ಸಾಕ್ಷ್ಯನಾಶ ಭೀತಿಯಿಂದ ಎಫ್‌ಐಆರ್‌ ಅಪ್‌ಲೋಡ್‌ ತಡ: ಲೋಕಾಯುಕ್ತ

ಕೆಲವು ಸೂಕ್ಷ್ಮ ಪ್ರಕರಣದಲ್ಲಿ ಎಫ್‌ಐಆರ್‌ ಅನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದರೆ, ಅದರ ಮಾಹಿತಿ ಆರೋಪಿಗೆ ಸಿಕ್ಕು ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇರುತ್ತದೆ. ಇದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಧ್ಯೇಯೋದ್ದೇಶವನ್ನೇ ವಿಫಲಗೊಳಿಸುತ್ತದೆ. 

FIR upload delayed due to fear of destruction of evidence Says Lokayukta grg

ಬೆಂಗಳೂರು(ಡಿ.02):  ಆರೋಪಿಗಳು ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೆಲವು ಸೂಕ್ಷ್ಮ ಪ್ರಕರಣಗಳಿಗೆ ಸಂಬಂಧಿಸಿದ ‘ಪ್ರಥಮ ವರ್ತಮಾನ ವರದಿ’ಯನ್ನು (ಎಫ್‌ಐಆರ್‌) ವೆಬ್‌ಸೈಟ್‌ಗೆ ವಿಳಂಬವಾಗಿ ಅಪ್‌ಲೋಡ್‌ ಮಾಡಲಾಗುತ್ತದೆ ಎಂದು ಹೈಕೋರ್ಟ್‌ಗೆ ಕರ್ನಾಟಕ ಲೋಕಾಯುಕ್ತ ಸಂಸ್ಥೆ ತಿಳಿಸಿದೆ. ಇದಕ್ಕೆ ಕೋರ್ಟ್‌ ಮನ್ನಣೆಯನ್ನೂ ನೀಡಿದೆ. ಎಫ್‌ಐಆರ್‌ ದಾಖಲಾದ 24 ಗಂಟೆಯಲ್ಲಿ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲು ಲೋಕಾಯುಕ್ತ ಸಂಸ್ಥೆಗೆ ನಿರ್ದೇಶಿಸಬೇಕು ಎಂದು ಕೋರಿ ವಕೀಲ ಎಸ್‌. ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು.

ಈ ವೇಳೆ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪಿ. ಅಂಜಲಿ ಅವರು ಸಲ್ಲಿಸಿದ ಪ್ರಮಾಣ ಪತ್ರವನ್ನು ಲೋಕಾಯುಕ್ತ ಪರ ವಕೀಲ ವೆಂಕಟೇಶ್‌ ಎಸ್‌. ಅರಬಟ್ಟಿ ನ್ಯಾಯಪೀಠಕ್ಕೆ ಸಲ್ಲಿಸಿದರು. ‘ಕೆಲವು ಸೂಕ್ಷ್ಮ ಪ್ರಕರಣದಲ್ಲಿ ಎಫ್‌ಐಆರ್‌ ಅನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದರೆ, ಅದರ ಮಾಹಿತಿ ಆರೋಪಿಗೆ ಸಿಕ್ಕು ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇರುತ್ತದೆ. ಇದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಧ್ಯೇಯೋದ್ದೇಶವನ್ನೇ ವಿಫಲಗೊಳಿಸುತ್ತದೆ. ಹಾಗಾಗಿ ಸೂಕ್ಷ್ಮ ಪ್ರಕರಣಗಳಿಗೆ ಸಂಬಂಧಿಸಿದ ಎಫ್‌ಐಆರ್‌ ವಿಳಂಬವಾಗಿ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. ಇತರೆ ಪ್ರಕರಣಗಳ ಎಫ್‌ಐಆರ್‌ ಅನ್ನು ಸುಪ್ರಿಂ ಕೋರ್ಟ್‌ ಆದೇಶದಂತೆ ದಾಖಲಿಸಿದ 24 ಗಂಟೆಯೊಳಗೆ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗುವುದು’ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ಬೆಳಗಾವಿ: ಲೋಕಾಯುಕ್ತ ದಾಳಿ, ಲಂಚ ಸಮೇತ ಸಿಕ್ಕಿಬಿದ್ದ ಕಿತ್ತೂರು ತಹಶಿಲ್ದಾರ್

ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ‘ಲೋಕಾಯುಕ್ತರು ಸಹ ಕೆಲವೊಂದು ಪ್ರಕರಣಗಳಲ್ಲಿ ಗೌಪ್ಯತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಅರ್ಜಿಯಲ್ಲಿ ಎತ್ತಲಾಗಿರುವ ಆಕ್ಷೇಪಗಳಿಗೆ ಪರಿಹಾರವೂ ದೊರೆತಿದೆ’ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.

ಲೋಕಾ ನಿರ್ಲಕ್ಷ್ಯ: ಅರ್ಜಿ

ಫ್‌ಐಆರ್‌ ದಾಖಲಾದ 24 ಗಂಟೆಗಳಲ್ಲಿ ಅದನ್ನು ಸಂಬಂಧಪಟ್ಟ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು 2016ರಲ್ಲಿ ಸುಪ್ರೀಂಕೋರ್ಚ್‌ ನೀಡಿರುವ ಆದೇಶವನ್ನು ಸಿಬಿಐ ಸೇರಿದಂತೆ ಉಳಿದ ತನಿಖಾ ಸಂಸ್ಥೆಗಳು ಪಾಲಿಸುತ್ತಿವೆ. ಅದರಂತೆ ರಾಜ್ಯದಲ್ಲಿ ಎಸಿಬಿ ಪಾಲಿಸುತ್ತಾ ಬಂದಿತ್ತು. ಈ ಮಧ್ಯೆ ಹೈಕೋರ್ಟ್‌ 2022ರಂದು ಎಸಿಬಿ ರದ್ದುಗೊಳಿಸಿ ಲೋಕಾಯುಕ್ತದ ಅಧಿಕಾರವನ್ನು ಮರುಸ್ಥಾಪಿಸಿ ಆದೇಶಿಸಿದೆ. ಆದರೆ, ಲೋಕಾಯುಕ್ತ ಪೊಲೀಸರು, ಎಫ್‌ಐಆರ್‌ಗಳನ್ನು ದಾಖಲಿಸಿದ 24 ಗಂಟೆಗಳಲ್ಲಿ ವೆಬ್‌ಸೈಟ್‌ಗೆ ಹಾಕುತ್ತಿಲ್ಲ. ಇದರಿಂದ ಮುಂದಿನ ಕಾನೂನು ಪ್ರಕ್ರಿಯೆ ಕೈಗೊಳ್ಳಲು ದೂರುದಾರರು, ಕಕ್ಷಿದಾರರು ಮತ್ತು ವಕೀಲರಿಗೆ ತೊಂದರೆ ಉಂಟಾಗುತ್ತಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.
 

Latest Videos
Follow Us:
Download App:
  • android
  • ios