ರೈತರ ಭಾರತ್ ಬಂದ್ : ರಾಜ್ಯದಲ್ಲೂ ಬೆಂಬಲ
ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ರೈತರು ಡಿ.8ರಂದು (ಮಂಗಳವಾರ) ಕರೆ ನೀಡಿರುವ ಭಾರತ್ ಬಂದ್‌ಗೆ ರಾಜ್ಯದಲ್ಲೀ ಬೆಂಬಲ ವ್ಯಕ್ತವಾಗಿದೆ
ಬೆಂಗಳೂರು (ಡಿ.07): ಕೇಂದ್ರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ರೈತರು ಡಿ.8ರಂದು (ಮಂಗಳವಾರ) ಕರೆ ನೀಡಿರುವ ಭಾರತ್ ಬಂದ್‌ಗೆ ಬೆಂಬಲಿಸಿ ರಾಜ್ಯದ ರೈತ ಸಂಘಟನೆಗಳು ಅಂದು ಕರ್ನಾಟಕ ಬಂದ್ ಮಾಡಲು ನಿರ್ಧರಿಸಿವೆ.
"
ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು, ದೆಹಲಿಯ ಹೊರಗಡೆ ರೈತರನ್ನು ತಡೆಯುವ ಮೂಲಕ ರೈತರ ಹೋರಾಟವನ್ನು ಕೇಂದ್ರ ಸರ್ಕಾರ ಹತ್ತಿಕ್ಕುವ ಕೆಲಸ ಮಾಡಿದೆ. ರೈತರ ಬೇಡಿಕೆ ಈಡೇರಿಸುವ ಬದಲು ಬೇಜವಾಬ್ದಾರಿಯಾಗಿ ಮಾತನಾಡುತ್ತಿವೆ. ಇದನ್ನು ಖಂಡಿಸಿ ಭಾರತ್ ಬಂದ್‌ಗೆ ಕರೆ ನೀಡಲಾಗಿದ್ದು, ರಾಜ್ಯದ ರೈತರು ಕರ್ನಾಟಕ ಬಂದ್ ಮಾಡುವ ಮೂಲಕ ರೈತರ ಹೋರಾಟಕ್ಕೆ ಬೆಂಬಲಿಸಲಿದ್ದೇವೆ ಎಂದರು.
ಭಾರತ್ ಬಂದ್‌ಗೆ ಕರೆ ನೀಡಿದ ರೈತ ಸಂಘಟನೆ, ದೇಶವ್ಯಾಪಿ ಪ್ರತಿಭಟನೆ ಕಿಚ್ಚು! ..
ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ರೈತರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಭಾರತ್ ಬಂದ್ ದಿನ ಎಲ್ಲಾ ಹೆದ್ದಾರಿ, ರಸ್ತೆಗಳನ್ನು ಬಂದ್ ಮಾಡಲಿದ್ದೇವೆ. ಬಂದ್‌ಗೆ ಎಡಪಕ್ಷದವರು, ಪುಟ್ಟಣ್ಣಯನವರ ರೈತ ಸಂಘಟನೆ, ಕುರುಬೂರು ಶಾಂತಕುಮಾರ್ ಅವರ ರಾಜ್ಯ ಕಬ್ಬು ಬೆಳೆಗಾರರ ಸಂಘ, ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ ಸೇರಿದಂತೆ ಇತರೆ ಕನ್ನಡಪರ ಸಂಘಟನೆಗಳು ಬೆಂಬಲಿಸಿದ್ದು, ಭಾಗವಹಿಸಲಿವೆ ಎಂದು ತಿಳಿಸಿದರು.
ವಿಧಾನಸೌಧ ಮುತ್ತಿಗೆ 10ಕ್ಕೆ ಮುಂದೂಡಿಕೆ
ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ, ಎಪಿಎಂಸಿ(ತಿದ್ದುಪಡಿ) ಕಾಯ್ದೆ ಮತ್ತು ಕಾರ್ಮಿಕ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಸೋಮವಾರ ರಾಜ್ಯ ರೈತ ಸಂಘದಿಂದ ನಡೆಸಲು ಉದ್ದೇಶಿಸಿದ್ದ ವಿಧಾನಸೌಧ ಮುತ್ತಿಗೆಯನ್ನು ಮುಂದೂಡಲಾಗಿದೆ. ಡಿ.8ರಂದು ಭಾರತ್ ಬಂದ್‌ಗೆ ರೈತ ಸಂಘಟನೆಗಳು ನಿರ್ಧರಿಸಿರುವುದರಿಂದ ರಾಜ್ಯ ರೈತ ಸಂಘಗಳು ಅದಕ್ಕೆ ಹೆಚ್ಚಿನ ಆದ್ಯತೆ ನೀಡಿವೆ. ಹೀಗಾಗಿ ಡಿ.7ರ ಬದಲು ಡಿ.10ರಂದು ಬೃಹತ್ ಸಂಖ್ಯೆಯಲ್ಲಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು. ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಶೀಘ್ರವೇ ಹಿಂಪಡೆಯುವಂತೆ ಒತ್ತಾಯಿಸಲಾಗುವದು ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ರೈತ, ದಲಿತ, ಕಾರ್ಮಿಕ ಐಕ್ಯ ಬೆಂಬಲ: ಸೋಮವಾರದಿಂದ ರೈತರ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿಯಿಂದ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ. ಡಿ.8ರಂದು ಭಾರತ್ ಬಂದ್ ಅನ್ನು ವಿಶಿಷ್ಟರೀತಿಯಲ್ಲಿ ಬೆಂಬಲಿಸುವ ಹೋರಾಟ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಉದ್ದಗಲಕ್ಕೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಕೇಂದ್ರ ಸರ್ಕಾರ ರೈತರ ಹೋರಾಟವನ್ನು ಹತ್ತಿಕ್ಕುವ, ಕೃಷಿ ಕ್ಷೇತ್ರವನ್ನು ನಾಶ ಮಾಡಿ ಒಕ್ಕಲೆಬ್ಬಿಸುವ ಕುತಂತ್ರ ಮಾಡಿದೆ. ರೈತರ ಹಿತ ಕಾಪಾಡಬೇಕಾದ ಪ್ರಧಾನಿ ನರೇಂದ್ರ ಮೋದಿ ಅವರು, ರೈತರಿಗೆ ಮಾರಕವಾದ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದಾರೆ. ಅದನ್ನು ವಿರೋಧಿಸಿ ದೇಶದ ರೈತರು ಸಿಡಿದೆದ್ದಿದ್ದು, ಹೋರಾಟ ತೀವ್ರಗೊಳಿಸಿದ್ದಾರೆ ಎಂದು ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.