Asianet Suvarna News Asianet Suvarna News

ಮೊದಲ ಸಲ 60,000 ಜನಕ್ಕೆ ಒಂದೇ ಕಂತಲ್ಲಿ ಕ್ರಯಪತ್ರ: ಸಚಿವ ಅಶೋಕ್‌

ನವೆಂಬರ್‌ನಲ್ಲಿ ತಾಂಡಾ, ಗೊಲ್ಲರು, ಕುರುಬರ ಹಟ್ಟಿಗಳಿಗೆ ವಿಳಾಸ ಒದಗಿಸುವ ಕ್ರಾಂತಿಕಾರಿ ಕ್ರಮ: ಅಶೋಕ್‌

First Time 60000 people will Be Give Purchase Deed in Karnataka Says R Ashok grg
Author
First Published Oct 14, 2022, 1:00 PM IST | Last Updated Oct 14, 2022, 1:00 PM IST

ಬೆಂಗಳೂರು(ಅ.14):  ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ 60 ಸಾವಿರ ಜನರಿಗೆ ಒಂದೇ ಕಂತಿನಲ್ಲಿ ಅಧಿಕೃತ ನೆಲೆ, ಊರು ಮತ್ತು ವಿಳಾಸ ದೊರಕಿಸಿಕೊಡುವ ಕ್ರಾಂತಿಕಾರಿ ಕೆಲಸಕ್ಕೆ ಸರ್ಕಾರ ಮುಂದಾಗಿದ್ದು, ನವೆಂಬರ್‌ ಕೊನೆಯ ವಾರದಲ್ಲಿ ಲಂಬಾಣಿ ತಾಂಡಾ ಹಾಗೂ ಗೊಲ್ಲರು, ಕುರುಬರ ಹಟ್ಟಿಗಳ 60 ಸಾವಿರ ಮಂದಿಗೆ ಕ್ರಯ ಪತ್ರ ನೀಡಲಿದ್ದೇವೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 3300 ಲಂಬಾಣಿ ತಾಂಡಾಗಳಿವೆ. ಗೊಲ್ಲರಹಟ್ಟಿ, ಕುರುಬರ ಹಟ್ಟಿ ಸೇರಿದಂತೆ ಅಲೆಮಾರಿಗಳ 500 ವಾಸಸ್ಥಳಗಳಿವೆ. ಈ ಸ್ಥಳಗಳಿಗೆ ಹೆಸರೂ ಇಲ್ಲ, ಅಲ್ಲಿರುವವರಿಗೆ ವಿಳಾಸವೂ ಇಲ್ಲ. ಹೀಗಾಗಿ ಅವರಿರುವ ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲು ಬಹಳ ಹಿಂದಿನಿಂದ ಬೇಡಿಕೆ ಇತ್ತು. ಆದರೆ ವಿವಿಧ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಈಗ ಅಂತಹ ಅರವತ್ತು ಸಾವಿರ ಕುಟುಂಬಗಳಿಗೆ ಒಂದೇ ಕಂತಿನಲ್ಲಿ ಕ್ರಯಪತ್ರ ಒದಗಿಸಿಕೊಡಲು ಸರ್ಕಾರ ತೀರ್ಮಾನಿಸಿದೆ. ಇಷ್ಟುಪ್ರಮಾಣದ ಜನರಿಗೆ ಒಂದೇ ಕಂತಿನಲ್ಲಿ ಕ್ರಯ ಪತ್ರ ದೊರಕಿಸಿಕೊಡುವ ಕೆಲಸ ಯಾವ ಸರ್ಕಾರಗಳಿಂದಲೂ ಆಗಿಲ್ಲ ಎಂದು ಹೇಳಿದರು.

ಕರ್ನಾಟಕದಲ್ಲಿ 40 ದಿನ ಪಾದಯಾತ್ರೆ ಮಾಡಿದ್ರೂ ಕಾಂಗ್ರೆಸ್‌ ಗೆಲ್ಲಲ್ಲ

ಈ ಸಂಬಂಧ ಜಿಲ್ಲಾಧಿಕಾರಿಗಳ ಜತೆ ಚರ್ಚೆ ಪೂರ್ಣಗೊಳಿಸಿದ್ದು ಸಂಪೂರ್ಣ ವಿವರ ಪಡೆದು ಅಂತಹ ಜನರಿರುವ ಜಾಗದ ಸರ್ವೇ ಮಾಡಿಸುವುದಲ್ಲದೆ ಸದರಿ ಜಾಗದ ವಿವರ ಪಡೆದು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿ ಕ್ರಯ ಪತ್ರ ಒದಗಿಸಲಾಗುವುದು. ಅವರಿಗೆ ಕ್ರಯಪತ್ರ ನೀಡುವ ಕಾರ್ಯಕ್ರಮವನ್ನು ಕಲಬುರಗಿ ಇಲ್ಲವೇ ಯಾದಗಿರಿ ಜಿಲ್ಲೆಯಲ್ಲಿ ಏರ್ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಕಲಬುರಗಿಯಲ್ಲಿ 29 ಸಾವಿರ, ಯಾದಗಿರಿಯಲ್ಲಿ 9 ಸಾವಿರ, ರಾಯಚೂರಿನಲ್ಲಿ 6 ಸಾವಿರ, ಬೀದರ್‌ನಲ್ಲಿ 3 ಸಾವಿರ ಜನರಿದ್ದು, ಈ ಜಿಲ್ಲೆಗಳ ಜತೆ ವಿಜಯಪುರ ಜಿಲ್ಲೆಯಲ್ಲಿರುವವರೂ ಸೇರಿದಂತೆ ಒಟ್ಟು 60 ಸಾವಿರ ಮಂದಿಗೆ ಕ್ರಯಪತ್ರ ನೀಡಲಾಗುವುದು. ಎರಡನೇ ಹಂತದಲ್ಲಿ ದಾವಣಗೆರೆ ಜಿಲ್ಲೆ, ಶಿವಮೊಗ್ಗ ಜಿಲ್ಲೆಯ ಹಲವು ಪ್ರದೇಶಗಳಲ್ಲಿರುವ ಲಂಬಾಣಿ ತಾಂಡಾಗಳು, ಗೊಲ್ಲರ ಹಟ್ಟಿಗಳ ಜನರಿಗೆ ಕ್ರಯ ಪತ್ರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ನಿಂದ ಲಿಂಗಾಯತ ಸಿಎಂ ಗುರಿ: ಸಚಿವ ಅಶೋಕ್‌

ಈಗ ಬಹುತೇಕ ಕಡೆ ಇವರು ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದು, ಒಂದಷ್ಟುಮಂದಿ ಖಾಸಗಿ ಭೂಮಿಯಲ್ಲೂ ಮನೆ ಕಟ್ಟಿಕೊಂಡಿದ್ದಾರೆ. ಹೀಗಾಗಿ ಸರ್ಕಾರಿ ಭೂಮಿಯಲ್ಲಿ ಕೊಡುವುದರ ಜತೆ ಮಾರ್ಗಸೂಚಿ ಮೌಲ್ಯ ನೀಡಿ ಖಾಸಗಿಯವರಿಂದ ಭೂಮಿ ಖರೀದಿಸಿ ಅವರಿಗೆ ನೀಡಲಾಗುವುದು ಎಂದರು.

ಬೆಂಗಳೂರಿನ 10 ಸಾವಿರ ಸಕ್ರಮ ಆದೇಶ:

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡ ಮೂವತ್ತು ಸಾವಿರ ಜನರಿಗೆ 94ಸಿ ಮತ್ತು 94(ಸಿಸಿ)ಅಡಿ ಸಕ್ರಮಾತಿ ಆದೇಶ ನೀಡಲು ಸರ್ಕಾರ ತಯಾರಿ ನಡೆಸಿದೆ. ಈ ಪೈಕಿ ಬೆಂಗಳೂರಿನ ಹತ್ತು ಸಾವಿರ ಜನರಿಗೆ ಡಿಸೆಂಬರ್‌ ತಿಂಗಳಲ್ಲಿ ಸಕ್ರಮಾತಿ ಆದೇಶ ನೀಡಲಾಗುವುದು ಎಂದು ವಿವರಿಸಿದರು.

ರೆವಿನ್ಯೂ ನಿವೇಶನಗಳ ಭೂ ಪರಿವರ್ತನೆಗೆ ಕ್ರಮ: ಅಶೋಕ್‌

ರಾಜ್ಯಾದ್ಯಂತ ರೆವಿನ್ಯೂ ನಿವೇಶನಗಳ ಭೂ ಪರಿವರ್ತನೆ ಮಾಡಿಕೊಡಲು ಸಮಸ್ಯೆ ಇಲ್ಲ ಎಂದು ಕಾನೂನು ಇಲಾಖೆ ತಿಳಿಸಿದ್ದು, ಮುಖ್ಯಮಂತ್ರಿಗಳು ಕೂಡ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ರೆವಿನ್ಯೂ ನಿವೇಶನಗಳ ಭೂ ಪರಿವರ್ತನೆಗೆ ಅವಕಾಶ ನೀಡಿದರೆ, ಅಲ್ಲಿ ಮನೆ ಕಟ್ಟಿಕೊಂಡವರಿಗೆ, ಮನೆ ಕಟ್ಟಿಕೊಳ್ಳಲು ಬಯಸುವವರಿಗೆ ಸಾಲದ ಸೌಲಭ್ಯ ದೊರೆಯುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಆರ್‌. ಅಶೋಕ್‌ ಹೇಳಿದರು.
 

Latest Videos
Follow Us:
Download App:
  • android
  • ios