ರಾಜ್ಯ ದಿವಾಳಿಯಾಗದಂತೆ ನೋಡಿಕೊಳ್ತೇನೆ, ಆರ್ಥಿಕ ಪರಿಸ್ಥಿತಿಯನ್ನೂ ಉತ್ತಮಪಡಿಸುತ್ತೇನೆ, ಇದೇ ಮೊದಲ ಬಾರಿ ಕೊರತೆ ಬಜೆಟ್‌ ಮಂಡಿಸಿದ್ದೇನೆ, 2024ಕ್ಕೆ ಉಳಿತಾಯ ಮುಂಗಡಪತ್ರ: ಮುಖ್ಯಮಂತ್ರಿ ಸಿದ್ದರಾಮಯ್ಯ 

ವಿಧಾನ ಪರಿಷತ್ತು(ಜು.15): ‘ಉಚಿತ ಗ್ಯಾರಂಟಿಗಳ ಜಾರಿಯಿಂದ ರಾಜ್ಯಗಳು ದಿವಾಳಿಯಾಗುತ್ತವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ, ನಾನು ಹೇಳುತ್ತಿದ್ದೇನೆ, ರಾಜ್ಯದ ಜನರಿಗೆ ಕೊಟ್ಟಮಾತಿನಂತೆ ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತೇವೆ. ಜೊತೆಗೆ ರಾಜ್ಯ ಆರ್ಥಿಕವಾಗಿ ದಿವಾಳಿ ಆಗದಂತೆಯೂ ನೋಡಿಕೊಳ್ಳುತ್ತೇನೆ. ಬಿಜೆಪಿಯವರು ಹಾಳು ಮಾಡಿರುವ ರಾಜ್ಯದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿ ಮುಂದಿನ ಬಾರಿ ಉಳಿತಾಯ ಬಜೆಟ್‌ ಮಂಡಿಸಿ ತೋರಿಸುತ್ತೇನೆ.’ ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಶುಕ್ರವಾರ ಠೇಂಕರಿಸಿದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮೇಲ್ಮನೆಯಲ್ಲಿ ಶುಕ್ರವಾರ 3 ಗಂಟೆಗೂ ಹೆಚ್ಚು ಕಾಲ ಸುದೀರ್ಘ ಉತ್ತರ ನೀಡಿದ ಅವರು, ಹಣಕಾಸು ಸಚಿವನಾಗಿ ನಾನು ಇದುವರೆಗೆ ಮಂಡಿಸಿದ ಬಜೆಟ್‌ಗಳಲ್ಲಿ ಇದೇ ಮೊದಲ ಬಾರಿಗೆ 12,522 ಕೋಟಿ ರು. ಕೊರತೆ ಬಜೆಟ್‌ ಮಂಡಿಸಿದ್ದೇನೆ. ಬಿಜೆಪಿಯವರಿಂದ ಹಾಳಾಗಿರುವ ರಾಜ್ಯದ ಆರ್ಥಿಕ ಸ್ಥಿತಿಯನ್ನು ನಮ್ಮ ಗ್ಯಾರಂಟಿಗಳ ಅನುಷ್ಠಾನದ ಜೊತೆಗೆ ಉತ್ತಮ ಸ್ಥಿತಿಗೆ ತಂದು ಮುಂದಿನ ವರ್ಷ ಉಳಿತಾಯ ಬಜೆಟ್‌ ಮಂಡಿಸಿ ತೋರಿಸುತ್ತೇನೆ ಎಂದರು.

ಕೊಟ್ಟ ವಾಗ್ದಾನದಂತೆ ಸಿದ್ದರಾಮಯ್ಯ ಸರ್ಕಾರ ನಡೆಯಲಿ: ಶ್ರೀಕುಮಾರ

ಬಿಜೆಪಿ ನಾಯಕರು ನಮ್ಮ ಕೈಯಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಆಗುವುದಿಲ್ಲ, ಅಷ್ಟೊಂದು ಹಣ ಎಲ್ಲಿಂದ ತರುತ್ತಾರೆ ಎಂದುಕೊಂಡಿದ್ದರು. ಆದರೆ, ನಾವು ಅಧಿಕಾರಕ್ಕೆ ಬಂದು ಇನ್ನೂ 2 ತಿಂಗಳು ಆಗಿಲ್ಲ. ಈಗಾಗಲೇ ಶಕ್ತಿ, ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್‌ 16ರಂದು ಅನುಷ್ಠಾನಗೊಳಿಸಿ ಪ್ರತಿ ಮನೆಯ ಯಜಮಾನಿಯ ಅಕೌಂಟಿಗೆ ಪ್ರತಿ ತಿಂಗಳು ತಲಾ 2000 ರು. ಹಣ ಪಾವತಿಸುತ್ತೇವೆ. ಇನ್ನು ಬಾಕಿ ಇರುವ ಯುವನಿಧಿ ಯೋಜನೆ ಜಾರಿಗೆ ಸಮಯವಿದೆ. ಅದನ್ನು ನವೆಂಬರ್‌ ಇಲ್ಲವೇ ಡಿಸೆಂಬರ್‌ ವೇಳೆಗೆ ಜಾರಿಗೊಳಿಸುತ್ತೇವೆ ಎಂದರು.

ಪ್ರತೀ ವರ್ಷ ನಮ್ಮ ಐದೂ ಯೋಜನೆಗಳ ಅನುಷ್ಠಾನಕ್ಕೆ 52 ಸಾವಿರ ಕೋಟಿ ರು.ನಷ್ಟುಅನುದಾನ ಬೇಕು. ಆದರೆ, ಈ ವರ್ಷ ಈಗಾಗಲೇ ಕೆಲ ತಿಂಗಳು ಕಳೆದುಹೋಗಿರುವುದರಿಂದ 35 ಸಾವಿರ ಕೋಟಿ ರು. ಬೇಕು. ಅಷ್ಟೂಅನುದಾನವನ್ನು ಐದೂ ಗ್ಯಾರಂಟಿಗಳಿಗೆ ಅಗತ್ಯಾನುಸಾರ ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

ಬಡ-ಮಧ್ಯಮ ವರ್ಗದವರ ಮೇಲೆ ತೆರಿಗೆ ಬರೆ ಹಾಕದೆ ಗ್ಯಾರಂಟಿಗಳನ್ನು ಜಾರಿ ಮಾಡುತ್ತಿದ್ದೇವೆ. ವಾಣಿಜ್ಯ ತೆರಿಗೆ, ಮೋಟಾರ್‌ ವಾಹನ ತೆರಿಗೆ, ಅಬಕಾರಿ ತೆರಿಗೆ ಹೆಚ್ಚಳ ಮಾಡಿ ಅದರಿಂದ ಬರುವ ತೆರಿಗೆ, ಒಂದಷ್ಟುಸಾಲದ ಮೂಲಕ ಕಾರ್ಯಕ್ರಮಗಳಿಗೆ ಹಣ ಹೊಂದಿಸಲಾಗುವುದು. ಈ ಐದೂ ಗ್ಯಾರಂಟಿಗಳ ಅನುಷ್ಠಾನದೊಂದಿಗೆ ಫಲಾನುಭವಿಗಳ ಪ್ರತಿ ಕುಟುಂಬಕ್ಕೆ ಪ್ರತೀ ತಿಂಗಳು ಸುಮಾರು 5000 ರು.ವರೆಗೆ ಹಣ ಸಿಗಲಿದೆ. ಬಹುತೇಕ ಇದು ನಮ್ಮ ಹೆಣ್ಣುಮಕ್ಕಳ ಕೈಗೆ ಸಿಗುತ್ತದೆ. ಹೆಣ್ಣುಮಕ್ಕಳು ಆರ್ಥಿಕವಾಗಿ ಸಬಲರಾದರೆ ಸಮಾಜ ಆರ್ಥಿಕವಾಗಿ ಬಲಗೊಳ್ಳುತ್ತದೆ. ಇದು ಯೂನಿವರ್ಸಲ್‌ ಬೇಸಿಕ್‌ ಇನ್‌ಕಂ ಆಗಲಿದೆ. ಜಗತ್ತಿನ ಕೆಲ ಮುಂದುವರೆದ ರಾಜ್ಯಗಳಲ್ಲಿ ಇಂತಹ ಕಾರ್ಯಕ್ರಮಗಳಿವೆ ಎಂದರು.

ಹೊರಗುತ್ತಿಗೆಯಲ್ಲೂ ಬಡವರಿಗೆ ಮೀಸಲಾತಿ: ಬೆಂಗಳೂರಿನಲ್ಲಿ ನಡೆದ ಸಂವಾದದಲ್ಲಿ ಸಿಎಂ ಸಿದ್ದು ಹೇಳಿಕೆ

ಜನರ ಕೈಯಲ್ಲಿ ಹಣ ಹೆಚ್ಚಾಗುವುದರಿಂದ ಆ ಹಣವನ್ನು ಬೇರೆ ಬೇರೆ ವಸ್ತುಗಳ ಖರೀದಿ, ಮತ್ತಿತರೆ ಕೆಲಸಕ್ಕೆ ಬಳಕೆ ಮಾಡುತ್ತಾರೆ. ಇದರಿಂದ ಸಮಾಜವೂ ಆರ್ಥಿಕವಾಗಿ ಸಬಲವಾಗುತ್ತದೆ. ಆರ್ಥಿಕ ವಹಿವಾಟೂ ಹೆಚ್ಚಾಗಲಿದ್ದು ಸರ್ಕಾರಕ್ಕೆ ತೆರಿಗೆಯು ಹೆಚ್ಚಾಗಿ ಬರಲಿದೆ. ಗ್ಯಾರಂಟಿಗಳ ಜಾರಿ ಜೊತೆಗೆ ಇನ್ನಿತರೆ ಅಭಿವೃದ್ಧಿ ಯೋಜನೆಗಳನ್ನೂ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

ದೇಶದ ಇತಿಹಾಸದಲ್ಲಿ ಇಂತಹ ಉಚಿತ ಗ್ಯಾರಂಟಿಗಳನ್ನು ಜಾರಿ ಮಾಡಿದ ಮೊದಲ ರಾಜ್ಯ ಕರ್ನಾಟಕ. ಹಾಗಾಗಿ ಬಿಜೆಪಿಯವರು ಈ ಯೋಜನೆಗಳನ್ನು ವಿರೋಧಿಸುವ, ಟೀಕಿಸುವ ಮೊದಲು ಇವುಗಳ ಹಿಂದಿನ ಉದ್ದೇಶ, ಫಲಿತಾಂಶ ಏನು ಬರಬಹುದು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.