Asianet Suvarna News Asianet Suvarna News

ಪಿಎಂ ಕಿಸಾನ್‌ ಹಣ ಸಿಗದೆ ಪೌತಿ ಖಾತೆದಾರರ ಪರದಾಟ

ಪತಿ ನಿಧನಾನಂತರ ಪತ್ನಿ ಅರ್ಜಿ ಸಲ್ಲಿಸಿದ್ದರೆ ಬರುತ್ತಿಲ್ಲ ಸಹಾಯಧನ, ತಾಂತ್ರಿಕ ಕಾರಣದಿಂದ ಅರ್ಜಿ ಸ್ವೀಕೃತವಾಗಿದ್ದರೂ ಪಾವತಿ ವಿಳಂಬ, ಕೆಲವೆಡೆ ಅರ್ಜಿ ಸಲ್ಲಿಸಲೂ ರೈತ ಸಂಪರ್ಕ ಕೇಂದ್ರಗಳಲ್ಲಿ ಲಾಗಿನ್‌ ಸಮಸ್ಯೆ. 

Farmers Faces Problems For Not Get PM Kisan Money in Karnataka grg
Author
First Published Apr 13, 2023, 12:26 PM IST

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು(ಏ.13):  ಮನೆಯ ಯಜಮಾನನ ನಿಧನಾನಂತರ ಜಮೀನಿನ ಪಹಣಿ (ಆರ್‌ಟಿಸಿ) ಪತ್ನಿಯ ಹೆಸರಿಗೆ ವರ್ಗಾವಣೆಯಾಗಿದ್ದರೆ (ಪೌತಿ ಖಾತೆ) ಇಂತಹ ವಾರಸುದಾರರು ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ (ಪಿಎಂಕೆಎಸ್‌ವೈ)ಗೆ ಅರ್ಜಿ ಸಲ್ಲಿಸಿ ಸ್ವೀಕೃತಿಯಾಗಿದ್ದರೂ ಪ್ರೋತ್ಸಾಹಧನ ಸಿಗದೆ ಪರದಾಡುವಂತಾಗಿದೆ. ಮತ್ತೆ ಕೆಲವೆಡೆ ಅರ್ಜಿ ಸಲ್ಲಿಸಲೂ ಆಗದ ಸ್ಥಿತಿ ಇದೆ.

ಯೋಜನೆಗೆ ಅರ್ಹನಾಗಿದ್ದ ರೈತ ಒಂದೊಮ್ಮೆ ನಿಧನನಾದರೆ ಅವನ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆಯಾಗುತ್ತಿದ್ದ ಪ್ರೋತ್ಸಾಹಧನವನ್ನು ನಿಲ್ಲಿಸಲಾಗುತ್ತದೆ. ಬಳಿಕ ಜಮೀನಿನ ಪಹಣಿ(ಆರ್‌ಟಿಸಿ) ಪೌತಿ ಖಾತೆಯಾಗಲಿದ್ದು, ಮೃತನ ಪತ್ನಿ, ಮಕ್ಕಳ ಹೆಸರಿಗೆ ಕೃಷಿ ಭೂಮಿ ಬರಲಿದೆ. ಹೀಗೆ ಪೌತಿ ಖಾತೆ ಪಡೆದವರು ಸೂಕ್ತ ದಾಖಲಾತಿಗಳೊಂದಿಗೆ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಕಿಸಾನ್‌ ಸಮ್ಮಾನ್‌ ಯೋಜನೆಗೆ ಅರ್ಜಿ ಸಲ್ಲಿಸಿ, ಅರ್ಜಿ ಸ್ವೀಕೃತವಾಗಿ ಮೂರು ತಿಂಗಳಾದರೂ ತಾಂತ್ರಿಕ ಕಾರಣದಿಂದಾಗಿ ಹಣ ಪಾವತಿಯಾಗುತ್ತಿಲ್ಲ.

ಪಿಎಂ ಕಿಸಾನ್ ಸಮ್ಮಾನ್ ನಿಧಿ 14ನೇ ಕಂತು ಯಾವಾಗ ಸಿಗುತ್ತೆ? ಈ ಯೋಜನೆ ಸೇರ್ಪಡೆ ಹೇಗೆ,ಅಗತ್ಯ ದಾಖಲೆಗಳು ಯಾವುವು?

ಅರ್ಜಿ ಸಲ್ಲಿಸಲೂ ಪರದಾಟ:

ಮತ್ತೆ ಕೆಲವೆಡೆ, ಕೆಲ ರೈತ ಸಂಪರ್ಕ ಕೇಂದ್ರಗಳಲ್ಲಿ ಪೌತಿ ಖಾತೆದಾರರು ದಾಖಲೆಗಳನ್ನು ಸಲ್ಲಿಸಿದ್ದರೂ ತಾಂತ್ರಿಕ ಕಾರಣದಿಂದಾಗಿ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಪಿಎಂ ಕಿಸಾನ್‌ ಪೋರ್ಟಲ್‌ನಲ್ಲಿ ಲಾಗಿನ್‌ ಆಗಲು ಸಾಧ್ಯವಾಗುತ್ತಿಲ್ಲ. ತಕ್ಷಣ ಈ ಸಮಸ್ಯೆ ಪರಿಹರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಏನೇನು ದಾಖಲೆ ಬೇಕು:

ಪತಿಯ ನಿಧನಾನಂತರ ಪತ್ನಿಯು ತನ್ನ ಹೆಸರಿಗೆ ಜಮೀನಿನ ಖಾತಾ ಬದಲಾವಣೆ ಮಾಡಿಸಿಕೊಳ್ಳಬೇಕು. ನಂತರ ಎಂಆರ್‌ (ಮ್ಯುಟೇಷನ್‌ ರಿಪೋರ್ಚ್‌) ಕಾಲಂನಲ್ಲಿ ಪೌತಿ ಎಂದು ನಮೂದಾಗಲಿದೆ. ಬಳಿಕ ಫ್ರೂಟ್ಸ್‌ (ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ರ್ಪೋಲ್‌ನಲ್ಲಿ ನೋಂದಣಿ ಮಾಡಿಸಿ ಎಫ್‌ಐಡಿ (ಫ್ರೂಟ್ಸ್‌ ಸಂಖ್ಯೆ) ಮಾಡಿಸಬೇಕು. ಎಫ್‌ಐಡಿ ನೋಂದಣಿಯ ನಂತರ ಮಾಹಿತಿಯು ಫ್ರೂಟ್ಸ್‌ ಪಿಎಂಕೆ ಪೋರ್ಟಲ್‌ಗೆ ರವಾನಿಸಲ್ಪಡುತ್ತದೆ. ಬಳಿಕ ಸಮೀಪದ ಕೃಷಿ ಇಲಾಖೆ ಕಚೇರಿಯನ್ನು ಸಂಪರ್ಕಿಸಬೇಕು.

ಪತಿಯ ಮರಣ ಪ್ರಮಾಣ ಪತ್ರ, ಪತಿಯ ಹೆಸರಿನಲ್ಲಿ ಜಮೀನು ಇದ್ದುದ್ದಕ್ಕೆ ಹಳೆಯ ಪಹಣಿ, ಪ್ರಸ್ತುತ ತನ್ನ ಹೆಸರಿನಲ್ಲಿರುವ ಜಮೀನಿನ ಪಹಣಿ, ವಂಶವೃಕ್ಷ, ಬ್ಯಾಂಕ್‌ ಪಾಸ್‌ ಬುಕ್‌, ಆಧಾರ್‌ ಕಾರ್ಡ್‌ ಮತ್ತಿತರ ದಾಖಲೆಗಳನ್ನು ಸಮೀಪದ ರೈತ ಸಂಪರ್ಕ ಕೇಂದ್ರ (ಆರ್‌ಎಸ್‌ಕೆ)ಕ್ಕೆ ಸಲ್ಲಿಸಿದರೆ ಅವರು ದಾಖಲೆಗಳನ್ನು ಪರಿಶೀಲಿಸಿ ಅಪ್‌ಲೋಡ್‌ ಮಾಡಲಿದ್ದಾರೆ. ಬಳಿಕ ದಾಖಲೆಗಳು ಅನುಮೋದನೆಯಾಗಿ ಪರಿಶೀಲನೆ ಮುಗಿದ ನಂತರ ಕಿಸಾನ್‌ ಸಮ್ಮಾನ್‌ ಹಣ ಪಾವತಿಯಾಗಲಿದೆ. ಪರಿಶೀಲನೆ ಬಹಳ ವಿಳಂಬವಾಗುತ್ತಿದೆ ಎಂಬ ದೂರು ರೈತರಿಂದ ವ್ಯಕ್ತವಾಗುತ್ತಿದೆ.

Chikkaballapura : ಜಿಲ್ಲೆಯಲ್ಲಿ 37 ಸಾವಿರ ರೈತರಿಗಿಲ್ಲ ಪಿಎಂ ಕಿಸಾನ್‌ ನಿಧಿ!

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಜಮೀನು ಹೊಂದಿರುವ ಪ್ರತಿ ರೈತನಿಗೂ ಕೇಂದ್ರ ಸರ್ಕಾರ ವಾರ್ಷಿಕವಾಗಿ ತಲಾ 6 ಸಾವಿರ ರು. ಮತ್ತು ರಾಜ್ಯ ಸರ್ಕಾರ 4 ಸಾವಿರ ರು. ಸೇರಿ ಒಟ್ಟಾರೆ 10 ಸಾವಿರ ರು. ಪ್ರೋತ್ಸಾಹಧನ ನೀಡಲಾಗುತ್ತದೆ. ರಾಜ್ಯದಲ್ಲಿ ಸುಮಾರು 47 ಲಕ್ಷಕ್ಕೂ ಅಧಿಕ ರೈತರು ಯೋಜನೆಯ ಫಲಾನುಭವಿಗಳಾಗಿದ್ದಾರೆ.

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯ ಪೋರ್ಟಲ್‌ ಅನ್ನು ಕೇಂದ್ರ ಸರ್ಕಾರ ನಿರ್ವಹಿಸುತ್ತಿದೆ. ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ಅನುಮೋದಿತ ಅರ್ಜಿಗಳ ವಿಲೇವಾರಿ ವಿಳಂಬ, ಲಾಗಿನ್‌ ಸಮಸ್ಯೆ ಉಂಟಾಗಿದ್ದು ಇದನ್ನು ಸರಿಪಡಿಸಲಾಗಿದೆ ಅಂತ ಕೃಷಿ ಇಲಾಖೆ ನಿರ್ದೇಶಕ ಜಿ.ಟಿ.ಪುತ್ರ ತಿಳಿಸಿದ್ದಾರೆ.

Follow Us:
Download App:
  • android
  • ios