ಬೆಳಗಾವಿ: ಲೋಕಾಯುಕ್ತ ದಾಳಿ, ಲಂಚ ಸಮೇತ ಸಿಕ್ಕಿಬಿದ್ದ ಕಿತ್ತೂರು ತಹಶಿಲ್ದಾರ್
ಕಿತ್ತೂರಿನ ತಹಶಿಲ್ದಾರ್ ಸೋಮಲಿಂಗಪ್ಪ ಹಾಲಗಿ ಮನೆಯಲ್ಲಿ 10 ಲಕ್ಷಕ್ಕೂ ಅಧಿಕ ನಗದು, ಮಹತ್ವದ ದಾಖಲೆಗಳು ಪತ್ತೆ
ಬೆಳಗಾವಿ(ನ.26): ಬೆಳಗಾವಿ ಜಿಲ್ಲೆ ಕಿತ್ತೂರು ತಹಶಿಲ್ದಾರ್ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹೌದು, ಜಿಲ್ಲೆಯ ಕಿತ್ತೂರು ತಹಶಿಲ್ದಾರ್ ಮನೆ-ಕಚೇರಿ ಮೇಲೆ ನಿನ್ನೆ ತಡರಾತ್ರಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ರಾತ್ರಿಯಿಡಿ ತಹಶಿಲ್ದಾರ್ ಮನೆಯಲ್ಲಿ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಕಿತ್ತೂರಿನ ತಹಶಿಲ್ದಾರ್ ಸೋಮಲಿಂಗಪ್ಪ ಹಾಲಗಿ ಮನೆಯಲ್ಲಿ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯ ನಡೆಸಿದ್ದು ಮನೆಯಲ್ಲಿ 10 ಲಕ್ಷಕ್ಕೂ ಅಧಿಕ ನಗದು, ಮಹತ್ವದ ದಾಖಲೆಗಳು ಪತ್ತೆಯಾಗಿವೆ. ನಗದು, ದಾಖಲೆ ಪತ್ರಗಳನ್ನ ಮಾಡಿದ ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಲಂಚ ಸ್ವೀಕರಿಸುತ್ತಿದ್ದ ಕಿತ್ತೂರು ತಹಶಿಲ್ದಾರ್ ಸೋಮಲಿಂಗಪ್ಪ ಹಾಲಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಜಾಗದ ಖಾತೆ ಹೆಸರು ಬದಲಾವಣೆಗೆ ಲಂಚ: ವಿಶೇಷ ತಹಸೀಲ್ದಾರ್ ಅರೆಸ್ಟ್
ಇನ್ನು ತಹಶಿಲ್ದಾರ್ ಕಚೇರಿಯ ಭೂಸುಧಾರಣಾ ವಿಷಯಗಳ ನಿರ್ವಾಹಕ ಪ್ರಸನ್ನ ಜಿ. ಕೂಡ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತಹಶಿಲ್ದಾರ್ ಸೇರಿ ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ಬೆಳಗಾವಿಗೆ ಕರೆತಂದಿದ್ದಾರೆ. ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಆರೋಪಿಗಳ ವೈದ್ಯಕೀಯ ತಪಾಸಣೆ ಮುಕ್ತಾಯವಾಗಿದೆ.
ಬಳಿಕ ಲೋಕಾಯುಕ್ತ ಕೋರ್ಟ್ ನ್ಯಾಯಾಧೀಶರ ಮನೆಗೆ ಆರೋಪಿತರನ್ನು ಲೋಕಾಯುಕ್ತ ಪೊಲೀಸರು ಕರೆದೊಯ್ದಿದ್ದಾರೆ. ಬಳಿಕ ಆರೋಪಿತರನ್ನು ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಪೊಲೀಸರು ಕರೆತರಲಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ.