಷ ಕ್ಯೂಸೆಕ್‌ನಷ್ಟು ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ 30 ಸೇತುವೆಗಳು ಮುಳುಗಡೆಯಾಗಿವೆ. ಹೀಗಾಗಿ, ನದಿ ದಂಡೆಗಳ 100 ಮೀಟರ್‌ ವ್ಯಾಪ್ತಿಯಲ್ಲಿ ಆಗಸ್ಟ್‌ 8ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಜನ, ಜಾನುವಾರುಗಳ ಪ್ರವೇಶ ನಿಷೇಧಿಸಲಾಗಿದೆ.

Flood Continues in Some Places Including Kalyan Karnataka grg
Author
First Published Jul 28, 2023, 5:20 AM IST

ಬೆಂಗಳೂರು(ಜು.28):  ಕಳೆದೆರಡು ದಿನಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪುಷ್ಯ ಮಳೆಯ ಆರ್ಭಟ ಕಡಿಮೆಯಾಗಿದೆ. ಆದರೆ, ನೆರೆ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ. ಈ ಮಧ್ಯೆ, ಮಹಾರಾಷ್ಟ್ರದ ಘಟ್ಟಪ್ರದೇಶ ಹಾಗೂ ಬೆಳಗಾವಿ, ಕಲಬುರಗಿ ಸೇರಿ ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವುದರಿಂದ ಈ ಭಾಗದ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಆತಂಕ ಸೃಷ್ಟಿಯಾಗಿದೆ. 

ಕೃಷ್ಣಾ ನದಿಗೆ 1.70 ಲಕ್ಷ ಕ್ಯೂಸೆಕ್‌ನಷ್ಟು ಒಳಹರಿವಿದ್ದರೆ, ಆಲಮಟ್ಟಿ ಜಲಾಶಯದಿಂದ 1.50 ಲಕ್ಷ ಕ್ಯೂಸೆಕ್‌, ಬಸವಸಾಗರ ಜಲಾಶಯದಿಂದ 1.35 ಲಕ್ಷ ಕ್ಯೂಸೆಕ್‌ನಷ್ಟು ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ 30 ಸೇತುವೆಗಳು ಮುಳುಗಡೆಯಾಗಿವೆ. ಹೀಗಾಗಿ, ನದಿ ದಂಡೆಗಳ 100 ಮೀಟರ್‌ ವ್ಯಾಪ್ತಿಯಲ್ಲಿ ಆಗಸ್ಟ್‌ 8ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಜನ, ಜಾನುವಾರುಗಳ ಪ್ರವೇಶ ನಿಷೇಧಿಸಲಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ 7.8 ಮಿ.ಮೀ. ಮಳೆ: 20.70 ಲಕ್ಷ ರೂ. ನಷ್ಟ

ಈ ಮಧ್ಯೆ, ಮಳೆಗೆ ಮತ್ತೆ ನಾಲ್ವರು ಬಲಿಯಾಗಿದ್ದಾರೆ. ಮನೆಯ ಗೋಡೆ ಕುಸಿದು ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಕಾಶಿನಾಥ ಸುತಾರ (23) ಎಂಬ ಯುವಕ, ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಕೋಗಳಿಯಲ್ಲಿ ನಾಗಮ್ಮ (60) ಎಂಬ ವೃದ್ಧೆ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹುತ್ತಳ್ಳಿಯಲ್ಲಿ ಅಡಕೆ ತೋಟದ ಕಾಲುವೆಗೆ ಬಿದ್ದು ಶಂಕರಪ್ಪ ಗೌಡ (56) ಎಂಬುವರು ಅಸುನೀಗಿದ್ದಾರೆ. ಮಣಿಪಾಲದಲ್ಲಿ ಮಳೆಯಿಂದಾಗಿ ಲಾv್ಜ…ನ ತಾರಸಿ ಮೇಲಿಂದ ಜಾರಿ ಬಿದ್ದು ಸಾಧು ಎಂ.ದೇವಾಡಿಗ (65) ಎಂಬುವರು ಮೃತಪಟ್ಟಿದ್ದಾರೆ. ಇದೇ ವೇಳೆ, ಮುಂಜಾಗ್ರತಾ ಕ್ರಮವಾಗಿ ಬಾಗಲಕೋಟೆ ಹಾಗೂ ಹಾಸನ ಜಿಲ್ಲೆಯ ಶಾಲೆಗಳಿಗೆ ಶುಕ್ರವಾರ ರಜೆ ನೀಡಲಾಗಿದೆ.

ಕೃಷ್ಣೆಯಲ್ಲಿ ಪ್ರವಾಹ:

ಉತ್ತರ ಕರ್ನಾಟಕದ ಜೀವನದಿ ಕೃಷ್ಣಾಗೆ 1.70 ಲಕ್ಷ ಕ್ಯೂಸೆಕ್‌ನಷ್ಟುನೀರು ಹರಿದು ಬರುತ್ತಿದ್ದು, ಬೆಳಗಾವಿ ಜಿಲ್ಲೆಯೊಂದರಲ್ಲೇ 30 ಸೇತುವೆಗಳು ಮುಳುಗಡೆಯಾಗಿವೆ. ಹೀಗಾಗಿ, ನದಿ ದಂಡೆಗಳ 100 ಮೀಟರ್‌ ವ್ಯಾಪ್ತಿಯಲ್ಲಿ ಆಗಸ್ಟ್‌ 8ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಜನ, ಜಾನುವಾರುಗಳ ಪ್ರವೇಶ ನಿಷೇಧಿಸಲಾಗಿದೆ. ಆಲಮಟ್ಟಿಜಲಾಶಯ ಕೂಡ ಭರ್ತಿಯಾಗುವ ಹಂತ ತಲುಪಿದ್ದು, ಜಲಾಶಯದ 24 ಗೇಟ್‌ಗಳನ್ನು ತೆರೆದು 1.50 ಲಕ್ಷ ಕ್ಯೂಸೆಕ್‌ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯದಿಂದ 1.35 ಲಕ್ಷ ಕ್ಯೂಸೆಕ್‌ ನೀರು ಹೊರಹೋಗುತ್ತಿದೆ.

ಬೀದರ್‌ ಜಿಲ್ಲೆಯ ಕಾರಂಜಾ ಜಲಾಶಯ ಭರ್ತಿಯಾಗಿದ್ದು, 4,300 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಸತತ ಎರಡನೇ ದಿನವೂ ಲಕ್ಷ ಕ್ಯೂಸೆಕ್‌ಗಿಂತ ಅಧಿಕ ಪ್ರಮಾಣದ ನೀರು ಹರಿದು ಬಂದಿದ್ದು, ಜಲಾಶಯ ಅರ್ಧದಷ್ಟುಭರ್ತಿಯಾಗಿದೆ. ಹಾವೇರಿ ಜಿಲ್ಲೆ ಹೊಸರಿತ್ತಿಯಲ್ಲಿ ರಾಘವೇಂದ್ರಸ್ವಾಮಿಗಳ ಮೂಲ ಸಂಸ್ಥಾನ ಮಠದ ಆವರಣಕ್ಕೆ ವರದಾ ನದಿಯ ನೀರು ನುಗ್ಗಿದೆ. ಕಲಬುರಗಿಯಲ್ಲಿ ಕಾಗಿಣಾ ನದಿ ಪ್ರವಾಹದಿಂದ ಮಲಖೆಡ್‌ ಉತ್ತರಾದಿ ಮಠ, ಜಯತೀರ್ಥರ ವೃಂದಾವನಗಳು ಜಲಾವೃತವಾಗಿವೆ.

ನಾಗರಹೊಳೆಯಲ್ಲಿ ಸಫಾರಿ ತಾತ್ಕಾಲಿಕ ಸ್ಥಗಿತ:

ನಾಗರಹೊಳೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಮಳೆ ಹಾಗೂ ಗಾಳಿಯ ಪ್ರಮಾಣ ಹೆಚ್ಚಾಗಿದ್ದು, ಜು.31ರವರೆಗೆ ತಾತ್ಕಾಲಿಕವಾಗಿ ಸಫಾರಿ ಸ್ಥಗಿತಗೊಳಿಸಲಾಗಿದೆ. ಶೃಂಗೇರಿಯ ತುಂಗಾ ತೀರದಲ್ಲಿರುವ ಕಪ್ಪೆಶಂಕರ ದೇಗುಲ ಜಲಾವೃತವಾಗಿದ್ದು, ಶೃಂಗೇರಿ ತಾಲೂಕಿನ ಸಿರಿಮನೆ ಫಾಲ್ಸ್‌ಗೆ ಪ್ರವಾಸಿಗರಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಕೊಪ್ಪ ತಾಲೂಕಿನಲ್ಲಿ ಭೂಮಿ ಕುಸಿತ:

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹೆರೂರು ಗ್ರಾಮದಲ್ಲಿ ಸುಮಾರು 90 ಅಡಿಗಳಷ್ಟುಭೂಮಿ ಕುಸಿದಿದೆ. ಚಿಕ್ಕಮಗಳೂರಿನ ಮೂಡಿಗೆರೆ ಸಮೀಪದ ಹಾಂದಿ ಗ್ರಾಮದ ಬಳಿ ಚಿಕ್ಕಮಗಳೂರು-ಮಂಗಳೂರು ಕೆಎಸ್‌ಆರ್‌ಟಿಸಿ ಬಸ್‌ ಸಂಚರಿಸುತ್ತಿದ್ದ ವೇಳೆ ಮರ ಉರುಳಿ ಬಿದ್ದಿದ್ದು, ಬಸ್‌ ಸ್ವಲ್ಪದರಲ್ಲಿ ಬಚಾವಾಗಿದೆ. ಧಾರವಾಡ ಜಿಲ್ಲೆ ಅಳ್ನಾವರ ತಾಲೂಕಿನ ಶಿವನಗರ ಹಾಗೂ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಉಲಿವಾಲಗಳಲ್ಲಿ ಸರ್ಕಾರಿ ಶಾಲೆಯ ಕಟ್ಟಡಗಳು ಕುಸಿದು ಬಿದ್ದಿವೆ. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ವಸ್ತಾರಿಯಲ್ಲಿ ಶಾಲೆಯ ಮೇಲ್ಛಾವಣಿಯ ಸಿಮೆಂಟ್‌ ಪ್ಲಾಸ್ಟರ್‌ ಕುಸಿದು ಬಿದ್ದಿದೆ. ಆದರೆ, ಶಾಲೆಗಳಿಗೆ ರಜೆ ಇದ್ದುದರಿಂದ ದೊಡ್ಡ ಅನಾಹುತ ತಪ್ಪಿದೆ.

ಇದೇ ವೇಳೆ, ಯಾದಗಿರಿ, ಗದಗ, ದ.ಕ., ಉಡುಪಿ, ಹಾಸನ, ರಾಯಚೂರು, ಕಲಬುರಗಿ, ಚಿಕ್ಕಮಗಳೂರು, ಕೊಡಗು, ವಿಜಯಪುರ, ಉ.ಕನ್ನಡ, ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯಲ್ಲಿ 400ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಇಂದು 5 ಜಿಲ್ಲೆಗಳಲ್ಲಿ 20 ಸೆಂ.ಮೀ. ಮಳೆ?

ಬೆಂಗಳೂರು: ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೀದರ್‌ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ 11ರಿಂದ 20 ಸೆಂ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಈ ಜಿಲ್ಲೆಗಳಿಗೆ ‘ಆರೆಂಜ್‌ ಅಲರ್ಚ್‌’ ಎಚ್ಚರಿಕೆ ನೀಡಿದೆ. ಬೆಳಗಾವಿ, ಬಾಗಲಕೋಟೆ, ರಾಯಚೂರು, ವಿಜಯಪುರ, ಯಾದಗಿರಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲೂ ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.

ಬತ್ತಿ ಹೋಗಿದ್ದ ಬಸವಸಾಗರ ಜಲಾಶಯಕ್ಕೆ ಬಂತು ಜೀವಕಳೆ: ಕೃ‍ಷ್ಣ ನದಿ ತೀರದಲ್ಲಿ ಪ್ರವಾಹ ಭೀತಿ

ಇಂದು ಬಾಗಲಕೋಟೆ, ಹಾಸನದಲ್ಲಿ ಶಾಲೆ ರಜೆ

ಹಾಸನ/ಬಾಗಲಕೋಟೆ: ಭಾರೀ ಮಳೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಹಾಸನ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸತತ 3ನೇ ದಿನವಾದ ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿಗಳು ಅಂಗನವಾಡಿ, ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಈ ಜಿಲ್ಲೆಗಳಲ್ಲಿ ಸದ್ಯ ಮಳೆ ಇಳಿಮುಖವಾಗಿದ್ದರೂ ಹಾಸನದಲ್ಲಿ ಗುಡ್ಡ ಕುಸಿತದ ಕಾರಣ ಹಾಗೂ ಬಾಗಲಕೋಟೆಯಲ್ಲಿ ಪ್ರವಾಹದ ಕಾರಣ ರಜೆ ಘೋಷಿಸಲಾಗಿದೆ.

4 ಮಂದಿ ಸಾವು

ಕಾಗಿಣಾ ನದಿ ಪ್ರವಾಹದಿಂದಾಗಿ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಸೇತುವೆ ಜಲಾವೃತವಾಗಿ ಕಲಬುರಗಿ-ಹೈದರಾಬಾದ್‌ ನಡುವೆ ಸಂಪರ್ಕ ಕಡಿತಗೊಂಡಿದೆ.

Follow Us:
Download App:
  • android
  • ios