ಬೆಂಗಳೂರು[ಫೆ.03]: ರಾಜ್ಯದಲ್ಲಿ ಕೊರೋನಾ ವೈರಾಣು ಭೀತಿ ಕ್ರಮೇಣ ದೂರವಾಗುತ್ತಿದೆ. ಪುಣೆಯ ವೈರಾಣು ಅಧ್ಯಯನ ಸಂಸ್ಥೆಗೆ ಕಳುಹಿಸಿದ್ದ ಕೊರೋನಾ ಶಂಕಿತರ ಬಹುತೇಕ ರಕ್ತ ಮಾದರಿಗಳಲ್ಲಿ ಕೊರೋನಾ ವೈರಾಣು ಸೋಂಕು ಇಲ್ಲದಿರುವುದು ಖಚಿತಪಟ್ಟಿದೆ. ಹೀಗಾಗಿ ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈವರೆಗೆ ಪರೀಕ್ಷೆಗೆ ಕಳುಹಿಸಿರುವ 84 ಸ್ಯಾಂಪಲ್‌ಗಳ ಪೈಕಿ 28 ಮಂದಿಯ ವರದಿ ಬಂದಿದ್ದು, ಎಲ್ಲ ಪ್ರಕರಣಗಳಲ್ಲಿ ಸೋಂಕು ಇಲ್ಲದಿರುವುದು ಖಚಿತಪಟ್ಟಿದೆ. ಚೀನಾದಿಂದ ಆಗಮಿಸುತ್ತಿರುವ ಪ್ರಯಾಣಿಕರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ತಪಾಸಣೆ ನಡೆಸಿ, ಶಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಕಟ್ಟೆಚ್ಚರ ವಹಿಸಲಾಗುತ್ತಿದೆ.

ಕೊರೋನಾ: ಭಾರತದ 2ನೇ ಕೇಸ್‌ ಪತ್ತೆ!

ಈ ಪೈಕಿ ಜ.21ರಿಂದ ಈವರೆಗೆ 84 ಶಂಕಿತರನ್ನು ಗುರುತಿಸಿ ಅವರ ರಕ್ತದ ಮಾದರಿಯನ್ನು ಆರೋಗ್ಯ ಇಲಾಖೆ ಪುಣೆಯ ಎನ್‌ಐವಿ ಸಂಸ್ಥೆಗೆ ಕಳುಹಿಸಿತ್ತು. ಇದರಲ್ಲಿ 28 ಮಂದಿಯ ರಕ್ತ ಮಾದರಿಯ ವರದಿಯು ನೆಗೆಟಿವ್‌ ಬಂದಿದೆ. ಇನ್ನು ಶನಿವಾರ ಹಾಗೂ ಭಾನುವಾರ ಆಸ್ಪತ್ರೆಗೆ ಬಂದು ರಕ್ತದ ಮಾದರಿ ನೀಡಿರುವ 43 ಮಂದಿಯ ವರದಿ ಇನ್ನೂ ಬರಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಯಾರೂ ಆಸ್ಪತ್ರೆಯಲ್ಲಿಲ್ಲ:

ಈ ಬಗ್ಗೆ ಮಾತನಾಡಿದ ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆಯ ನಿರ್ದೇಶಕ ಡಾ.ನಾಗರಾಜ್‌, ಎಲ್ಲ ಶಂಕಿತರ ವರದಿಯೂ ನೆಗೆಟಿವ್‌ ಎಂದು ಬರುತ್ತಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ. ವುಹಾನ್‌ ನಗರದಿಂದ ಬಂದಿದ್ದ ಎಲ್ಲರ ರಕ್ತದ ವರದಿಯು ನೆಗೆಟಿವ್‌ ಬಂದಿದೆ. ವುಹಾನ್‌ ನಗರದಿಂದ ಬಂದವರನ್ನು ಮಾತ್ರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದ್ದರಿಂದ ಉಳಿದವರನ್ನು ಮನೆಗೆ ಕಳುಹಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಯಾವುದೇ ಶಂಕಿತರು ಚಿಕಿತ್ಸೆ ಪಡೆಯುತ್ತಿಲ್ಲ. ಮನೆಯಲ್ಲಿಯೇ ಆರೋಗ್ಯ ಇಲಾಖೆಯು ನಿಗಾವಹಿಸಿದೆ. ಬಾಕಿ 43 ಮಂದಿಯ ವರದಿಯು ಸೋಮವಾರ ಬರುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

ಕೊರೋನಾ ವೈರಸ್ ಭೀತಿ: ಬೆಂಗಳೂರಿನಲ್ಲಿ ಮಾಸ್ಕ್ ಮಾರಾಟ ಜೋರು!

ಇನ್ನು ನಗರದ ಬೇಗೂರು ಬಳಿಯ ಕುಟುಂಬವೊಂದರ ಐದು ಮಂದಿ ಇತ್ತೀಚೆಗೆ ಚೀನಾ ಪ್ರವಾಸ ಹೋಗಿ ಬಂದಿದ್ದರು. ಈ ಕುರಿತು ನೆರೆಹೊರೆಯವರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿಯ ಸಲಹೆ ಮೇರೆಗೆ ಆ ಕುಟುಂಬದ ಸದಸ್ಯರು ಆಸ್ಪತ್ರೆಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿದ್ದಾರೆ. ಕೊರೋನ ಸೋಂಕಿನ ಲಕ್ಷಣ ಕಂಡು ಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ವೈದ್ಯರು ರಕ್ತ ಪರೀಕ್ಷೆಗೆ ಮಾಡಿದ್ದು, ವರದಿಯಲ್ಲಿ ಸೋಂಕು ಇಲ್ಲದಿರುವುದು ದೃಢವಾಗಿದೆ.

ಈ ನಡುವೆ, ವಿಲ್ಸನ್‌ ಗಾರ್ಡನ್‌ ಸುತ್ತಮುತ್ತಲಿನ 19 ಮಂದಿಗೆ ಸೋಂಕು ತಗುಲಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು. ಇದು ಸತ್ಯಕ್ಕೆ ದೂರ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದರು.

ಈಗ ಬೆಂಗಳೂರಲ್ಲೇ ಕೊರೋನಾ ಪರೀಕ್ಷೆ

ಮಾರಣಾಂತಿಕ ಕೊರೋನಾ ಕಾಯಿಲೆಗೆ ಈವರೆಗೂ ಬೆಂಗಳೂರಿನಲ್ಲಿ ಪರೀಕ್ಷೆ ವ್ಯವಸ್ಥೆ ಇರಲಿಲ್ಲ. ಕೊರೋನಾ ಶಂಕಿತರ ರಕ್ತ ಪರೀಕ್ಷೆಗೆ ಪುಣೆ ಎನ್‌ಐವಿಗೆ ಕಳಿಸಬೇಕಿತ್ತು. ಸೋಮವಾರದಿಂದ ಬೆಂಗಳೂರಲ್ಲೇ ಕೊರೋನಾ ಪರೀಕ್ಷೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ರಾಜೀವ್‌ ಗಾಂಧಿ ಆಸ್ಪತ್ರೆಯ ಎನ್‌ಐವಿ ಕೇಂದ್ರ ಹಾಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಕ್ತದ ಮಾದರಿಗಳ ಪರೀಕ್ಷೆಗೆ ವೈದ್ಯಕೀಯ ಪ್ರಯೋಗಾಲಯಗಳಲ್ಲಿ ಅತ್ಯಾಧುನಿಕ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಸಂಬಂಧ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ಸೋಮವಾರದಿಂದ ಪರೀಕ್ಷೆಗಳನ್ನು ಪ್ರಾರಂಭಿಸಲಾಗುತ್ತದೆ. ಇದರಿಂದ ರಕ್ತ ಪರೀಕ್ಷೆ ವರದಿಗಳು ಶೀಘ್ರ ಲಭ್ಯವಾಗಲಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.