ಕರ್ನಾಟಕದಲ್ಲಿ ಹಂದಿ ಜ್ವರದ ಆತಂಕ ಈಗಾಗಲೇ ಹಲವು ದಿನಗಳಿಂದ ಇದೆ. ಇದೀಗ ಜ್ವರದಿಂದ ಬಳಲಿ ಮೃತಪಟ್ಟ ಕರ್ನಾಟಕದ ಐವರಿಗೆ ಹಂದಿ ಜ್ವರ ಇತ್ತೆಂಬುವುದು ಖಚಿತವಾಗಿದೆ.

ಬೆಂಗಳೂರು:ರಾಜ್ಯದಲ್ಲಿ ಹಂದಿ ಜ್ವರ (ಎಚ್‌1ಎನ್‌1) ಮಹಾಮಾರಿ ಮತ್ತೆ ತಾಂಡವವಾಡಲು ಆರಂಭಿಸಿದ್ದು, ಈವರೆಗೆ ಐದು ಮಂದಿಯನ್ನು ಬಲಿ ಪಡೆದಿದೆ. ಈ ಐವರ ಪೈಕಿ ಕಳೆದ 13 ದಿನಗಳ ಅಂತರದಲ್ಲೇ ನಾಲ್ಕು ಮಂದಿ ಹಂದಿ ಜ್ವರಕ್ಕೆ ಬಲಿಯಾಗಿದ್ದಾರೆ. ಜತೆಗೆ ಸೋಂಕಿತರ ಸಂಖ್ಯೆಯೂ ದಿನೇ ದಿನೇ ಹೆಚ್ಚಳ ಆಗುತ್ತಿರುವುದರಿಂದ ಜನರ ಆತಂಕ ದುಪ್ಪಟ್ಟಾಗಿದೆ.

ಆರೋಗ್ಯ ಇಲಾಖೆ ಇದೇ ಮೊದಲ ಬಾರಿಗೆ ರಾಜ್ಯ​ದಲ್ಲಿ ಹಂದಿ ಜ್ವರ​ದಿಂದ ಸಾವು ಉಂಟಾ​ಗಿ​ರು​ವು​ದನ್ನು ಒಪ್ಪಿ​ಕೊ​ಳ್ಳು​ತ್ತಿದ್ದು, ಶುಕ್ರ​ವಾರ ನೀಡಿ​ರುವ ಪ್ರಕ​ಟ​ಣೆ​ಯಲ್ಲಿ ಐವರು ಈ ಮಹಾ​ಮಾ​ರಿಗೆ ಬಲಿ​ಯಾ​ಗಿ​ದ್ದಾರೆ ಎಂದು ತಿಳಿ​ಸಿ​ದೆ. ಆದರೆ, ಈ ಐದು ಮಂದಿ ಯಾರು ಮತ್ತು ಯಾವಾಗ ಈ ಸಾವು ಉಂಟಾ​ಗಿದೆ ಎಂಬ ಬಗ್ಗೆ ಸ್ಪಷ್ಟತೆ ನೀಡಿ​ಲ್ಲ.

‘ಕನ್ನ​ಡ​ಪ್ರ​ಭ’ಕ್ಕೆ ಲಭ್ಯ​ವಾ​ಗಿ​ರುವ ಆರೋಗ್ಯ ಇಲಾ​ಖೆಯ ಜಂಟಿ ನಿರ್ದೇ​ಶ​ಕರ ವರದಿ ಪ್ರಕಾರ ರಾಜ್ಯ​ದಲ್ಲಿ ಹಂದಿ ಜ್ವರಕ್ಕೆ ಮೊದಲ ಬಲಿ ಆಗಸ್ಟ್‌ 27ರಂದೇ ಆಗಿದೆ.

ವಾಸ್ತ​ವ​ವಾಗಿ ಆರೋಗ್ಯ ಇಲಾ​ಖೆಯು ಶುಕ್ರ​ವಾರದವ​ರೆಗೂ ರಾಜ್ಯ​ದಲ್ಲಿ ಹಂದಿ ಜ್ವರ​ದಿಂದ ಸಾವು ಉಂಟಾ​ಗಿದೆ ಎಂಬು​ದನ್ನು ಘೋಷಿ​ಸಿ​ರ​ಲಿಲ್ಲ. ಈ ಬಗ್ಗೆ ಮಾಧ್ಯ​ಮ​ಗಳು ಪ್ರಶ್ನಿ​ಸಿ​ದಾಗ ಹಂದಿ​ಜ್ವ​ರ​ದಿಂದ ಸಾವುಂಟಾ​ಗಿ​ರು​ವುದು ದೃಢ​ಪ​ಟ್ಟಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಆದರೆ, ಶುಕ್ರ​ವಾರ ಪ್ರಕ​ಟಣೆ ನೀಡಿದ ರಾಜ್ಯ​ದಲ್ಲಿ ಐದು ಸಾವು ಆಗಿದೆ ಎಂದು ತಿಳಿ​ಸಿದೆ. ಆದರೆ, ಹಂದಿ​ಜ್ವ​ರ​ದಿಂದ ಮೃತ​ಪಟ್ಟಈ ಐವರು ಯಾರು, ಯಾವಾಗ ಮೃತ​ಪ​ಟ್ಟರು ಎಂಬ ವಿವ​ರ​ವನ್ನು ಮಾಧ್ಯ​ಮ​ಗ​ಳಿಗೆ ಅಧಿ​ಕೃ​ತ​ವಾಗಿ ಬಿಡು​ಗಡೆ ಮಾಡಿ​ಲ್ಲ.

ಕನ್ನ​ಡ​ಪ್ರ​ಭಕ್ಕೆ ಲಭ್ಯ​ವಾ​ಗಿ​ರುವ ಆರೋಗ್ಯ ಇಲಾ​ಖೆಯ ಜಂಟಿ ನಿರ್ದೇ​ಶ​ಕರು ನೀಡಿ​ರುವ ವರದಿಯಲ್ಲಿ ರಾಜ್ಯ​ದಲ್ಲಿ ಐವರು ಹಂದಿ ಜ್ವರಕ್ಕೆ ಬಲಿ​ಯಾ​ಗಿ​ದ್ದಾರೆ. ಮೊದಲ ಸಾವು ಆಗಸ್ಟ್‌ 27ಕ್ಕೆ ಸಂಭ​ವಿ​ಸಿದೆ. ಅಕ್ಟೋಬರ್‌ 10ರ ವೇಳೆಗೆ ಹಂದಿ ಜ್ವರಕ್ಕೆ ನಾಲ್ವರು ಬಲಿ​ಯಾಗಿದ್ದಾರೆ. ಒಟ್ಟಾರೆ ಇತ್ತೀಚಿನ ದಿವಸಗಳಲ್ಲಿ ಐವರು ಸಾವನ್ನಪ್ಪಿದ್ದಾರೆ.

‘ಹಂದಿ​ಜ್ವ​ರಕ್ಕೆ ಸಾವು ಉಂಟಾ​ಗು​ತ್ತಿದೆ ಎಂಬು​ದನ್ನು ಒಪ್ಪಿ​ಕೊ​ಳ್ಳಲು ತಡ ಮಾಡಿದ್ದು ಏಕೆ’ ಎಂದು ಆರೋಗ್ಯ ಇಲಾಖೆಯ ಅಧಿ​ಕಾ​ರಿ​ಗ​ಳನ್ನು ಪ್ರಶ್ನಿ​ಸಿ​ದರೆ, ‘ಜಿಲ್ಲಾ ಮಟ್ಟದಲ್ಲಿ ರಚಿಸಿರುವ ಡೆತ್‌ ಆಡಿಟ್‌ ಸಮಿತಿ ವಿಶ್ಲೇಷಿಸಿ ದೃಢಪಡಿಸುವುದು ತಡವಾಗಿದ್ದರಿಂದ ಈ ವಿಳಂಬ​ವಾ​ಗಿದೆ’ ಎಂದು ಅಧಿ​ಕಾ​ರಿಗಳು ಹೇಳು​ತ್ತಾರೆ.

13 ದಿನದಲ್ಲೇ ನಾಲ್ಕು ಸಾವು:

ಎಚ್‌1ಎನ್‌1 ಮಹಾಮಾರಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಕಳೆದ ಹತ್ತು ದಿನಗಳಲ್ಲೇ 155 ಮಂದಿಯಲ್ಲಿ ಎಚ್‌1ಎನ್‌1 ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ನಾಲ್ವರು ಮೃತಪಟ್ಟಿರುವುದು ಮತ್ತಷ್ಟುಆತಂಕ ಹೆಚ್ಚಿಸಿದೆ.

ತುಮಕೂರಿನ 24 ವರ್ಷದ ಮಹಿಳೆ, ರಾಮನಗರದ 55 ವರ್ಷದ ಪುರುಷ, ಬಳ್ಳಾರಿಯ 39 ವರ್ಷದ ಪುರುಷ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 37 ವರ್ಷದ ಮಹಿಳೆ ಎಚ್‌1ಎನ್‌1 ಸೋಂಕಿನಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಜಂಟಿ ನಿರ್ದೇಶಕರು ಆರೋಗ್ಯ ಇಲಾಖೆಗೆ ಅ.10 ರಂದು ಮಾಹಿತಿ ನೀಡಿದ್ದು, ಆರೋಗ್ಯ ಇಲಾಖೆಯು ಶುಕ್ರವಾರ ಸಂಜೆ ಇದನ್ನು ದೃಢಪಡಿಸಿದೆ.

ಮೃತಪಟ್ಟನಾಲ್ಕು ಮಂದಿಯಲ್ಲಿ ಮೂವರು ಬೆಂಗಳೂರಿನ ರಾಜೀವ್‌ ಗಾಂಧಿ ಎದೆಗೂಡಿನ ಆಸ್ಪತ್ರೆ ಹಾಗೂ ಮತ್ತೊಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತ ನಾಲ್ವ ರ ಪ್ರಯೋಗಾಲಯ ವರದಿಯಲ್ಲೂ ಎಚ್‌1ಎನ್‌1 ದೃಢಪಟ್ಟಿದೆ.

ಕಟ್ಟೆಚ್ಚರಕ್ಕೆ ಆದೇಶ

ರಾಜ್ಯದಲ್ಲಿ ಹಂದಿ ಜ್ವರ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲು ಆದೇಶ ನೀಡಲಾಗಿದೆ. ಅ.12ರಂದು ಶುಕ್ರವಾರವೂ 63 ಶಂಕಿತ ಪ್ರಕರಣ ವರದಿಯಾಗಿದ್ದು, 15 ಮಂದಿಗೆ ಎಚ್‌1ಎನ್‌1 ಖಚಿತಪಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲಾ ಪ್ರಾಥಮಿಕ, ಜಿಲ್ಲಾ ಆಸ್ಪತ್ರೆಗಳಲ್ಲೂ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಯಾವುದೇ ರೋಗ ಲಕ್ಷಣಗಳು ಕಂಡು ಬಂದರೂ ನಿರ್ಲಕ್ಷ್ಯ ವಹಿಸದೆ ಚಿಕಿತ್ಸೆ ನೀಡಬೇಕು. ಜತೆಗೆ ಸೋಂಕಿತರ ವಾಸ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಹಂದಿ ಜ್ವರ ಹತೋಟಿಗೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಹಂದಿ​ಜ್ವ​ರಕ್ಕೆ ಬಲಿ​ಯಾ​ದ​ವರು ಯಾ​ರು?

‘ಕನ್ನಡಪ್ರಭಕ್ಕೆ’ ಲಭ್ಯವಾಗಿರುವ ಮಾಹಿತಿ ಪ್ರಕಾರ, ತುಮಕೂರಿನ ಬಿ.ಆರ್‌. ಕಾವ್ಯ ಕಾಮಾಕ್ಷಿ (24) ಅವರು ಆಗಸ್ಟ್‌ 24ರಂದು ಆಸ್ಪತ್ರೆಗೆ ದಾಖಲಾಗಿದ್ದು, ಆಗಸ್ಟ್‌ 27ರಂದೇ ಮೃತಪಟ್ಟಿದ್ದಾರೆ.

ರಾಮನಗರದ ಗೋವಿಂದನ್‌ (55) ಅವರು ಸೆಪ್ಟೆಂಬರ್‌ 25ರಂದು ಆಸ್ಪತ್ರೆಗೆ ದಾಖಲಾಗಿದ್ದು, ಅ.5 ರಂದು ಎಚ್‌1ಎನ್‌1 ದೃಢಪಟ್ಟು ಟಾಮಿಫä್ಲ್ಯ ನೀಡಲಾಗಿದೆ. ಆದರೆ, ಅ.7 ರಂದು ಮೃತಪಟ್ಟಿದ್ದಾರೆ.

ಬಳ್ಳಾರಿಯ ಸಿದ್ದಪ್ಪ ಎಚ್‌. ದೋಣಿ (39) ಅವರು, ಸೆ.11 ರಂದು ಆಸ್ಪತ್ರೆಗೆ ದಾಖಲಾಗಿ ಸೆ.30 ರಂದು ಮೃತಪಟ್ಟಿದ್ದರು. ಬೆಂಗಳೂರು ಗ್ರಾಮಾಂತರದ ಬೆಸವನಹಳ್ಳಿ ಗ್ರಾಮದ ಗಂಗರತ್ನಮ್ಮ (37) ಅವರು ಅ.6 ರಂದು ಆಸ್ಪತ್ರೆಗೆ ದಾಖಲಾಗಿ, ಅ.10 ರಂದು ಮೃತಪಟ್ಟಿದ್ದರು.

ಪ್ರಕರಣಗಳನ್ನು ಗಮನಿಸಿದರೆ ಆಗಸ್ಟ್‌ 27ರಂದು ಮೃತಪಟ್ಟಕಾವ್ಯ ಕಾಮಾಕ್ಷಿ ಅವರ ವಿವರಗಳನ್ನು ಅ.10ಕ್ಕೆ ತಡವಾಗಿ ಆರೋಗ್ಯ ಇಲಾಖೆಗೆ ನೀಡಲಾಗಿದೆ. ಜತೆಗೆ, ಇಷ್ಟೂಪ್ರಕರಣಗಳ ಮಾಹಿತಿಯು ಆರೋಗ್ಯ ಇಲಾಖೆಗೆ ಅ.10 ರಂದೇ ಬಂದರೂ ಮಾಧ್ಯಮಗಳಿಗೆ ಬಿಡುಗಡೆ ಮಾಡದೆ ಅ.12ರಂದು ಶುಕ್ರವಾರ ಸಂಜೆ ಬಿಡುಗಡೆ ಮಾಡಿದೆ. ಈ ವಿಳಂಬ ನೀತಿ ಅನುಸರಿಸಲು ಸೂಕ್ತ ಕಾರಣವನ್ನು ಆರೋಗ್ಯ ಇಲಾಖೆ ನೀಡಿಲ್ಲ.

ರೋಗ ಲಕ್ಷಣ

ಎಚ್‌1ಎನ್‌1 (ಹಂದಿ ಜ್ವರ) ಸೋಂಕು ಉಂಟಾದ ರೋಗಿಯಲ್ಲಿ ಶ್ವಾಸಕೋಶದ ಸೋಂಕು ಕಾಣಿಸಿಕೊಂಡು ನೆಗಡಿ, ಕೆಮ್ಮು, ಜ್ವರದ ಜೊತೆಗೆ ಉಸಿರಾಟದ ತೊಂದರೆ, ತೀವ್ರವಾದ ಮೈ-ಕೈ ನೋವು ಕಾಣಿಸಿಕೊಳ್ಳುತ್ತದೆ. ಇಂತಹ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.

ಮೂರು ಹಂತದಲ್ಲಿ ಕಾಣಿಸಿಕೊಳ್ಳುವ ಎಚ್‌1ಎನ್‌1ಗೆ ಆರಂಭದಲ್ಲೇ ಚಿಕಿತ್ಸೆ ಪಡೆಯದಿದ್ದರೆ ಪ್ರಾಣ ಹಾನಿ ಸಂಭವಿಸುತ್ತದೆ. ಮೊದಲ ಹಂತದಲ್ಲಿ ಸಾಮಾನ್ಯ ಜ್ವರ, ಕೆಮ್ಮು, ನೆಗಡಿ, ವಾಕರಿಕೆ ಕಾಣಿಸಕೊಳ್ಳುತ್ತದೆ. ಇದಕ್ಕೆ ಚಿಕಿತ್ಸೆಯೊಂದಿಗೆ 1-2 ದಿನಗಳ ನಿಗಾ ವಹಿಸಬೇಕಾಗುತ್ತದೆ. ಎರಡನೇ ಹಂತದಲ್ಲಿ ಜ್ವರ, ಕೆಮ್ಮು ಹೆಚ್ಚಾಗಿ ಹಳದಿ ಕಫ, ಅತೀ ಬೇಧಿ ಅಥವಾ ವಾಂತಿ, ನೆಗಡಿ, ಗಂಟಲು ಕೆರೆತ ಉಂಟಾಗುತ್ತದೆ.

3ನೇ ಹಂತದಲ್ಲಿ ತೀವ್ರ ಸ್ವರೂಪದ ಜ್ವರ ಕಫದಲ್ಲಿ ರಕ್ತ, ಉಬ್ಬಸ, ನ್ಯುಮೋನಿಯಾದೊಂದಿಗೆ ತೀವ್ರ ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಹಂತದಲ್ಲಿ ರೋಗಿ ಗಂಭೀರ ಹಂತಕ್ಕೆ ತಲುಪುತ್ತಾನೆ. ಈ ಹಂತದಲ್ಲಿ ಚಿಕಿತ್ಸೆ ಫಲಕಾರಿಯಾಗುವುದು ಕಷ್ಟ. ಹೀಗಾಗಿ ಮೊದಲ ಹಾಗೂ ಎರಡನೇ ಹಂತದ ಲಕ್ಷಣ ಕಾಣಿಸಿಕೊಳ್ಳುವ ತಕ್ಷಣ ಸೂಕ್ತ ಚಿಕಿತ್ಸೆ ಪಡೆಯಬೇಕು.

ಮುನ್ನೆಚ್ಚರಿಕಾ ಕ್ರಮ

ರೋಗ ಲಕ್ಷಣ ಕಂಡು ಬಂದ ಕೂಡಲೇ ಚಿಕಿತ್ಸೆ ಪಡೆಯಬೇಕು. ಮುಂಜಾಗ್ರತೆಯಾಗಿ ಸೋಂಕು ಪೀಡಿತರಿಂದ ದೂರವಿರಬೇಕು. ಶಂಕಿತ ರೋಗಿಯನ್ನು ಪ್ರತ್ಯೇಕವಾಗಿ ಆರೈಕೆ ಮಾಡಬೇಕು. ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ಕೆಮ್ಮುವಾಗ, ಸೀನುವಾಗ ಕರವಸ್ತ್ರಗಳನ್ನು ಬಳಸಬೇಕು. ಪೌಷ್ಠಿಕ ಹಾಗೂ ಶುಚಿಯಾದ ತಾಜಾ ಆಹಾರ ಸೇವಿಸಬೇಕು. ಚೆನ್ನಾಗಿ ನಿದ್ರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಸೀನುವುದು ಮಾಡಬಾರದು. ಮನೆ ಹಾಗೂ ಸುತ್ತಮುತ್ತಲ ಪರಿಸರ ಸ್ವಚ್ಚವಾಗಿಟ್ಟುಕೊಳ್ಳಬೇಕು. ಜನಸಂದಣಿ ಇರುವ ಕಡೆ ಮಾಸ್ಕ್‌ ಧರಿಸುವುದು ಸೂಕ್ತ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.