ಕೊಟ್ಟ ವಾಗ್ದಾನದಂತೆ ಸಿದ್ದರಾಮಯ್ಯ ಸರ್ಕಾರ ನಡೆಯಲಿ: ಶ್ರೀಕುಮಾರ
ಈಗಾಗಲೇ 5 ಗ್ಯಾರಂಟಿ ಕಾರ್ಡ್‌ಗಳನ್ನು ಜಾರಿಗೊಳಿಸಲು ಕ್ಷಿಪ್ರಗತಿಯಲ್ಲಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ. ಇದರೊಟ್ಟಿಗೆ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದ ಶ್ರೀಕುಮಾರ
ಬಾದಾಮಿ(ಜು.09): ರಾಜ್ಯ ಸರ್ಕಾರಿ ನೌಕರರಿಗೆ 2022ರ ಜುಲೈನಿಂದ 7ನೇ ವೇತನ ಪರಿಷ್ಕರಣೆ ಜಾರಿಗೊಳಿಸಬೇಕಾಗಿದೆ. ಎನ್.ಪಿ.ಎಸ್ ಪದ್ಧತಿ ರದ್ದುಗೊಳಿಸಿ, ನಿಶ್ಚಿತ ಪಿಂಚಣಿ ಮರುಸ್ಥಾಪಿಸಲಾಗುವುದು ಹಾಗೂ ಖಾಲಿ ಇರುವ ಹುದ್ದೆಗಳನ್ನು ಒಂದು ವರ್ಷದೊಳಗೆ ಭರ್ತಿ ಮಾಡುವುದಾಗಿ ಪ್ರಸ್ತುತ ಸರ್ಕಾರ ವಾಗ್ದಾನ ಮಾಡಿದೆ. ಅದರಂತೆ ಸರ್ಕಾರ ನಡೆದುಕೊಳ್ಳಬೇಕು ಎಂದು ಅಖಿಲ ಭಾರತ ನೌಕರರ ಒಕ್ಕೂಟದ ಕಾರ್ಯದರ್ಶಿ ಶ್ರೀಕುಮಾರ ಒತ್ತಾಯಿಸಿದರು.
ಅವರು ಶನಿವಾರ ತಾಲೂಕಿನ ಮಹಾಕೂಟದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಂಘಟನಾ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿ, ರಾಜ್ಯದ ಜನತೆಯು ಹೊಸ ಭರವಸೆಗಳೊಂದಿಗೆ ಹೊಸ ಸರ್ಕಾರ ಅಧಿಕಾರಕ್ಕೆ ತಂದಿದ್ದಾರೆ. ಕೋವಿಡ್ ರೋಗಾಣು ಹರಡುವಿಕೆ ಹಿನ್ನೆಲೆಯಲ್ಲಿ, ಹಸಿವಿನ ಹಾಹಾಕಾರ, ಲಾಕ್‌ಡೌನ್ ಪ್ರಹಾರ, ಭೀಕರ ಆರ್ಥಿಕ ಸಂಕಷ್ಟದ ಜೊತೆಗೆ ಬೆಲೆಯೇರಿಕೆಯ ಬಿಸಿ ನಿರುದ್ಯೋಗದ ಬವಣೆ, ಇತರೆ ಬಾಧೆಗಳಿಗೆ ಸಿಲುಕಿ ಬಸವಳಿದಿದ್ದ ಜನತೆಯಲ್ಲಿ ಹೊಸ ಸರ್ಕಾರ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿದೆ. ಈ ದಿಸೆಯಲ್ಲಿ ಈಗಾಗಲೇ 5 ಗ್ಯಾರಂಟಿ ಕಾರ್ಡ್‌ಗಳನ್ನು ಜಾರಿಗೊಳಿಸಲು ಕ್ಷಿಪ್ರಗತಿಯಲ್ಲಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ. ಇದರೊಟ್ಟಿಗೆ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ 377 ಕೋಟಿ ಕಾರ್ಪಸ್ ಫಂಡ್ ಪೊಲಿಟಿಕ್ಸ್, ಏನಿದು ಗಲಾಟೆ?
ಒಕ್ಕೂಟದ ಗೌರವಾಧ್ಯಕ್ಷ ಮಹಾದೇವಯ್ಯ ಮಠಪತಿ ಮಾತನಾಡಿ, ರಾಜ್ಯದ 7 ಕೋಟಿ ಜನತೆಗೆ ಜಾರಿಯಾಗುವ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು 7.73 ಲಕ್ಷ ಮಂಜೂರಾದ ಹುದ್ದೆಗಳ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ ಕೇವಲ 5.20 ಲಕ್ಷ. ಭರ್ತಿಯಾಗದೇ ಖಾಲಿ ಉಳಿದ ಹುದ್ದೆಗಳು 2.60 ಲಕ್ಷದಷ್ಟಿದೆ. ವೇತನ ಸೌಲಭ್ಯಗಳ ನಷÜ್ಟಮತ್ತು ಖಾಲಿ ಹುದ್ದೆಗಳ ಹೊರೆ ಹಾಲಿ ನೌಕರರ ಮೇಲೆ ಬಿದ್ದಿದೆ. ಹೀಗಾಗಿ ಉಳಿಕೆ ಹುದ್ದೆಗಳನ್ನು ತುಂಬಿ ನೌಕರರ ಮೇಲಿರುವ ಹೊರೆ ಕಡಿಮೆ ಮಾಡಬೇಕು ಎಂದ ಅವರು, ಲಾಕ್‌ಡೌನ್ ಸಂದರ್ಭದ ನೆಪವೊಡ್ಡಿ ನೌಕರರ 2020ನೇ ಸಾಲಿನ ಗಳಿಕೆ ರಜೆ ನಗದೀಕರಣ ಸೌಲಭ್ಯ ರದ್ದುಗೊಳಿಸಲಾಯಿತು ಮತ್ತು 18 ತಿಂಗಳ ತುಟ್ಟಿಭತ್ಯೆ ಮುಟ್ಟುಗೋಲು ಹಾಕಿಕೊಂಡಿದ್ದು, ಇದುವರೆಗೂ ಇದನ್ನು ಬಿಡುಗಡೆ ಮಾಡಿರುವುದಿಲ್ಲ. ಇದರ ಒಟ್ಟು ಮೌಲ್ಯ .4,500 ಕೋಟಿಯಾಗುತ್ತದೆ. ನೌಕರರ ಈ ಆರ್ಥಿಕ ನಷÜ್ಟವನ್ನು ಭರಿಸುವಂತೆ ಸರ್ಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಒಕ್ಕೂಟವು ಕಾರ್ಯಪ್ರವೃತ್ತವಾಗಿದೆ ಎಂದರು.
ಆಡಳಿತ ಸುಧಾರಣೆಗಳ ನೆಪದಲ್ಲಿ ಇಲಾಖೆ ಮತ್ತು ನಿಗಮ ಮಂಡಳಿಗಳನ್ನು ವಿಲೀನಗೊಳಿಸುವ ಮೂಲಕ ಹುದ್ದೆಗಳ ರದ್ದತಿಯ ಕ್ರಮಗಳನ್ನು ಹಿಂಪಡೆಯಬೇಕಿದೆ. ಆಡಳಿತ ಸುಧಾರಣೆ ಆಯೋಗ-2ರ ಶಿಫಾರಸ್ಸುಗಳಲ್ಲಿ ಕೆಲವು ಉತ್ತಮ ಅಂಶಗಳಿದ್ದಾಗ್ಯೂ ಸಹ ಆಹಾರ, ಆರೋಗ್ಯ ಮತ್ತು ಶಿಕ್ಷಣ ಮತ್ತು ಇನ್ನೂ ಹತ್ತಾರು ಇಲಾಖೆಗಳ ಸೇವೆಗಳನ್ನು ಖಾಸಗೀಕರಣ ಮಾಡುವ ಅಂಶಗಳಿವೆ. ರಾಜ್ಯ ನೌಕರರ ಈ ಎಲ್ಲ ಸಮಸ್ಯೆಗಳನ್ನು ಕುರಿತು ಚರ್ಚಿಸಲು ಹಾಗೂ ಸಂಘಟನೆಯ ಜವಾಬ್ದಾರಿಗಳನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಒಕ್ಕೂಟವು ರಾಜ್ಯಮಟ್ಟದ ಸಂಘಟನಾ ಕಾರ್ಯಾಗಾರ ಹಮ್ಮಿಕೊಂಡಿದೆ ಎಂದು ಹೇಳಿದರು.
ಈ ವೇಳೆ ರಾಜ್ಯಾಧ್ಯಕ್ಷ ಹೆಚ್.ಎಸ್.ಜೈಕುಮಾರ್, ಕಾರ್ಯಾಧ್ಯಕ್ಷ ಎನ್.ಶೋಭಾ ಲೋಕನಾಗಣ್ಣ, ಹಿರಿಯ ಉಪಾಧ್ಯಕ್ಷ ಸುರೇಶ ಜೀಬಿ, ಗೌರವ ಸಲಹೆಗಾರ ಚಂದ್ರಶೇಖರ ಲೆಂಡಿ ಹಾಜರಿದ್ದರು.