ಪುತ್ತೂರಿನಲ್ಲಿ ರಾಜ್ಯದ ಮೊದಲ ಚಾಕೊಲೇಟ್‌ ಪಾರ್ಕ್ |  ಚಾಕೊಲೇಟ್‌ ರುಚಿ ಸವಿಯುವುದರ ಜತೆಗೆ ಮನರಂಜನೆಗೆ ಅವಕಾಶ | ಏಪ್ರಿಲ್‌ನಿಂದ ಕಾಮಗಾರಿ ಶುರು

ಮಂಗಳೂರು (ಜ. 17): ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಚಾಕೊಲೇಟ್‌ ಥೀಮ್‌ ಪಾರ್ಕ್ ನಿರ್ಮಾಣವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಬಳಿಯ ಕಾವುನಲ್ಲಿ ಸುಮಾರು 3 ಎಕರೆಯಲ್ಲಿ ಈ ಉದ್ಯಾನ ತಲೆಯೆತ್ತಲಿದೆ. ಚಾಕೊಲೇಟ್‌ಗಳ ರುಚಿ ಸವಿಯ ಜತೆಗೆ ಆಟೋಟಗಳ ಮನರಂಜನೆಯನ್ನು ಈ ಪಾರ್ಕ್ ಪ್ರವಾಸಿಗರಿಗೆ ದಯಪಾಲಿಸಲಿದೆ.

ಪುತ್ತೂರು ಬಳಿ ಕಾವುನಲ್ಲಿ ಅಡಕೆ ಮತ್ತು ಕೋಕೋ ಮಾರುಕಟ್ಟೆಹಾಗೂ ಸಂಸ್ಕರಣಾ ಸಹಕಾರಿ ಸಂಸ್ಥೆ (ಕ್ಯಾಂಪ್ಕೋ)ಯ ಚಾಕೊಲೇಟ್‌ ಕಾರ್ಖಾನೆ ಇದೆ. ಅಲ್ಲಿ 23 ಬಗೆಯ ಚಾಕೊಲೇಟ್‌ಗಳನ್ನು ತಯಾರಿಸಲಾಗುತ್ತಿದೆ. ಈ ಸಂಸ್ಥೆಗೆ ಸೇರಿದ 12 ಎಕರೆ ಜಾಗದ ಪೈಕಿ ಸುಮಾರು ಮೂರು ಎಕರೆಯಲ್ಲಿ ಈ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ.

ಕ್ಯಾಂಪ್ಕೋ ಚಾಕೊಲೇಟ್‌ ಪಾರ್ಕ್ ಥೀಮ್‌ ಪಾರ್ಕ್ನಲ್ಲಿ ಮಕ್ಕಳನ್ನು ಆಕರ್ಷಿಸುವ ಚಿಲ್ಡ್ರನ್‌ ಪ್ಲೇ ಏರಿಯಾ, ಕೃತಕ ಜಲಪಾತ, ರೆಸ್ಟೋರೆಂಟ್‌ ಮತ್ತು ಇತರೆ ಸೌಲಭ್ಯಗಳು ಇರಲಿವೆ. ಕೋಕೋ, ಅಡಕೆ ಮರ, ಮೆಣಸು ಉತ್ಪಾದನೆ ಕುರಿತ ಗಾರ್ಡನ್‌ ಮಾಡಲಾಗುವುದು. ಇದರಿಂದ ಜನರಲ್ಲಿ ಕೋಕೋ ಬೆಳೆಯುವ ಮತ್ತು ಚಾಕೊಲೇಟ್‌ ತಯಾರಿಸುವ ಕೌಶಲ್ಯವೂ ಬೆಳೆಯಲಿದೆ ಎಂದು ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಎಚ್‌.ಎಂ. ಕೃಷ್ಣಕುಮಾರ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಕ್ಯಾಂಪ್ಕೋ ಆವರಣದಲ್ಲಿ ಈಗಾಗಲೇ 26 ಕೋಟಿ ರು. ವೆಚ್ಚದಲ್ಲಿ ಬೃಹತ್‌ ಗೋದಾಮು ನಿರ್ಮಾಣ ಮಾಡಲಾಗುತ್ತಿದೆ. ಈ ಗೋಡೌನ್‌ ಮಾಚ್‌ರ್‍ ವೇಳೆಗೆ ಉದ್ಘಾಟನೆಯಾಗಲಿದೆ. ಚಾಕೊಲೇಟ್‌ ಪಾರ್ಕ್ನ ಕಾಮಗಾರಿ ಏಪ್ರಿಲ್‌ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ. ಪ್ರವಾಸಿಗರು ಚಾಕೊಲೇಟ್‌ ಥೀಮ್‌ ಪಾರ್ಕ್ನಲ್ಲಿ ಆಟೋಟದ ಜತೆಗೆ ಚಾಕೊಲೇಟ್‌ ತಯಾರಿಕೆಯ ಪ್ರಕ್ರಿಯೆ ನೋಡಿ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬಹುದು ಎನ್ನುತ್ತಾರೆ ಅಧಿಕಾರಿಗಳು.

ನೆರೆಯ ರಾಜ್ಯಗಳಲ್ಲಿ ಚಾಕೊಲೇಟ್‌ ಪಾರ್ಕ್ಗಳಿವೆ. ಚಾಕೊಲೇಟ್‌ ಅಭಿಮಾನಿಗಳು ಊಟಿ, ಮಹಾಬಲೇಶ್ವರ ಸೇರಿದಂತೆ ಇತರ ರಾಜ್ಯಗಳ ಚಾಕೊಲೇಟ್‌ ಉದ್ಯಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಊಟಿಯಲ್ಲಿರುವಂತೆ ಇದು ಸಹ ದೊಡ್ಡ ಪಾರ್ಕ್ ಆಗಲಿದೆ. ನಮ್ಮ ರಾಜ್ಯದಲ್ಲಿ ಪಾರ್ಕ್ ನಿರ್ಮಿಸುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂಬುದು ಅಧಿಕಾರಿಗಳ ಆಶಯ.

ಈ ಥೀಮ್‌ ಪಾರ್ಕ್ ನೈಸರ್ಗಿಕವಾಗಿಯೂ ಉತ್ತಮ ತಾಣದಲ್ಲಿ ತಲೆಯೆತ್ತುತ್ತಿದೆ. ಮೈಸೂರು-ಮಂಗಳೂರು ಹೆದ್ದಾರಿ ಸಮೀಪದಲ್ಲೇ ಇರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ವಿಶ್ವಾಸವಿದೆ. ಹೀಗಾಗಿ ಪ್ರವಾಸಿಗರಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು.

ಚಾಕೊಲೇಟ್‌ ಮಾದರಿಯಲ್ಲಿ ಪಾರ್ಕ್ ಇರಲಿದೆ. ಚಾಕೊಲೇಟ್‌ ಪ್ರಿಯರು ಸೇರಿದಂತೆ ಬಹುತೇಕರು ಕೋಕೋ ಟ್ರೀ, ಚಾಕೊಲೇಟ್‌ ಹಣ್ಣುಗಳನ್ನು ನೋಡಿರುವುದಿಲ್ಲ. ಹೀಗಾಗಿ ಮರದ ಹಣ್ಣಿನಿಂದ ಹೇಗೆಲ್ಲ ಚಾಕೊಲೇಟ್‌ ತಯಾರಿಕೆ ನಡೆಯುತ್ತದೆ ಎಂಬ ಬಗ್ಗೆ ತಿಳಿಯಬಹುದು. ಇದೊಂದು ಶೈಕ್ಷಣಿಕ ಪಾರ್ಕ್ ರೀತಿಯೂ ಇರಲಿದೆ.

- ಎಚ್‌.ಎಂ. ಕೃಷ್ಣಕುಮಾರ್‌, ವ್ಯವಸ್ಥಾಪಕ ನಿರ್ದೇಶಕ, ಕ್ಯಾಂಪ್ಕೋ