Asianet Suvarna News Asianet Suvarna News

ಮಕ್ಕಳಿಂದ ಶೌಚಾಲಯ ತೊಳಿಸಿದರೆ ಎಫ್ಐಆರ್‌: ಎಂಟು ಅಂಶಗಳ ಸುತ್ತೋಲೆಯಲ್ಲೇನಿದೆ?

ಇನ್ನು ಮುಂದೆ ಮುಖ್ಯಶಿಕ್ಷಕರು, ಶಿಕ್ಷಕರು ಅಥವಾ ಇತರೆ ಸಿಬ್ಬಂದಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಜೊತೆಗೆ ಎಫ್ಐಆರ್‌ ದಾಖಲಿಸಲಾಗುವುದು ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಶಾಲಾ ಶಿಕ್ಷಣ ಇಲಾಖೆ, ಈ ಕುರಿತು ಎಂಟು ಅಂಶಗಳ ಸುತ್ತೋಲೆ ಹೊರಡಿಸಿದೆ.

FIR if toilet is washed by children Says Department of Education gvd
Author
First Published Dec 31, 2023, 4:45 AM IST

ಬೆಂಗಳೂರು (ಡಿ.31): ಇನ್ನು ಮುಂದೆ ಮುಖ್ಯಶಿಕ್ಷಕರು, ಶಿಕ್ಷಕರು ಅಥವಾ ಇತರೆ ಸಿಬ್ಬಂದಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಜೊತೆಗೆ ಎಫ್ಐಆರ್‌ ದಾಖಲಿಸಲಾಗುವುದು ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಶಾಲಾ ಶಿಕ್ಷಣ ಇಲಾಖೆ, ಈ ಕುರಿತು ಎಂಟು ಅಂಶಗಳ ಸುತ್ತೋಲೆ ಹೊರಡಿಸಿದೆ.

ಇತ್ತೀಚೆಗೆ ಕೆಲ ಶಾಲೆಗಳಲ್ಲಿ ಮಕ್ಕಳಿಂದ ಶಾಲಾ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣಗಳು ಬೆಳಕಿಗೆ ಬಂದು ಪೋಷಕರು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಶನಿವಾರ ಶಾಲಾ ಶೌಚಾಲಯ ನಿರ್ವಹಣೆಗೆ ಎಂಟು ಅಂಶಗಳ ಮತ್ತೊಂದು ಸುತ್ತೋಲೆಯನ್ನು ಇಲಾಖೆಯ ಆಯುಕ್ತರಾದ ಕಾವೇರಿ ಅವರು ಹೊರಡಿಸಿದ್ದಾರೆ.

ಸಂಚಾರಿ ನಿಯಮ ಪಾಲಿಸಿದರೆ ಅಪಘಾತ ಆಗೋದಿಲ್ಲ: ಸಚಿವ ಮಧು ಬಂಗಾರಪ್ಪ

ಸುತ್ತೋಲೆಯಲ್ಲೇನಿದೆ?
1. ವಿದ್ಯಾರ್ಥಿಗಳಿಂದ ಶಾಲಾ ಶೌಚಾಲಯ ಸ್ವಚ್ಛಗೊಳಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

2. ಒಂದು ವೇಳೆ ಸ್ವಚ್ಛಗೊಳಿಸಿದ್ದು ಕಂಡು ಬಂದರೆ ಇದಕ್ಕೆ ಕಾರಣರಾದ ಮುಖ್ಯ ಶಿಕ್ಷಕರು, ಶಿಕ್ಷಕರು, ಇತರೆ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಹಾಗೂ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗುವುದು. ಇದು ಸರ್ಕಾರಿ ಶಾಲೆಗಳು ಮಾತ್ರವಲ್ಲ, ಅನುದಾನಿತ, ಅನುದಾನ ರಹಿತ ಖಾಸಗಿ ಶಾಲೆಗಳಿಗೂ ಅನ್ವಯಿಸುತ್ತದೆ.

3. ಶೌಚಾಲಯ ನಿರ್ವಹಣಾ ಅನುದಾನ ಈಗಾಗಲೇ ಶಾಲೆಗಳಿಗೆ ಬಿಡುಗಡೆಯಾಗಿದೆ. ಈ ಅನುದಾನವನ್ನು ಪ್ರಥಮ ಪ್ರಾಶಸ್ತ್ಯದಲ್ಲಿ ಬಳಸಿಕೊಳ್ಳಬೇಕು.

4. ಜೊತೆಗೆ ಶಾಲಾ ಎಸ್‌ಡಿಎಂಸಿಗಳ ಸಹಕಾರದೊಂದಿಗೆ ಸ್ಥಳೀಯವಾಗಿ ಲಭ್ಯ ಸಂಪನ್ಮೂಲಗಳೊಂದಿಗೆ ಶೌಚಾಲಯಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು.

5. ಎಸ್‌ಡಿಎಂಸಿಗಳು ವಿದ್ಯಾರ್ಥಿಗಳಿಗೆ ಶೌಚಾಲಯ ಸ್ವಚ್ಛಗೊಳಿಸದಂತೆ ಅರಿವು ಮೂಡಿಸಬೇಕು.

6. ಶಾಲಾ ಉಸ್ತುವಾರಿ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಈ ಬಗ್ಗೆ ಕಾಲ ಕಾಲಕ್ಕೆ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು.

ಉಚಿತ ಕೊಡುಗೆಗಳಿಂದಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವಿಲ್ಲ: ಕೋಟ ಶ್ರೀನಿವಾಸ್ ಪೂಜಾರಿ

7. ಭೇಟಿ ವೇಳೆ ಯಾವುದೇ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛತೆ ಕಂಡು ಬಂದರೆ ತಕ್ಷಣ ಡಿಡಿಪಿಐ, ಬಿಇಒಗಳ ಗಮನಕ್ಕೆ ತರಬೇಕು.

8. ಡಿಡಿಪಿಐ, ಬಿಇಒಗಳು ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ಎಫ್‌ಐಆರ್‌ ದಾಖಲಿಸಬೇಕು. ತಪ್ಪಿದರೆ ನಿಮ್ಮನ್ನೇ ಹೊಣೆಗಾರರನ್ನಾಗಿಸಿ ಶಿಸ್ತು ಕ್ರಮ ಜರುಗಿಸಲಾಗುತ್ತದೆ.

Follow Us:
Download App:
  • android
  • ios