ಬೆಂಗಳೂರು :  ದೇವರಬೀಸನಹಳ್ಳಿಯ ಖಾಸಗಿ ನರ್ಸರಿ ಶಾಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಜೀವನಕ್ಕೆ ತೊಂದರೆ ನೀಡಿದ್ದ ಆರೋಪ ಸಂಬಂಧ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹಾಗೂ ಮತ್ತಿತರರ ವಿರುದ್ಧ ಎಚ್‌ಎಎಲ್‌ ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ಹಾಗೂ ದೋಷಾರೋಪ ಪಟ್ಟಿಯನ್ನ ಹೈಕೋರ್ಟ್‌ ರದ್ದುಪಡಿಸಿದೆ.

ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಅರವಿಂದ ಲಿಂಬಾವಳಿ ಮತ್ತಿತರೆ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅವರಿದ್ದ ಏಕಸದಸ್ಯಪೀಠ, ಆರೋಪವನ್ನು ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯಾಧಾರಗಳು ಆರೋಪಪಟ್ಟಿಯಲ್ಲಿ ಇಲ್ಲ ಎಂದು ತಿಳಿಸಿ, ಎಫ್‌ಐಅರ್‌ ರದ್ದು ಮಾಡಿತು.

ದೇವರಬೀಸನಹಳ್ಳಿಯ ಖಾಸಗಿ ನರ್ಸರಿ ಶಾಲೆಯಲ್ಲಿ 2017 ಫೆ.18ರಂದು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಘಟನೆ ನಡೆದಿತ್ತು. ಇದನ್ನು ಖಂಡಿಸಿ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ರಸ್ತೆ ತಡೆ ನಡೆಸಿ ಸಂಚಾರ ದಟ್ಟಣೆ ಉಂಟು ಮಾಡಿ ಸಾರ್ವಜನಿಕ ಜನಜೀವನಕ್ಕೆ ತೊಂದರೆ ನೀಡಲಾಗಿದೆ ಎಂದು ಆರೋಪಿಸಿ ಎಚ್‌ಎಎಲ್‌ ಠಾಣಾ ಪೊಲೀಸರು ಅರವಿಂದ ಲಿಂಬಾವಳಿ ಸೇರಿ 24 ಮಂದಿ ವಿರುದ್ಧ ಎಫ್‌ಐರ್‌ ದಾಖಲಿಸಿದ್ದರು. ನಂತರ ತನಿಖೆ ನಡೆಸಿ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದ್ದರು.