ಮಧ್ಯಪ್ರದೇಶಲ್ಲಿ ಯುದ್ಧ ವಿಮಾನ ಡಿಕ್ಕಿ: ಬೆಳಗಾವಿಯ ವಿಂಗ್ ಕಮಾಂಡರ್ ಹುತಾತ್ಮ
ಮಧ್ಯಪ್ರದೇಶದ ಮೊರೆನಾದಲ್ಲಿ ಭಾರತೀಯ ಯುದ್ದ ವಿಮಾನಗಳು ಪರಸ್ಪರ ಡಿಕ್ಕಿಯಾಗಿದ್ದು, ಈ ಘಟನೆಯಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹುತಾತ್ಮರಾಗಿದ್ದಾರೆ.
ಬೆಳಗಾವಿ (ಜ.28): ಮಧ್ಯಪ್ರದೇಶದ ಮೊರೆನಾದಲ್ಲಿ ಭಾರತೀಯ ಯುದ್ದ ವಿಮಾನಗಳು ಪರಸ್ಪರ ಡಿಕ್ಕಿಯಾಗಿದ್ದು, ಈ ಘಟನೆಯಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹುತಾತ್ಮರಾಗಿದ್ದಾರೆ. ಬೆಳಗಾವಿಯ ಗಣೇಶಪುರದ ನಿವಾಸಿ ಹನುಮಂತರಾವ್.ಆರ್ ಸಾರಥಿ ಹುತಾತ್ಮರಾದ ವಿಂಗ್ ಕಮಾಂಡರ್ ಆಗಿದ್ದಾರೆ.
ವಿಂಗ್ ಕಮಾಂಡರ್ ಹನುಂತರಾವ್ ಸಾರಥಿ ಅವರು, ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ತಂದೆ, ತಾಯಿ, ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದು, ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಹನುಮಂತರಾವ್ ಮನೆಗೆ ಭೇಟಿ ನೀಡಿದ ಬೆಳಗಾವಿಯ ಏರ್‌ಫೋರ್ಸ್ ಟ್ರೈನಿಂಗ್ ಸೆಂಟರ್‌ನ ಅಧಿಕಾರಿಗಳು ಭೇಟಿ ನೀಡಿ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ನಂತರ ಮನೆಯವರಿಗೆ ಸಾಂತ್ವನ ಹೇಳಿದ್ದು, ಅಲ್ಲಿಂದ ತೆರಳಿದ್ದಾರೆ. ಆದರೆ, ವಿಂಗ್ ಕಮಾಂಡರ್ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಧ್ಯ ಪ್ರದೇಶದ ಮೊರೆನಾ ಬಳಿ 2 ಯುದ್ಧ ವಿಮಾನ ಪತನ; ಓರ್ವ ಪೈಲಟ್ ಸಾವು
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಾಂತ್ವನ:
ಭಾರತೀಯ ಯುದ್ದ ವಿಮಾನಗಳ ಪರಸ್ಪರ ಡಿಕ್ಕಿ ಘಟನೆಯಲ್ಲಿ ಹುತಾತ್ಮರಾದ ಹನುಮಂತರಾವ್ ಅವರ ಮನೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಗಣೇಶಪುರದಲ್ಲಿ ಹುತಾತ್ಮ ವಿಂಗ್ ಕಮಾಂಡರ್ ಮನೆಯಿದೆ. ಇನ್ನು ಹನುಮಂತರಾವ್ ಅವರ ಮನೆಗೆ ಬಂದಿದ್ದ ಬೆಳಗಾವಿ ಏರ್‌ಫೋರ್ಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಘಟನೆಯ ಬಗ್ಗೆ ವಿವರವನ್ನು ಪಡೆದುಕೊಂಡಿದ್ದಾರೆ.
ನವದೆಹಲಿ (ಜನವರಿ 28, 2023): ಮಧ್ಯಪ್ರದೇಶದ ಮೊರೇನಾದ ಬಳಿ 2 ಯುದ್ಧ ವಿಮಾನಗಳು ಪತನವಾಗಿದೆ. ಸುಖೋಯ್ - 30 ಹಾಗೂ ಮಿರಾಜ್ 2000 ಯುದ್ಧ ವಿಮಾನಗಳು ಪತನವಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್ ಏರ್‌ಬೇಸ್‌ನಿಂದ ಹೊರಟಿದ್ದ ಯುದ್ಧ ವಿಮಾನಗಳು ಪತನಗೊಂಡಿವೆ ಎಂದು ತಿಳಿದುಬಂದಿದೆ. ಆದರೆ, ಈ ಅವಘಡಕ್ಕೆ ಕಾರಣ ಈವರೆಗೆ ತಿಳಿದುಬಂದಿಲ್ಲ. ಇನ್ನು, ಸ್ಥಳದಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ರಕ್ಷಣಾ ಮೂಲಗಳು ಮಾಹಿತಿ ನೀಡಿವೆ. ಎರಡೂ ಯುದ್ಧ ವಿಮಾನಗಳು ಡಿಕ್ಕಿ ಹೊಡೆದುಕೊಂಡಿದ್ದು, ಈ ಬಗ್ಗೆ ತನಿಖೆ ಮಾಡಲಾಗುವುದು ಎಂದು ಭಾರತೀಯ ವಾಯುಪಡೆ ತಿಳಿಸಿದೆ. ಈ ಅವಘಡದಲ್ಲಿ ಒಬ್ಬರು ಪೈಲಟ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ದೆಹಲಿಯ ಕರ್ತವ್ಯ ಪಥದಲ್ಲಿ ರಾಷ್ಟ್ರಪತಿಯಿಂದ ಧ್ವಜಾರೋಹಣ: ಹುತಾತ್ಮ ಯೋಧರಿಗೆ ಮೋದಿ ನಮನ
ಸುಖೋಯ್ - 30 ಯುದ್ಧ ವಿಮಾನ: ಸುಖೋಯ್ - 30 ಯುದ್ಧ ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದರು. ಈ ಪೈಕಿ, ಒಬ್ಬರನ್ನು ರಕ್ಷಿಸಲಾಗಿದ್ದು, ಅವರು ಬದುಕುಳಿದಿದ್ದಾರೆ ಎಂದು ತಿಳಿದಿದೆ. ಅಲ್ಲದೆ, ಮಿರಾಜ್ 2000 ವಿಮಾನದಲ್ಲಿ ಒಬ್ಬರು ಪೈಲಟ್ ಇದ್ದು, ಅವರು ಸಹ ಬದುಕುಳಿದಿದ್ದಾರೆ. ಈ ಇಬ್ಬರು ಪೈಲಟ್‌ಗಳಿಗೆ ಗಾಯಗಳಾಗಿದ್ದು, ಇವರಿಬ್ಬರು ಸುರಕ್ಷಿವಾಗಿರುವ ಬಗ್ಗೆ ಮೊರೆನಾ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಈ ಇಬ್ಬರನ್ನು ಸುರಕ್ಷಿತವಾಗಿ ಯುದ್ಧ ವಿಮಾನಗಳಿಂದ ಕಾಪಾಡಲಾಗಿದೆ ಎಂದು ತಿಳಿದುಬಂದಿದೆ.
ಯುದ್ಧ ವಿಮಾನವೊಂದರ ಅವಶೇಷ ಪತ್ತೆಯಾಗಿದ್ದು, ಮಧ್ಯ ಪ್ರದೇಶದ ಮೊರೆನಾ ಬಳಿ ಎರಡು ಯುದ್ಧ ವಿಮಾನಗಳು ಪತನವಾಗಿರುವ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮಾಹಿತಿ ನೀಡಲಾಗಿದೆ. ಅವರು ವಾಯುಸೇನಾ ಮುಖ್ಯಸ್ಥ ಹಾಗೂ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಅವರ ಜತೆ ಸಂಪರ್ಕದಲ್ಲಿದ್ದಾರೆ ಎಂದೂ ತಿಳಿದುಬಂದಿದೆ. ಈ ಮೊದಲು ರಾಜಸ್ಥಾನದ ಭರತ್‌ಪುರದಲ್ಲಿ ಚಾರ್ಟಡ್ ವಿಮಾನ ಪತನವಾಗಿದೆ ಎಂದು ಭರತ್‌ಪುರ ಜಿಲ್ಲಾಧಿಕಾರಿ ಅಲೋಕ್ ರಂಜನ್ ಮಾಹಿತಿ ನೀಡಿದ್ದರು. ಆದರೆ, ಸುತ್ತಮುತ್ತಲ ಪ್ರದೇಶದಲ್ಲಿ ಯುದ್ಧ ವಿಮಾನಗಳು ಪತನಗೊಂಡಿವೆ ಎಂದು ರಕ್ಷಣಾ ಮೂಲಗಳು ಮಾಹಿತಿ ನೀಡಿದ್ದವು. ಬಳಿಕ, ಮಧ್ಯ ಪ್ರದೇಶದ ಮೊರೇನಾ ಬಳಿ ಈ ಯುದ್ಧ ವಿಮಾನಗಳು ಪತನಗೊಂಡಿವೆ ಎಂಬುದು ಸ್ಪಷ್ಟವಾಗಿದೆ.