ಶಿವಮೊಗ್ಗ[ಜ.27]: ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪ ತೊರೆಬೈಲು ಗ್ರಾಮದ ಮನೆಯ ಅಂಗಳದಲ್ಲಿ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಮೂರೂವರೆ ವರ್ಷದ ಪುಟ್ಟಬಾಲಕಿಯೊಬ್ಬಳು ಸಜೀವ ದಹನವಾದ ದಾರುಣ ಘಟನೆ ಶನಿವಾರ ನಡೆದಿದೆ. ಮೂರೂವರೆ ವರ್ಷದ ಅರ್ಥ ಮೃತಪಟ್ಟ ಬಾಲಕಿಯಾಗಿದ್ದಾಳೆ.

ಮೃತ ಬಾಲಕಿಯ ತಂದೆ ರಮೇಶ್‌ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ತಾಯಿ ಜಯಲಕ್ಷ್ಮೇ ಕೂಲಿ ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋಗಿದ್ದರು. 7 ವರ್ಷದ ಧನಂಜಯ ಮತ್ತು ಪುಟ್ಟಬಾಲಕಿ ಅರ್ಥ ಮಾತ್ರ ಮನೆಯಲ್ಲಿದ್ದರು. ಇವರಿಬ್ಬರು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದರು. ಈ ಸಂದರ್ಭದಲ್ಲಿ ಅಡುಗೆಯಾಟ ಆಡತೊಡಗಿದ್ದರು ಎನ್ನಲಾಗಿದೆ.

ಆ ವೇಳೆಯಲ್ಲಿ ಅಂಗಳದ ಹುಲ್ಲು ಬಣವೆಗೆ ಬೆಂಕಿ ತಗುಲಿದೆ. ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ಅರ್ಥ ಬಣವೆಯ ಬೆಂಕಿಗೆ ಬಲಿಯಾಗಿದ್ದಳು. ಧನಂಜಯ ತಕ್ಷಣ ಕೂಲಿ ಕೆಲಸದಲ್ಲಿದ್ದ ತನ್ನ ತಾಯಿಗೆ ವಿಷಯ ತಿಳಿಸಿಬರುವಷ್ಟರಲ್ಲಿ ಅರ್ಥ ಶವವಾಗಿದ್ದಳು. ಕೋಣಂದೂರು ಎಎಸ್‌ಐ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.