ಮಾವು ಪ್ರಿಯರಿಗೆ ರಾಸಾಯನಿಕ ಮುಕ್ತ ಸಾವಯವ ಮಾವಿನ ಹಣ್ಣು ಒದಗಿಸುವುದು ಮತ್ತು ಮಾವು ಬೆಳೆಯುವ ರೈತರಿಗೆ ಕೊಯ್ಲುಪೂರ್ವ ವೆಚ್ಚ ನಿಭಾಯಿಸಲು ನೆರವಾಗಲು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ‘ಮಾವಿನ ಮರದ ದತ್ತು ಸ್ವೀಕಾರ’ ಪರಿಕಲ್ಪನೆ ಪರಿಚಯಿಸಲಾಗಿದೆ. 

ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು (ಮಾ.21): ಮಾವು (Mango) ಪ್ರಿಯರಿಗೆ ರಾಸಾಯನಿಕ ಮುಕ್ತ ಸಾವಯವ ಮಾವಿನ ಹಣ್ಣು ಒದಗಿಸುವುದು ಮತ್ತು ಮಾವು ಬೆಳೆಯುವ ರೈತರಿಗೆ ಕೊಯ್ಲುಪೂರ್ವ ವೆಚ್ಚ ನಿಭಾಯಿಸಲು ನೆರವಾಗಲು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ‘ಮಾವಿನ ಮರದ ದತ್ತು ಸ್ವೀಕಾರ’ ಪರಿಕಲ್ಪನೆ ಪರಿಚಯಿಸಲಾಗಿದೆ. ರಾಮನಗರದ ತೆನೆ ಸಾವಯವ ಕೃಷಿಕರ ಬಳಗ ಸಂಸ್ಥೆಯ ಸಹಭಾಗಿತ್ವದಲ್ಲಿ ತೆನೆ ರೈತ ಉತ್ಪಾದಕ ಕಂಪನಿ ಮಾವಿನ ಮರದ ದತ್ತು ಸ್ವೀಕಾರ ಪರಿಕಲ್ಪನೆ ಪರಿಚಯಿಸುತ್ತಿದ್ದು, ಪ್ರತಿ ಗ್ರಾಹಕರು ಒಂದು ಮರ ದತ್ತು (Adoption) ಪಡೆಯಲು ಅವಕಾಶ ಮಾಡಿಕೊಡಲಾಗುತ್ತಿದೆ.

ಪ್ರಾಯೋಗಿಕವಾಗಿ 300 ಮರಗಳನ್ನು ಮಾತ್ರ ದತ್ತು ಸ್ವೀಕಾರ ಯೋಜನೆಯಲ್ಲಿ ಅಳವಡಿಸಲಾಗಿದೆ. ಮುಂದಿನ ವರ್ಷದ ಬಳಿಕ ಸಂಖ್ಯೆಯನ್ನು ಹೆಚ್ಚಳ ಮಾಡುವ ಚಿಂತನೆಯಿದೆ. ದತ್ತು ಸ್ವೀಕರಿಸುವವರಿಗಾಗಿ ಬಾದಾಮಿ, ರಸಪೂರಿ, ಸೇಂದೂರ, ಮಲಗೋವಾ ಮತ್ತು ತೋತಾಪುರಿ ಸೇರಿ 5 ಜಾತಿಯ ಮರಗಳನ್ನು ಗುರುತಿಸಲಾಗಿದೆ ಎಂದು ತೆನೆ ಸಾವಯವ ಕೃಷಿಕರ ಬಳಗ ಸಂಸ್ಥೆಯ ಅಧ್ಯಕ್ಷ ಪುನೀತ್‌ಗೌಡ ವಿವರಿಸಿದರು.

ಮನೆ ಬಾಗಿಲಿಗೆ ಹಣ್ಣು: ಮಾವಿನ ಮರ ದತ್ತು ಸ್ವೀಕಾರ ಮಾಡುವ ಗ್ರಾಹಕರು ಪ್ರತಿ ಋುತುವಿಗೆ ಒಂದು ಸಾವಿರ ರು.ಗಳನ್ನು ಪಾವತಿ ಮಾಡಬೇಕಾಗುತ್ತದೆ. ದತ್ತು ಸ್ವೀಕರಿಸಿದ ಮರದಲ್ಲಿ ಬೆಳೆಯುವ ರಾಸಾಯನಿಕ ಮುಕ್ತವಾಗಿರುವ ಮಾವಿನ ಹಣ್ಣನ್ನು 5 ಕೆ.ಜಿ.ಯಂತೆ ಎರಡು ಬಾರಿ 10 ದಿನಗಳ ಅಂತರದಲ್ಲಿ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ, ಮೊದಲ ಬಾರಿ ವಿತರಣೆ ಉಚಿತವಾಗಿದ್ದು, ಎರಡನೇ ಬಾರಿಗೆ ವಿತರಣಾ ಶುಲ್ಕವನ್ನಾಗಿ 50 ರು. ಪಡೆದುಕೊಳ್ಳಲಾಗುವುದು. ಇದರಿಂದ ರೈತರು ಮತ್ತು ಗ್ರಾಹಕರಿಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

Bengaluru: ಸಿಲಿಕಾನ್ ಸಿಟಿಯಲ್ಲಿ ದೇಶದ ಎಲ್ಲ ಮಾವು ವ್ಯಾಪಾರಿಗಳ ಸಭೆ

ಪ್ರಾರಂಭಿಕ ಹಂತದಲ್ಲಿ ಬೆಂಗಳೂರು, ಮಂಡ್ಯ ಮತ್ತು ಮೈಸೂರು ನಗರದ ಗ್ರಾಹಕರಿಗೆ ಮಾತ್ರ ದತ್ತು ಸ್ವೀಕಾರಕ್ಕೆ ಅವಕಾಶ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇತರೆ ನಗರದ ಗ್ರಾಹಕರಿಗೂ ಈ ಸೌಲಭ್ಯ ಲಭ್ಯವಾಗುವಂತೆ ಮಾಡಲಾಗುವುದು. ಈಗಾಗಲೇ 20 ಮಂದಿ ನೋಂದಣಿಯಾಗಿದ್ದು, ದಿನಕಳೆದಂತೆ ಈ ಸಂಖ್ಯೆ ಹೆಚ್ಚಾಗಲಿದೆ ಎಂದು ಅವರು ತಿಳಿಸಿದರು.

ಮಧ್ಯವರ್ತಿಗಳಿಲ್ಲ: ಮಾವಿನ ಮರವನ್ನು ದತ್ತು ಸ್ವೀಕರಿಸಿ ಹಣ್ಣು ಪಡೆಯುವ ಪ್ರಕ್ರಿಯೆಯಲ್ಲಿ ಯಾವುದೇ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ಜತೆಗೆ, ರೈತ ಉತ್ಪಾದಕ ಸಂಘಟನೆಯೊಂದಿಗೆ ನೇರ ಸಂಪರ್ಕ ಇರಲಿದೆ. ಹಣ ಪಾವತಿಗೂ ಆನ್‌ಲೈನ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಗ್ರಾಹಕರು ಮಾವಿನ ಹಣ್ಣಿಗಾಗಿ ಮಾರುಕಟ್ಟೆಗಳಿಗೆ ಭೇಟಿ ನೀಡುವ ಅಗತ್ಯವಿರುವುದಿಲ್ಲ ಎಂದು ಹೇಳಿದರು.

ದತ್ತು ಸ್ವೀಕಾರ ಹೇಗೆ?: ಮಾವಿನ ಮರಗಳನ್ನು ದತ್ತು ಸ್ವೀಕರಿಸುವವರು www.tenebalaga.com ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಬಳಿಕ ಆನ್‌ಲೈನ್‌ ಮೂಲಕವೇ ಪಾವತಿಗೆ ವ್ಯವಸ್ಥೆಯಿರಲಿದೆ. ಅಲ್ಲದೆ, ದತ್ತು ಸ್ವೀಕರಿಸಿರುವವವರಿಗೆ ಮರ ಇರುವ ಸ್ಥಳವನ್ನು ಜಿಪಿಎಸ್‌ ಮೂಲಕ ಮತ್ತು ಫೋಟೋವನ್ನು ವಾಟ್ಸಾಪ್‌ ಮೂಲಕ ನೋಂದಣಿಯಾದ ಒಂದು ವಾರದಲ್ಲಿ ಕಳುಹಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.

Untimely Rain Effect: ಮಾವು ಈ ಸಲ 2 ತಿಂಗಳು ವಿಳಂಬ: ಕಂಗಾಲದ ಬೆಳೆಗಾರ..!

ಮಾವು ಬೆಳೆಗಾರ ರೈತರಿಂದ ನೇರವಾಗಿ ಗ್ರಾಹಕರಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಮಾವಿನ ಮರದ ದತ್ತು ಸ್ವೀಕಾರ ಕಾರ್ಯಕ್ರಮ ಪರಿಚಯಿಸಲಾಗಿದೆ. ದತ್ತು ಸ್ವೀಕಾರದಿಂದ ರೈತರು ಬೆಳೆಯುವ ಮಾವು ಕೃಷಿಯ ಕುರಿತು ಮಾಹಿತಿ ಲಭ್ಯವಾಗಲಿದೆ. ಜತೆಗೆ, ಸಾವಯವ ಮಾವು ಲಭ್ಯವಾಗಲಿದೆ.
-ಪುನೀತ್‌ ಗೌಡ, ತೆನೆ ಸಾವಯವ ಕೃಷಿಕರ ಬಳಗದ ಅಧ್ಯಕ್ಷ.