ಈಗ ರಾಜ್ಯದ ಲಿಂಗಾಯತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಕಾಂಗ್ರೆಸ್‌ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ ಎಂದು ಸಚಿವ ಆರ್‌.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು. 

ತುಮಕೂರು (ಸೆ.27): ಈಗ ರಾಜ್ಯದ ಲಿಂಗಾಯತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಕಾಂಗ್ರೆಸ್‌ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ ಎಂದು ಸಚಿವ ಆರ್‌. ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು. ತುಮಕೂರಿನ ಸಿದ್ಧಗಂಗಾ ಮಠಕ್ಕೆ ಸೋಮವಾರ ಸಂಜೆ ಭೇಟಿ ನೀಡಿದ ಬಳಿಕ 40% ಕಮಿಷನ್‌ ಸರ್ಕಾರ ಆರೋಪಕ್ಕೆ ಸಂಬಂಧಿಸಿದ ಪ್ರಶ್ನೆಗೆ ಮೇಲಿನಂತೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದು ಕಾಂಗ್ರೆಸ್‌ನವರ ಒಂದು ಚಾಳಿ. ಈ ತರದ ಸಮುದಾಯಗಳ ಮೇಲೆ ಅಟ್ಯಾಕ್‌ ಮಾಡುವುದು ಒಂದು ಚಾಳಿ. ಹೊರ ಶಾಲೆಯನ್ನು ಈಗ ಮುಂದುವರಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ವಿರುದ್ಧ ಲೋಕಾಯುಕ್ತದಲ್ಲಾಗಲಿ, ಎಸಿಬಿಯಲ್ಲಾಗಲೀ ಒಂದೇ ಒಂದು ಕೇಸ್‌ ದಾಖಲಾಗಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ವಿರುದ್ಧ 65 ಕೇಸ್‌ ದಾಖಲಾಗಿತ್ತು. 

ಇನ್ಮುಂದೆ ಬಡವರಿಗೆ 72 ತಾಸಿನೊಳಗೆ ಪಿಂಚಣಿ ಮಂಜೂರು: ಸಚಿವ ಅಶೋಕ್‌

ಡಿಕೆ ಶಿವಕುಮಾರ್‌ ಅವರು ಜೈಲಿನಿಂದ ಇವಾಗ ತಾನೆ ಹೊರಗಡೆ ಬಂದಿದ್ದಾರೆ. ಇಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದರೆ ದೆವ್ವದ ಬಾಯಲ್ಲಿ ಭಗವದ್ಗೀತೆ ಹೇಳಿದ ಹಾಗೆ. ಅಣ್ಣಾ ಹಜಾರೆ ಅವರು ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಕೇಳಬಹುದು. ಆದರೆ ಕಾಂಗ್ರೆಸ್ಸಿಗರು ಅರವತ್ತೈದು ವರ್ಷಗಳ ಕಾಲ ರಾಜ್ಯ ಲೂಟಿ ಮಾಡಿದ್ದಾರೆ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಇವರು ಅದ್ಯಾವ ಮುಖ ಇಟ್ಟುಕೊಂಡು ಪೋಸ್ಟರ್‌ ಅಂಟಿಸುತ್ತಾರೆ ಗೊತ್ತಿಲ್ಲ. 

ದೆಹಲಿಯಿಂದ ಹಿಡಿದು ಕರ್ನಾಟಕದ ಲೀಡರ್‌ವರೆಗೂ ಕಾಂಗ್ರೆಸ್ಸಿನವರು ಜೈಲು ಮತ್ತು ಬೇಲಿನ ಮೂಲಕ ಇದ್ದಾರೆ. ಕಾಂಗ್ರೆಸ್‌ನವರು ಯಾವಾಗಲೂ ಹೀಗೆ. ಹಿಂದೆ ವೀರೇಂದ್ರ ಪಾಟೀಲ್‌ ಸಿಎಂ ಆಗಿದ್ದಾಗ ಅವರ ಮೇಲೆ ಆರೋಪ ಮಾಡಿ ಕೆಳಗಿಳಿಸಿದರು. ಈಗ ಬೊಮ್ಮಾಯಿ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಕೆಂಗಲ್‌ ಹನುಮಂತಯ್ಯನವರು ಇದ್ದಾಗಲೂ ಕೂಡ ಅವರ ಮೇಲೆ ಅವರು ಆರೋಪ ಮಾಡಿದ್ದರು.

ವಾರದೊಳಗೆ ರಾಜಸ್ತಾನ ಸರ್ಕಾರ ಢಮಾರ್‌: ಭಾರತ್‌ ಜೋಡೋ ಅಲ್ಲ ಕಾಂಗ್ರೆಸ್‌ ಚೋಡೋ ಯಾತ್ರೆ ಶುರುವಾಗಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರ ಒಂದಿದೆ. ಅದು ಕೂಡ ಈಗ ಇನ್ನು ಒಂದು ವಾರದಲ್ಲಿ ಢಮಾರ್‌ ಆಗೋಗುತ್ತೆ. ಆಮೇಲಿಂದ ಕಾಂಗ್ರೆಸ್‌ನವರು ಭಿಕ್ಷಾಪಾತ್ರೆ ಹಿಡಿದು ಇಡೀ ದೇಶ ಸುತ್ತಬೇಕಾಗುತ್ತದೆ. ಭಿಕ್ಷುಕರ ಸ್ಥಿತಿಗೆ ಕಾಂಗ್ರೆಸ್‌ ಬಂದಿದೆ. ಕರ್ನಾಟಕಕ್ಕೆ ಭಾರತ್‌ ಜೋಡೋಯಾತ್ರೆ ಆಗಮಿಸುತ್ತಿದ್ದಂತೆ, ರಾಹುಲ್‌ ಗಾಂಧಿಗೆ ಗೋಬ್ಯಾಕ್‌ ಹೇಳಲಾಗುವುದು. ಭಾರತ ಮಾತೆ ಅಪವಿತ್ರೆ ಎಂದ ಪಾದ್ರಿ ಜೊತೆ ಪಾದಯಾತ್ರೆ ಮಾಡುವ ರಾಹುಲ್‌ ಗಾಂಧಿಗೆ ಗೋ ಬ್ಯಾಕ್‌ ಹೇಳಲಾಗುವುದು. ಅವರು ಕರ್ನಾಟಕದ ನೆಲ ತುಳಿಯುವ ಯಾವ ನೈತಿಕತೆ ಇಲ್ಲ. ರಾಹುಲ್‌ ಗಾಂಧಿ ಗೋ ಬ್ಯಾಕ್‌ ಎಂದರು.

ಸಲ್ಯೂಟ್‌ ಹೊಡೆಯುತ್ತೇನೆ: ಭ್ರಷ್ಟಾಚಾರ ಮಾಡದೆ ಇದ್ದ ಕಾಂಗ್ರೆಸ್‌ ನಾಯಕರು ಯಾರಾದರೂ ಬಂದು ಪೋಸ್ಟರ್‌ ಅಂಟಿಸಿದರೆ. ಅವರಿಗೆ ನಾನು ಸೆಲ್ಯೂಚ್‌ ಹೊಡೆಯುತ್ತೇನೆ ಎಂದರು. 

ಬೆಂಗಳೂರು ನಗರ ಜಿಲ್ಲೆಯಲ್ಲಿ 39 ಸಾವಿರ ಎಕರೆ ಸರ್ಕಾರಿ ಜಾಗ ಒತ್ತುವರಿ: ಅಶೋಕ್‌

ಅಶ್ವತ್ಥ್‌ ನಾರಾಯಣ್‌ಗೆ ಸಂಬಂಧವಿಲ್ಲ: ಸಚಿವ ಅಶ್ವತ್ಥ್‌ ನಾರಾಯಣರಿಗೂ ಬಿಎಂಎಸ್‌ ಎಜುಕೇಶನ್‌ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್‌ ಕೃಪಾಪೋಷಿತ ನಾಟಕ ಮಂಡಳಿಯನ್ನು ಈ ನಾಡಿನ ಜನ ನಂಬುವುದಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಜನ ಒಂದು ಗತಿ ಕಾಣಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.