ಬಂಗಾರದಂಥ ಮೆಕ್ಕೆಜೋಳ ಬೆಳೆ ಹೋಯ್ತು: ಕೇಂದ್ರ ಬರ ಅಧ್ಯಯನ ತಂಡದ ಎದುರು ರೈತರ ಕಣ್ಣೀರು
ಈ ವರ್ಷ ಮಳೆ ಕೈಕೊಟ್ಟಿದ್ದು, ಬಂಗಾರದಂಥ ಮೆಕ್ಕೆಜೋಳ ಬೆಳೆ ಹಾಳಾಗೈತಿ. ನಮ್ಮ ಹೊಟ್ಟೆ ಬಾಗಿಲು ಹಾಕಿಕೊಳ್ಳುವಂತಾಗೈತಿ. ಮಳೀ ಬಂದಿದ್ರ್, ನಮ್ಮ ಬದುಕು ಬಂಗಾರದ್ಹಂಗ ಇರತಿತ್ತು.

ಬೆಂಗಳೂರು (ಅ.08): "ಈ ವರ್ಷ ಮಳೆ ಕೈಕೊಟ್ಟಿದ್ದು, ಬಂಗಾರದಂಥ ಮೆಕ್ಕೆಜೋಳ ಬೆಳೆ ಹಾಳಾಗೈತಿ. ನಮ್ಮ ಹೊಟ್ಟೆ ಬಾಗಿಲು ಹಾಕಿಕೊಳ್ಳುವಂತಾಗೈತಿ. ಮಳೀ ಬಂದಿದ್ರ್, ನಮ್ಮ ಬದುಕು ಬಂಗಾರದ್ಹಂಗ ಇರತಿತ್ತು. ಈಗ ದಿನಾ ಆಕಾಶ ನೋಡುವಂತಾಗಿದೆ" ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನಂದಿಬಂಡಿ ಗ್ರಾಮದ ರೈತ ಮಹಿಳೆ ಮರಿಯವ್ವ ಮಳೆ ಇಲ್ಲದೆ ಬೆಳೆ ಕೈಗೊಡುತ್ತಿರುವ ಆತಂಕವನ್ನು ಬಿಚ್ಚಿಟ್ಟಿದ್ದು ಹೀಗೆ. ಶುಕ್ರವಾರವಷ್ಟೇ ರಾಜ್ಯ ಪ್ರವಾಸ ಆರಂಭಿಸಿದ್ದ ಕೇಂದ್ರದ ಬರ ಅಧ್ಯಯನ ತಂಡ ಎರನಡೇ ದಿನವಾದ ಶನಿವಾರವೂ ವಿಜಯನಗರ, ಚಿತ್ರದುರ್ಗ, ಧಾರವಾಡ, ಬಾಗಲಕೋಟೆ, ದಾವಣಗೆರೆ, ಬಳ್ಳಾರಿ ಹೀಗೆ ಮತ್ತೆ ಆರು ಜಿಲ್ಲೆಗಳಲ್ಲಿ ಬೆಳೆ ಹಾನಿ ಪರಿಶೀಲನೆ ನಡೆಸಿತು.
ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ಕುಡಿಯುವ ನೀರು ಮತ್ತು ಸ್ವಚ್ಛತಾ ಸಚಿವಾಲಯದ ಹೆಚ್ಚುವರಿ ಸಲಹೆಗಾರ ರಾಜೇಶ್ವರ ರಾವ್ ನೇತೃತ್ವದ ತಂಡ ಹೊಸಪೇಟೆಯ ನಂದಿಬಂಡಿ ಗ್ರಾಮದ ಮರಿಯವ್ವ ಜಮೀನಿಗೆ ಭೇಟಿ ನೀಡಿ ಮೆಕ್ಕೆಜೋಳ ಬೆಳೆ ಪರಿಶೀಲನೆ ನಡೆಸಿತು. ಇನ್ನು ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್, ಎಂ.ಎನ್.ಸಿ.ಎಫ್.ಸಿ ಉಪನಿರ್ದೇಶಕ ಕರಣ್ ಚೌಧರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪಕಾರ್ಯದರ್ಶಿ ಸಂಗೀತ್ ಕುಮಾರ್ ಅವರನ್ನೊಳಗೊಂಡ ತಂದ ದಾವಣಗೆರೆಯ ಜಗಳೂರು ತಾಲೂಕು ಹಾಗೂ ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ರೈತರ ಹೊಲಗಳಿಗೆ ತೆರಳಿ ಬೆಳೆ ಪರಿಶೀಲಿಸಿತು.
ಮಳೆ-ಬೆಳೆ ಇಲ್ಲ, ಪರಿಹಾರ ಕೊಡದೆ ಇದ್ದ ವಿಷವೇ ಗತಿ: ಕೇಂದ್ರ ಬರ ಅಧ್ಯಯನ ತಂಡದ ಎದುರು ಆತ್ಮಹತ್ಯೆಗೆ ಯತ್ನ
ಅದೇ ರೀತಿ ಬಾಗಲಕೋಟೆಯಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಕೇಂದ್ರ ಅಧ್ಯಯನ ತಂಡ ಕಬ್ಬು, ತೊಗರಿ, ಮೆಣಸು, ಈರುಳ್ಳಿ ಬೆಳೆ ಹಾನಿ ಪರಿಶೀಲಿಸಿತು. ಇದಕ್ಕೂ ಮೊದಲು ಈ ತಂಡ ಧಾರವಾಡಕ್ಕೆ ಭೇಟಿ ನೀಡಿ ಅಲ್ಲೂ ರೈತರ ಹೊಲಗಳಿಗೆ ತೆರಳಿ ಪರಿಶೀಲನೆ ನಡೆಸಿತು.
ಜಿಲ್ಲಾಧಿಕಾರಿಗಳ ನೇತ್ವದಲ್ಲಿ ಬರ ಸಮೀಕ್ಷೆ: ಲಕ್ಷ್ಮೇಶ್ವರ ತಾಲೂಕಿನಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನ ಮಳೆಗಳು ಕೈಕೊಟ್ಟಿದ್ದರಿಂದ ಬೆಳೆಗಳು ಒಣಗಿ ಹೋಗಿ ರೈತರು ಸಂಕಷ್ಟ ಅನುಭವಿಸುತ್ತಿರುವುದರಿಂದ ಬೆಳೆ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವ ಕಾರ್ಯ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು. ಜಿಲ್ಲಾಧಿಕರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ಕೃಷಿ ಇಲಾಖೆ ಸೇರಿ ಜಂಟಿಯಾಗಿ ಲಕ್ಷ್ಮೇಶ್ವರ ತಾಲೂಕಿನ ಗೋವನಾಳ, ಗುಲಗಂಜಿ ಕೊಪ್ಪ, ದೊಡ್ಡೂರ, ಸೂರಣಗಿ ಮತ್ತು ನೆಲೂಗಲ್ಲ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿ ಬರ ಸಮೀಕ್ಷೆ ಕಾರ್ಯ ಮಾಡಿದರು.
ಕರ್ನಾಟಕದಲ್ಲಿ ಹಸಿರು ಬರ, 4860 ಕೋಟಿ ಪರಿಹಾರಕ್ಕೆ ಮನವಿ: ಸಿಎಂ ಸಿದ್ದರಾಮಯ್ಯ
ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ರಾಜ್ಯದ 130ಕ್ಕೂ ಹೆಚ್ಚು ತಾಲೂಕಗಳಲ್ಲಿ ಮಳೆ ಕೊರತೆಯಿಂದ ರೈತರು ಬೆಳೆದ ಬೆಳಗಳು ನಾಶವಾಗಿವೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಬೆಳೆಗಳಾದ ಗೋವಿನ ಜೋಳ, ಹೆಸರು. ಶೇಂಗಾ ಬೆಳೆಗಳು ಸರಿಯಾದ ರೀತಿಯಲ್ಲಿ ಬೆಳೆಯದೆ ಹೋಗಿರುವುದು ನಮ್ಮ ಗಮನಕ್ಕೆ ಬಂದಿದೆ. ಹಲವು ರೈತರು ಸರಿಯಾಗಿ ಬೆಳೆಯದ ಗೋವಿನ ಜೋಳದ ಹೊಲಗಳನ್ನು ಹರಗಿದ್ದಾರೆ. ಇನ್ನೂ ಹಲವು ಬೆಳೆಗಳು ಸರಿಯಾದ ಪ್ರಮಾಣದಲ್ಲಿ ಬೆಳೆದಿಲ್ಲ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ ಮುಂಗಾರು ಮಳೆಗಳು ಕೈಕೊಟ್ಟಿದ್ದರಿಂದ ಆದ ಬೆಳೆ ಹಾನಿಯ ಪ್ರಾಮಾಣಿಕ ವರದಿಯನ್ನು ಸರ್ಕಾರ ಸಲ್ಲಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.