ಬೆಂಗಳೂರು, (ಜ.08): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿರ್ಮಿಸಲುದ್ದೇಶಿಸಿದ್ದ ಮಹತ್ವಾಕಾಂಕ್ಷೆಯ ಚಿತ್ರನಗರಿ (ಫಿಲ್ಮ್‌ ಸಿಟಿ) ಯೋಜನೆ ಬೆಂಗಳೂರಿಗೆ ಶಿಫ್ಟ್ ಆಗುವುದು ಪಕ್ಕಾ ಆಗಿದೆ.

ಈ ಹಿಂದಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಮೈಸೂರಿನ ಫಿಲ್ಮ್ ಸಿಟಿಯನ್ನು ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸುವ ಮಾತುಗಳು ಹರಿದಾಡುತ್ತಿದ್ದವು.

ಆದ್ರೆ, ಇದೀಗ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಮೈಸೂರಿಗೆ ಮಂಜೂರಾಗಿದ್ದ ಫಿಲ್ಮ್‌ ಸಿಟಿಯನ್ನು ಬೆಂಗಳೂರಿನಲ್ಲಿಯೇ ನಿರ್ಮಾಣ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಇಂದು (ಬುಧವಾರ) ಡಿಸಿಎಂ ಡಾ. ಸಿ.ಎನ್‌ ಅಶ್ವಥ್‌ ನಾರಾಯಣ ಅವರು ಅಧಿಕೃತ ಹೇಳಿಕೆ ನೀಡಿದ್ದಾರೆ.  

ಮೈಸೂರು ಫಿಲ್ಮ್‌ಸಿಟಿ ದೊಡ್ಡಬಳ್ಳಾಪುರಕ್ಕೆ ಶಿಫ್ಟ್?

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆ, ಫಿಲ್ಮ್‌ ಸಿಟಿ, ರೋರಿಚ್‌ ಆರ್ಟ್‌ ಅಂಡ್‌ ಕ್ರಾಫ್ಟ್‌ ಮ್ಯೂಸಿಯಂ ಸ್ಥಾಪನೆ ಕುರಿತ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪಿಸಲು ಜಾಗ ಗುರುತು ಮಾಡಲಾಗಿದೆ. ಮುಖ್ಯಮಂತ್ರಿಗಳ ಜತೆ ಈ ವಿಷಯ ಚರ್ಚಿಸಿ ಅವರ ಅನುಮೋದನೆ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ದೇಶ, ವಿದೇಶಗಳ ಹಲವು ಪ್ರಮುಖ  ಫಿಲ್ಮ್‌ ಸಿಟಿಗಳನ್ನು ನೋಡಿದ್ದು, ಅವೆಲ್ಲಕ್ಕಿಂತ ವಿಭಿನ್ನ ಹಾಗೂ ವಿಶಿಷ್ಟವಾದ ಫಿಲ್ಮ್‌ ಸಿಟಿ ಸ್ಥಾಪಿಸುವುದು ನಮ್ಮ ಸರ್ಕಾರದ ಕನಸಾಗಿದೆ.  ಅನಿಮೇಷನ್‌ ಕೇಂದ್ರ, ಚಿತ್ರ ನಿರ್ಮಾಣ ಹಾಗೂ ನಿರ್ಮಾಣ ನಂತರದ ಚಟುವಟಿಕೆಗಳಿಗೆ   ಅನುಕೂಲವಾಗುವಂತಹ ಫಿಲ್ಮ್‌ ಸಿಟಿ ಸ್ಥಾಪಿಸಬೇಕು ಎಂದು ಹೇಳಿದರು.

ಪ್ರವಾಸೋದ್ಯಮಕ್ಕೂ ಪೂರಕವಾಗಿರುವ ಈ ಫಿಲ್ಮ್‌ ಸಿಟಿ ಹೇಗಿರಬೇಕು? ಅದರ ವಿಸ್ತೀರ್ಣ ಎಷ್ಟಿರಬೇಕು? ಎಂಬ ಬಗ್ಗೆ ಚರ್ಚೆ ನಡೆದಿದ್ದು, ಶೀಘ್ರದಲ್ಲೇ ಈ ಬಗ್ಗೆ ಪೂರ್ಣ ಮಾಹಿತಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು. 

ಮೈಸೂರಿನಿಂದ ಎತ್ತಂಗಡಿಗೆ ಕಾರಣ..?
ಮೈಸೂರಿನಲ್ಲಿ ಫಿಲ್ಮ್‌ ಸಿಟಿ ಏಕಿಲ್ಲ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಉಪಮುಖ್ಯಮಂತ್ರಿಗಳು, ಬೆಂಗಳೂರು ನಗರ ವಿಶ್ವಕ್ಕೆ ಅನಿಮೇಷನ್ ಕೊಟ್ಟಿದೆ. 'ಲಯನ್‌ ಕಿಂಗ್‌', 'ಅವತಾರ್‌' ನಂತಹ ಚಿತ್ರಗಳ ಅನಿಮೇಷನ್‌ ಬೆಂಗಳೂರಿನಲ್ಲೇ ಆಗಿವೆ. ಯಾವುದೋ ಒಂದೆರೆಡು ವಿಷಯಕ್ಕೆ ಸೀಮಿತವಾಗಿರದೇ ಎಲ್ಲವನ್ನು ಒಳಗೊಂಡ  ಅತ್ಯುತ್ತಮ ಫಿಲ್ಮ್‌ ಸಿಟಿ ನಿರ್ಮಾಣ ಆಗಬೇಕು ಎಂಬುದಷ್ಟೇ ನಮ್ಮ ಗುರಿ ಎಂದು ಸ್ಪಷ್ಟನೆ ನೀಡಿದರು.

ಈ ಹಿಂದೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಘೋಷಣೆ ಮಾಡಿತ್ತು. ಬಳಿಕ ನಂತರದ ಮೈತ್ರಿ ಸರ್ಕಾರ ಈ ಫಿಲ್ಮ್ ಸಿಟಿಯನ್ನು ರಾಮನಗರಕ್ಕೆ ಅಥವಾ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರ ಮಾಡುವ ಬಗ್ಗೆ ಚಿಂತನೆಗಳು ನಡೆದಿದ್ದವು.

ಮೈಸೂರಿನಲ್ಲಿ ಜಾಗವೂ ಫಿಕ್ಸ್ ಆಗಿತ್ತು..!
ಕನ್ನಡ ಚಿತ್ರರಂಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಮೈಸೂರಿನ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ಫಿಲ್ಮ್ ಸಿಟಿಗಾಗಿ ಒಪ್ಪಿಗೆ ಪಡೆದುಕೊಂಡಿತ್ತು. ಅಷ್ಟೇ ಅಲ್ಲದೇ ಅಂದಿನ ಜಿಲ್ಲಾಧಿಕಾರಿ ಸಿ.ಶಿಖಾ ಸೇರಿದಂತೆ ಕನ್ನಡದ ಕೆಲ ನಟರು ಹಾಗೂ ಅಧಿಕಾರಿಗಳು ಅಲ್ಲಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದರು. 

133 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕವಾಗಿ ನೋಯ್ಡಾದಲ್ಲಿರುವಂತೆ ಚಿತ್ರನಗರಿ ಮಾಡುವುದಾಗಿ ಮಾತುಕತೆಗಳು ಹರಿದಾಡಿದ್ದವು. ನಂತರ ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಹಾಗೂ ಕನ್ನಡ ಚಿತ್ರರಂಗವಾಗಲಿ ಅತ್ತ ಮತ್ತೆ ಸುಳಿಯಲಿಲ್ಲ.