Asianet Suvarna News Asianet Suvarna News

ಬಳ್ಳಾರಿಯಲ್ಲಿ ಆಫ್ರಿಕಾ ವೈರಸ್ ಸೋಂಕು ಪತ್ತೆ, ತೀವ್ರ ಆತಂಕ!

ಬಳ್ಳಾರಿಗೆ ಕಾಲಿಟ್ಟದಕ್ಷಿಣ ಆಫ್ರಿಕಾ ವೈರಸ್‌| ದುಬೈನಿಂದ ಬಂದಿದ್ದ ಇಬ್ಬರಿಗೆ ಕೊರೋನಾ ವೈರಸ್‌ ಪತ್ತೆ

First Covid Case With South Africa Strain Found In Karnataka Ballari pod
Author
Bangalore, First Published Mar 13, 2021, 7:24 AM IST

ಬಳ್ಳಾರಿ(ಮಾ.13): ದುಬೈನಲ್ಲಿ ಇರುವ ಸಂಬಂಧಿಕರ ಮನೆಗೆ ತೆರಳಿ ಕಳೆದ ವಾರ ವಾಪಾಸಾಗಿದ್ದ ನಗರದ ಇಬ್ಬರಲ್ಲಿ ದಕ್ಷಿಣ ಆಫ್ರಿಕಾದ ಕೊರೋನಾ ವೈರಸ್‌ ಪತ್ತೆಯಾಗಿದೆ!

ಇಲ್ಲಿನ ವಿಶಾಲನಗರದ ಇಬ್ಬರು (ಅಣ್ಣ-ತಂಗಿ) ಸಂಬಂಧಿಕರನ್ನು ಮಾತನಾಡಿಸಲು ಕಳೆದ ತಿಂಗಳು ದುಬೈಗೆ ತೆರಳಿದ್ದರಲ್ಲದೆ, ಫೆ. 18ರಂದು ಬಳ್ಳಾರಿಗೆ ಮರಳಿದ್ದರು. 20ರಂದು ಜ್ವರ ಸೇರಿದಂತೆ ಸೋಂಕಿನ ಲಕ್ಷಣಗಳು ಕಂಡು ಬಂದಾಗ ತಪಾಸಣೆ ಮಾಡಿಸಲಾಗಿದ್ದು ಕೊರೋನಾ ವೈರಸ್‌ ಇರುವುದು ಖಚಿತವಾಗಿದೆ. ಫೆ.17ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೊರೋನಾ ಪರೀಕ್ಷೆ ಮಾಡಿಸಿದಾಗ ನೆಗೆಟಿವ್‌ ಬಂದಿತ್ತು. ಬಳ್ಳಾರಿಗೆ ಬಂದ ಮೂರು ದಿನಗಳ ಬಳಿಕ ಇಬ್ಬರಲ್ಲೂ ಜ್ವರ, ಶೀತ ಕಂಡು ಬಂದಿದೆ. ಮತ್ತೊಮ್ಮೆ ವಿಮ್ಸ್‌ನಲ್ಲಿ ಕೊರೋನಾ ಪರೀಕ್ಷೆ ಮಾಡಿಸಲಾಗಿದ್ದು, ಸೋಂಕು ಇರುವುದು ಖಚಿತವಾಗಿದೆ.

ದುಬೈನಿಂದ ಬಂದಿರುವುದರಿಂದ ಯಾವ ವಿಧ (ವೇರಿಯೆಂಟ್‌) ತಿಳಿಯಲು ಲ್ಯಾಬ್‌ಗೆ ಕಳಿಸಿಕೊಡಲಾಗಿದ್ದು, ಸೌತ್‌ ಆಫ್ರಿಕನ್‌ ವೇರಿಯೆಂಟ್‌ ಎಂದು ಗೊತ್ತಾಗಿದೆ. ಇಬ್ಬರನ್ನೂ ಹೋಂ ಕ್ವಾರಂಟೈನ್‌ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಕಂಡು ಬಂದಿರುವ ವ್ಯಕ್ತಿಗಳ ಕುಟುಂಬದ ಸದಸ್ಯರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಯಾವುದೇ ಸೋಂಕು ಕಂಡು ಬಂದಿಲ್ಲ. ಈ ಇಬ್ಬರ ಮೊದಲ ಸಂಪರ್ಕಿತರ ಪತ್ತೆ ಮಾಡಲಾಗುತ್ತಿದೆ. ಈಗಾಗಲೇ 15ಕ್ಕೂ ಹೆಚ್ಚು ಜನರ ತಪಾಸಣೆ ಕೈಗೊಳ್ಳಲಾಗಿದೆ. ಈ ಇಬ್ಬರು ಬಿಟ್ಟರೆ ಯಾರಲ್ಲೂ ವೈರಸ್‌ ಕಂಡು ಬಂದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜನಾರ್ದನ ತಿಳಿಸಿದ್ದಾರೆ.

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆಯಲ್ಲಿ ಒಂದಷ್ಟುಏರಿಕೆಯಾಗುತ್ತಿರುವ ನಡುವೆ ದಕ್ಷಿಣ ಆಫ್ರಿಕಾದ ಕೊರೋನಾ ವೈರಸ್‌ ಕಂಡು ಬಂದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ದುಬೈನಿಂದ ಬಂದಿರುವ ಇಬ್ಬರಿಂದ ವೈರಸ್‌ ಹಬ್ಬಿರುವ ಸಾಧ್ಯತೆ ತೀರಾ ಕಡಿಮೆಯಾಗಿದೆ. ಸಾರ್ವಜನಿಕರು ಆತಂಕಪಡಬೇಕಾಗಿಲ್ಲ. ವೈರಸ್‌ನಿಂದ ರಕ್ಷಣೆ ಮಾಡಿಕೊಳ್ಳಲು ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಮುಂಜಾಗ್ರತೆ ಕ್ರಮ ಕೈಗೊಂಡರೆ ಯಾವುದೇ ಸಮಸ್ಯೆ ಇಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಜನಾರ್ದನ ಹೇಳುತ್ತಾರೆ.

Follow Us:
Download App:
  • android
  • ios