ಬೆಂಗಳೂರು(ಜ.05): ಪುರುಷನೊಬ್ಬನ ಹೊಟ್ಟೆಯಲ್ಲಿ ಗರ್ಭಾಶಯ ಇರುವುದಾಗಿ ಸುಳ್ಳು ವೈದ್ಯಕೀಯ ವರದಿ ನೀಡುವ ಮೂಲಕ, ಭೀತಿಯಿಂದ ಬದುಕಲು ಕಾರಣವಾಗಿದ್ದ ನಗರದ ಕನ್ನಿಂಗ್‌ ಹ್ಯಾಂ ರಸ್ತೆಯ ಫೋರ್ಟಿಸ್‌ ಆಸ್ಪತ್ರೆಗೆ 1 ಲಕ್ಷ ದಂಡ ವಿಧಿಸಿರುವ ಗ್ರಾಹಕರ ಹಕ್ಕುಗಳ ಆಯೋಗ, ದಂಡದ ಮೊತ್ತವನ್ನು ತೊಂದರೆಗೊಳಗಾದ ವ್ಯಕ್ತಿಗೆ ಪರಿಹಾರವಾಗಿ ನೀಡಲು ಸೂಚಿಸಿದೆ. ಜೊತೆಗೆ, ಈ ಸಂಬಂಧ ಕಾನೂನು ಹೋರಾಟದ ವೆಚ್ಚವಾಗಿ 25 ಸಾವಿರ ಪರಿಹಾರ ನೀಡಲು ಆದೇಶಿಸಿದೆ.

ಆಸ್ಪತ್ರೆ ಸುಳ್ಳು ವರದಿಯಿಂದ ದಿಗಿಲುಗೊಂಡಿದ್ದ ಆರ್‌.ಟಿ.ನಗರದ ದಿನ್ನೂರು ಮುಖ್ಯರಸ್ತೆ ನಿವಾಸಿ ಚಂದನ್‌ ದೇಬ್‌ ಎಂಬುವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಗ್ರಾಹಕರ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್‌.ಎಲ್‌.ಪಾಟೀಲ್‌, ಸದಸ್ಯರಾದ ಪಿ.ಕೆ.ಶಾಂತಾ ಮತ್ತು ರೇಣುಕಾದೇವಿ ದೇಶಪಾಂಡೆ ಅವರಿದ್ದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ.

ಕರ್ನಾಟಕದಲ್ಲಿ ತಗ್ಗಿದ ಕೊರೋನಾ: ಸೋಮವಾರ ಮೂರಂಕಿಗೆ ಇಳಿದ ಸೋಂಕಿನ ಪ್ರಮಾಣ

ಗರ್ಭಾಶಯ ಎಂಬುದು ಮಹಿಳೆಯರಲ್ಲಿ ಮಾತ್ರ ಇರುವ ಅಂಗ. ಆದರೆ, ಈ ಆಸ್ಪತ್ರೆ ಪುರುಷನ ಹೊಟ್ಟೆಯಲ್ಲಿ ಗರ್ಭಾಶಯ ಇದೆ ಎಂದು ಹೇಳಿರುವುದು ಕರ್ತವ್ಯಲೋಪ ಎಸಗಿದಂತಾಗಿದ್ದು, ಇದೊಂದು ಅನೈತಿಕ ವರದಿಯಾಗಿದೆ. ಇದರಿಂದ ಅರ್ಜಿದಾರರು ಸಾಕಷ್ಟುಭಯದಿಂದ ಜೀವನ ನಡೆಸುವ ಜೊತೆಗೆ, ಕಚೇರಿ ಕೆಲಸಗಳಿಗೆ ಗಮನ ಹರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿ ಖಿನ್ನತೆಗೆ ಒಳಗಾಗಿದ್ದಾರೆ. ಆದ್ದರಿಂದ ದಂಡ ವಿಧಿಸುತ್ತಿರುವುದಾಗಿ ವೇದಿಕೆ ಅಭಿಪ್ರಾಯ ಪಟ್ಟಿದೆ.

ಪ್ರಕರಣ ಹಿನ್ನೆಲೆ:

ದೂರುದಾರ ಚಂದನ್‌ ದೇಬ್‌ ಅವರು ಆರೋಗ್ಯವಾಗಿದ್ದರೂ ಮುಂಜಾಗ್ರತೆ ದೃಷ್ಟಿಯಿಂದ ನಗರದ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಆರೋಗ್ಯ ಪರೀಕ್ಷೆಗೆ ಒಳಗಾಗಿದ್ದರು. ಈ ಸಂಬಂಧ ಪರೀಕ್ಷೆ ನಡೆಸಿದ್ದ ವರದಿ ನೀಡಿದ್ದ ಆಸ್ಪತ್ರೆಯ ವಿಕಿರಣಶಾಸ್ತ್ರ (ರೇಡಿಯಾಲಜಿ) ವಿಭಾಗದ ವೈದ್ಯರು, ಹೊಟ್ಟೆಯಲ್ಲಿ ಗರ್ಭಾಶಯವಿದೆ ಎಂದು ತಿಳಿಸಿದ್ದರು. ಇದರಿಂದ ಗಾಬರಿಗೊಂಡಿದ್ದ ಚಂದನ್‌, ಕೆಲ ದಿನಗಳ ಬಳಿಕ ಮತ್ತೊಮ್ಮೆ ಪರೀಕ್ಷೆಗೆ ಒಳಗಾದಾಗ ಹೊಟ್ಟೆಯಲ್ಲಿ ಗರ್ಭಾಶಯ ಇಲ್ಲ ಎಂಬುದಾಗಿ ತಿಳಿಸಿದ್ದರು.

ನಂತರ ಆಸ್ಪತ್ರೆ ಆಡಳಿತ ಮಂಡಳಿಗೆ ಇ-ಮೇಲ್‌ ಮೂಲಕ ದೂರು ನೀಡಿದ್ದ ಚಂದನ್‌, ವೈದ್ಯರ ತಪ್ಪು ವರದಿಯಿಂದ ಸಾಕಷ್ಟುಮಾನಸಿಕವಾಗಿ ತೊಂದರೆಗೆ ಸಿಲುಕಿದ್ದೇನೆ. ಇದಕ್ಕೆ .5 ಲಕ್ಷ ಪರಿಹಾರ ನೀಡಬೇಕು ಎಂದು ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಆಸ್ಪತ್ರೆಯ ಆಡಳಿತ ಮಂಡಳಿ .25 ಸಾವಿರ ನೀಡುವುದಾಗಿ ತಿಳಿಸಿತ್ತು. ಇದಕ್ಕೆ ಒಪ್ಪದೆ ಚಂದನ್‌ ದೇಬ್‌ ಗ್ರಾಹಕರ ಹಕ್ಕುಗಳ ವೇದಿಕೆಯಲ್ಲಿ ದೂರು ಸಲ್ಲಿಸಿದ್ದರು.

ಕಡಿಮೆ ಬಡ್ಡಿ- ಕಂತು, ಶೇ.85ರಷ್ಟು ಸಾಲ; ಟಾಟಾ ಮೋಟಾರ್ಸ್ ಕಾರು ಖರೀದಿ ಈಗ ಸುಲಭ!

ದೂರಿನ ಸಂಬಂಧ ಆಕ್ಷೇಪಣೆ ಸಲ್ಲಿಸಿದ್ದ ಆಸ್ಪತ್ರೆ ಆಡಳಿತ ಮಂಡಳಿ, ದೂರುದಾರರಿಗೆ ಸಂಬಂಧಿಸಿದ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಪುರುಷನ ಜನನೇಂದ್ರಿಯ ಎಂಬುದರ ಬದಲಾಗಿ ಗರ್ಭಾಶಯ ಎಂಬುದಾಗಿ ಉಲ್ಲೇಖವಾಗಿದೆ. ಇದು ಬರವಣಿಗೆ ದೋಷವೇ ಹೊರತು ಕರ್ತವ್ಯ ಲೋಪವಲ್ಲ. ಈ ಲೋಪವೆಸಗಿದ್ದಕ್ಕೆ .25 ಸಾವಿರ ಪರಿಹಾರ ನೀಡಲು ಸಿದ್ಧವಿದ್ದೇವೆ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು. ಆದರೆ ಆಸ್ಪತ್ರೆ ಆಡಳಿತ ಮಂಡಳಿ ವಾದ ಒಪ್ಪದ ನ್ಯಾಯಾಲಯ ದೂರುದಾರರಿಗೆ ಪರಿಹಾರ ನೀಡಲು ಸೂಚಿಸಿದೆ.