Asianet Suvarna News Asianet Suvarna News

ಕರ್ನಾಟಕದಲ್ಲಿ ಮಳೆಗೆ ಮತ್ತೆ 5 ಬಲಿ: 9 ಜಿಲ್ಲೆಗಳಿಗೆ ಇಂದು ಆರೆಂಜ್‌ ಅಲರ್ಟ್‌

ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ ರಾಜ್ಯದ 9ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರವಾಹ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ 6 ತಾಲೂಕುಗಳು, ಉ.ಕನ್ನಡ ಜಿಲ್ಲೆಯ 5 ತಾಲೂಕುಗಳು, ಉಡುಪಿ, ದ.ಕನ್ನಡ, ಕೊಡಗು ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ಬುಧವಾರವೂ ರಜೆ ಘೋಷಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 2 ದಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Five Killed Due to Rain Related Disaster in Karnataka grg
Author
First Published Jul 26, 2023, 4:16 AM IST

ಬೆಂಗಳೂರು(ಜು.26): ಕೊಡಗು, ಕರಾವಳಿ, ಮಲೆನಾಡು ಸೇರಿ ರಾಜ್ಯದ 14ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದ್ದು, ಮಳೆ ಸಂಬಂಧಿ ಅವಘಡಗಳಲ್ಲಿ ಮಂಗಳವಾರ ಮತ್ತೆ ಐವರು ಮೃತಪಟ್ಟಿದ್ದಾರೆ. ಈ ಮಧ್ಯೆ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ ರಾಜ್ಯದ 9ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರವಾಹ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ 6 ತಾಲೂಕುಗಳು, ಉ.ಕನ್ನಡ ಜಿಲ್ಲೆಯ 5 ತಾಲೂಕುಗಳು, ಉಡುಪಿ, ದ.ಕನ್ನಡ, ಕೊಡಗು ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ಬುಧವಾರವೂ ರಜೆ ಘೋಷಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 2 ದಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಸತತ ಮಳೆಗೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಒಂದು ವರ್ಷ ಐದು ತಿಂಗಳ ಹೆಣ್ಣು ಮಗು ಸ್ಪೂರ್ತಿ ಮೃತಪಟ್ಟಿದ್ದಾಳೆ. ಅದೃಷ್ಟವಶಾತ್‌ ಆಕೆಯ ಪಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ತಿವೋಳಿವಾಡದಲ್ಲಿ ಹೊಲ ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್‌ ಮಗುಚಿ ಪಾಂಡುರಂಗ ಲಾಟಗಾವಂಕರ (61) ಎಂಬುವರು ಮೃತಪಟ್ಟರೆ, ವಿಜಯಪುರದಲ್ಲಿ ಮನೆಯ ಚಾವಣಿ ಕುಸಿದು ಕನ್ನೂರ ಗ್ರಾಮದ ಶಿವಮ್ಮ ನೂರೊಂದಪ್ಪ ಸಾವಳಗಿ (60) ಎಂಬುವರು ಸಾವನ್ನಪ್ಪಿದ್ದಾರೆ. ಬೀದರ್‌ ಜಿಲ್ಲೆ ಬಸವಕಲ್ಯಾಣ ತಾಲೂಕಿನ ದನ್ನೂರಿನಲ್ಲಿ ಹಳ್ಳ ದಾಟುವಾಗ ಕೆಳಗೆ ಬಿದ್ದು, ಮಲ್ಲಪ್ಪ ಶರಣಪ್ಪ ಕರೆಪನೋರ್‌ (25) ಎಂಬುವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಮಧ್ಯೆ, ಹಾವೇರಿ ತಾಲೂಕಿನ ಮಾಳಪುರದಲ್ಲಿ ಎರಡು ದಿನದ ಹಿಂದೆ ಗೋಡೆ ಕುಸಿದು ಗಾಯಗೊಂಡಿದ್ದ 3 ವರ್ಷದ ಬಾಲಕಿ ಭಾಗ್ಯ ಚಳ್ಳಮರದ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಮೃತಳಾಗಿದ್ದಾಳೆ. ಸೋಮವಾರ ಕೂಡ 5 ಮಂದಿ ಅಸುನೀಗಿದ್ದರು.

ಮಳೆ ಅಬ್ಬರ ಅವಘಡಗಳ ಸರಣಿ, ಮುಳ್ಳಯ್ಯನಗಿರಿಯಲ್ಲಿ ಭೂ ಕುಸಿತ , ಪ್ರವಾಸಿಗರಿಗೆ ನಿರ್ಬಂಧ

ರಾಜ್ಯದ ವಿವಿಧೆಡೆ ಭೂಕುಸಿತ ಪ್ರವಾಹ ಮುಂದುವರಿಕೆ:

ಇದೇ ವೇಳೆ, ಗದಗ, ದ.ಕನ್ನಡ, ಕೊಡಗು, ಉ.ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 65ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ರಸ್ತೆಯ ಮೇಲೆ ಗುಡ್ಡ ಕುಸಿದಿದ್ದರಿಂದ ಅರ್ಧ ದಿನ ವಾಹನಗಳ ಸಂಚಾರ ಬಂದ್‌ ಆಗಿತ್ತು. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮರಗಿಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತ ಉಂಟಾಗಿದ್ದು, ರಸ್ತೆ ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬೆಳಗಾವಿ ಜಿಲ್ಲೆಯ ಲೋಂಡಾ-ರಾಮನಗರ ಮಾರ್ಗದ ಮಧ್ಯೆ ನಿರ್ಮಾಣ ಹಂತದ ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿ ಕುಸಿದಿದೆ.

ದ.ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟಮುಳುಗಡೆ ಸ್ಥಿತಿಯಲ್ಲೇ ಮುಂದುವರಿದಿದ್ದು, ಇದರ ಬಳಿಯ ಅಂಗಡಿಗಳಿಗೆ ನೀರು ನುಗ್ಗಿದೆ. ಕಲಬುರಗಿ ಜಿಲ್ಲೆ ಚಿಂಚೋಳಿಯ ಮುಲ್ಲಾಮಾರಿ ಜಲಾಶಯದಿಂದ 4 ಗೇಟ್‌ಗಳ ಮೂಲಕ 6 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಬಿಡಲಾಗುತ್ತಿದ್ದು, 9 ಸೇತುವೆಗಳು ಜಲಾವೃತಗೊಂಡಿವೆ. ಚಿಂಚೋಳಿಯ ಹಲೆ ಸುಲೇಪೇಟ್‌ ಬಡಾವಣೆಯ 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ತುಂಗಾನದಿಯಲ್ಲಿ ಪ್ರವಾಹ ಬಂದಿದ್ದು, ಶೃಂಗೇರಿ ಮಠದ ತುಂಗಾನದಿ ತೀರದ ಕಪ್ಪೆಶಂಕರ ದೇಗುಲ, ಸಂಧ್ಯಾವಂದನ ಮಂಟಪ ಜಲಾವೃತಗೊಂಡಿದೆ.

ಕೊಡಗಿನ ಕುಶಾಲನಗರದ ಸಾಯಿ ಬಡಾವಣೆ ಜಲಾವೃತವಾಗಿದ್ದು, ಬಡಾವಣೆಯ 25ಕ್ಕೂ ಹೆಚ್ಚು ಮನೆಗಳವರು ಸೋಮವಾರ ರಾತ್ರೋರಾತ್ರಿ ಮನೆ ಖಾಲಿ ಮಾಡಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ 63 ಗ್ರಾಮ, ಕೊಡಗಿನ 100ಕ್ಕೂ ಹೆಚ್ಚು ಮನೆಗಳು ಮುಳುಗುವ ಭೀತಿ ಎದುರಿಸುತ್ತಿವೆ.

ಡ್ಯಾಂಗಳಿಗೆ ಭಾರಿ ನೀರು

ಕೊಡಗಿನಲ್ಲಿ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ100 ಅಡಿಗೆ ತಲುಪಿದೆ. ಕಳೆದ ಐದು ದಿನಗಳ ಅವಧಿಯಲ್ಲಿ ಅಣೆಕಟ್ಟೆಗೆ 10 ಅಡಿಗಳಷ್ಟುನೀರು ಹರಿದು ಬಂದಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕೃಷ್ಣಾ ಜಲಾನಯನ ಪ್ರದೇಶಕ್ಕೆ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದೆ. ಆಲಮಟ್ಟಿ ಜಲಾಶಯ ಅರ್ಧದಷ್ಟು( ಗರಿಷ್ಠ 519 ಮೀಟರ್‌) ಭರ್ತಿಯಾಗಿದ್ದು, 15,000 ಕ್ಯುಸೆಕ್‌ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ಕೇರಳದ ವಯನಾಡಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಿದೆ. ಜಲಾಶಯ ಭರ್ತಿಯಾಗಲು ಕೇವಲ 2.73 ಅಡಿ (ಗರಿಷ್ಠ 2284) ಬಾಕಿ ಇದೆ. ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ, ವೇದಗಂಗಾ, ದೂಧಗಂಗಾ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ ಸೇರಿದಂತೆ ಎಲ್ಲ ನದಿ, ಹಳ್ಳಗಳು ತುಂಬಿ ಹರಿಯುತ್ತಿದ್ದು, 21 ಸೇತುವೆಗಳು ಜಲಾವೃತವಾಗಿವೆ. ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ನದಿ ತೀರದ ಜನರು ಜಾನುವಾರು ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳಲಾರಂಭಸಿದ್ದಾರೆ.

9 ಜಿಲ್ಲೆಗಳಿಗೆ ಇಂದು ಆರೆಂಜ್‌ ಅಲರ್ಟ್‌

ಬೆಂಗಳೂರು: ರಾಜ್ಯಾದ್ಯಂತ ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಲಬುರಗಿ, ಉಡುಪಿ, ಬೀದರ್‌, ಚಿಕ್ಕಮಗಳೂರು, ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಬುಧವಾರ ‘ಆರೆಂಜ್‌ ಅಲರ್ಟ್’ ನೀಡಲಾಗಿದೆ.

ಮಳೆ ಆಗದೇ ಇದ್ರೂ ಆಗಿದೆ ಎಂದು ಸಚಿವರಿಗೆ ತಪ್ಪು ಮಾಹಿತಿ ನೀಡಿದ ಕೃಷಿ ಅಧಿಕಾರಿಗಳು!

ಆಲಮಟ್ಟಿ ಡ್ಯಾಂ ಅರ್ಧ ಭರ್ತಿ, ಕೆಆರೆಎಸ್‌ 100

ಬೆಂಗಳೂರು: ಮಹಾರಾಷ್ಟ್ರದಿಂದ ಭಾರಿ ನೀರು ಹರಿದುಬರುತ್ತಿರುವುದರಿಂದ ಆಲಮಟ್ಟಿಜಲಾಶಯ ಅರ್ಧದಷ್ಟುಭರ್ತಿಯಾಗಿದೆ. ಕೊಡಗಿನಲ್ಲಿ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್‌ ನೀರಿನ ಮಟ್ಟ100 ಅಡಿಗೆ ತಲುಪಿದೆ. ಕಬಿನಿ ಜಲಾಶಯ ಭರ್ತಿಗೆ ಕೇವಲ 2.73 ಅಡಿ ಬಾಕಿ ಇದೆ.

ಸಚಿವರ ಜತೆ ಜಿಲ್ಲೆಗಳಿಗೆ ಭೇಟಿ; ಇಂದು ಡೀಸಿ ಸಭೆ

ಮಳೆ ಹಿನ್ನೆಲೆಯಲ್ಲಿ ಬುಧವಾರ ಡೀಸಿ, ಜಿಪಂ ಸಿಇಒಗಳ ಸಭೆ ಕರೆದಿದ್ದೇನೆ. ನಾನು ಹಾಗೂ ಸಚಿವರು ಪರಿಸ್ಥಿತಿ ಅವಲೋಕನಕ್ಕೆ ಜಿಲ್ಲಾ ಪ್ರವಾಸ ಕೈಗೊಂಡಿದ್ದೇವೆ. ಈಗ ಹಾವೇರಿಗೆ ಭೇಟಿ ನೀಡಿದ್ದೇನೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಇತರೆ ಜಿಲ್ಲೆಗೂ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

Follow Us:
Download App:
  • android
  • ios