ಬೆಂಗಳೂರು [ಡಿ.28]:  ಗಲಭೆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದವರ ವಿರುದ್ಧ ಉತ್ತರ ಪ್ರದೇಶದ ಮಾದರಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು ಕಾನೂನು ಪ್ರಕಾರ ದಂಡ ವಿಧಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಗಲಭೆ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಮಾಡುವವರ ವೈಯಕ್ತಿಕ ಆಸ್ತಿಯನ್ನು ಜಪ್ತಿ ಮಾಡುವುದಕ್ಕೆ ಪ್ರತ್ಯೇಕ ಕಾಯ್ದೆ ಇಲ್ಲ. ಆದರೆ ಈಗಿರುವ ಕಾನೂನಿನ ಪ್ರಕಾರ ದಂಡ ಮತ್ತು ಶಿಕ್ಷೆ ವಿಧಿಸುವುದಕ್ಕೆ ಅವಕಾಶ ಇರುವುದರಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಸಹ ದನಿಗೂಡಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಗಲಭೆಕೋರರ ಆಸ್ತಿಪಾಸ್ತಿಯನ್ನು ಜಪ್ತಿ ಮಾಡಲಾಗುವುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ತುಮಕೂರಲ್ಲಿ ಉತ್ತರಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಉತ್ತರ ಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿ ಆಲೋಚಿಸಿದ ರೀತಿಯಲ್ಲಿ ನಾವೂ ಆಲೋಚನೆ ಮಾಡುತ್ತಿದ್ದು ದಂಡ ವಸೂಲಿ ಕ್ರಮ ಜಾರಿ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಕಟ್ಟುನಿಟ್ಟಿನ ಕ್ರಮಕ್ಕೆ ಸಿದ್ಧ:

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ, ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಗಲಭೆಕೋರರ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. ಗಲಭೆಕೋರರ ಆಸ್ತಿ ಜಪ್ತಿ ಬಗ್ಗೆ ಇದುವರೆಗೆ ಸರ್ಕಾರ ನಿರ್ಣಯ ಕೈಗೊಂಡಿಲ್ಲ. ಆದರೆ ಈಗಿರುವ ಕಾನೂನಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಮಾಡುವವರಿಗೆ ದಂಡ ಮತ್ತು ಶಿಕ್ಷೆ ವಿಧಿಸುವುದಕ್ಕೆ ಅವಕಾಶ ಇದೆ. ಆದರೆ ಪ್ರಸ್ತುತ ಅಂತಹ ಕ್ರಮ ಆಗುತ್ತಿಲ್ಲ, ಆರೋಪಿಗಳ ಮೇಲೆ ಪೊಲೀಸರು ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತಾರೆ. ಅವರು ನಂತರ ಜಾಮೀನಿನ ಮೇಲೆ ಬಿಡುಗಡೆ ಆಗ್ತಿದ್ದಾರೆ. ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ತೀರ್ಮಾನ ಮಾಡಿದರೆ, ಸೂಕ್ತ ಕ್ರಮ ಕೈಗೊಳ್ಳಲು ತಾವು ಸಿದ್ಧ ಎಂದಿದ್ದಾರೆ.

ಗೂಂಡಾ ರಾಜ್ಯ ಮಾಡಲು ಬಿಡೋಲ್ಲ:

ಇದೇ ವೇಳೆ ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಬಿಜೆಪಿ ಸರ್ಕಾರ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಚಿವ ಕೆ.ಎಸ್‌.ಈಶ್ವರಪ್ಪ ಸರ್ಕಾರ ಆಸ್ತಿಪಾಸ್ತಿ ನಷ್ಟಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಯೋಚಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಮಂಗಳೂರಿನಲ್ಲಿ ದೊಡ್ಡ ಕಲ್ಲು ಹಾಗೂ ಪೆಟ್ರೋಲ್‌ ಬಾಂಬು ಎಸೆಯುವ ಮೂಲಕ ಗೂಂಡಾ ಪ್ರವೃತ್ತಿ ತೋರಿದ್ದಾರೆ. ಈ ರೀತಿ ಹಿಂದೆ ರಾಜ್ಯದಲ್ಲಿ ಯಾವತ್ತೂ ಆಗಿರಲಿಲ್ಲ. ಮುಂದೆ ಇಂಥದ್ದಕ್ಕೆ ಸರ್ಕಾರ ಅವಕಾಶ ಕೊಡುವುದಿಲ್ಲ. ಆಸ್ತಿಪಾಸ್ತಿ ನಷ್ಟಮಾಡಲು ಅವಕಾಶ ಕೊಡದೆ ಸರ್ಕಾರ ಬಿಗು ಕ್ರಮ ಕೈಗೊಳ್ಳುತ್ತದೆ. ಈಗಾಗಲೇ ಆಸ್ತಿ-ಪಾಸ್ತಿ ನಷ್ಟಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದರು.

ಪೌರತ್ವ ಕಾಯ್ದೆ ವಿರೋಧ: ರಾಜ್ಯದಲ್ಲೂ ಗಲಭೆ ಮಾಡಿದವರ ಆಸ್ತಿ ಜಪ್ತಿ? ...

ಗಲಭೆ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಮಾಡುವವರ ವೈಯಕ್ತಿಕ ಆಸ್ತಿಯನ್ನು ಜಪ್ತಿ ಮಾಡುವುದಕ್ಕೆ ಪ್ರತ್ಯೇಕ ಕಾಯ್ದೆ ಇಲ್ಲ. ಆದರೆ ಈಗಿರುವ ಕಾನೂನಿನ ಪ್ರಕಾರ ದಂಡ ಮತ್ತು ಶಿಕ್ಷೆ ವಿಧಿಸುವುದಕ್ಕೆ ಅವಕಾಶ ಇರುವುದರಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದೆ.

- ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ