ಬೆಂಗಳೂರು (ಆ.21):  ರೈತರಿಗೆ ಸಮರ್ಪಕವಾಗಿ ಬೆಳೆ ಪರಿಹಾರ ತಲುಪಿಸುವ ಉದ್ದೇಶದಿಂದ ದೇಶದಲ್ಲಿ ಇದೇ ಮೊದಲ ಬಾರಿಗೆ ರೈತರಿಂದಲೇ ಕೃಷಿ ಬೆಳೆ ಸಮೀಕ್ಷೆ ಮಾಡುವ ಕಾರ್ಯ ಈಗಾಗಲೇ ಆರಂಭವಾಗಿದ್ದು, ಸೆ.24ರೊಳಗೆ ರೈತರು ತಾವು ಬೆಳೆದ ಬೆಳೆ ಮುಂದೆ ನಿಂತು ಮೊಬೈಲ್‌ನಲ್ಲಿ ಫೋಟೋ ತೆಗೆದು ರವಾನಿಸುವಂತೆ ಸರ್ಕಾರ ಮನವಿ ಮಾಡಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ಮನವಿ ಮಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಈಗಾಗಲೇ ರಾಜ್ಯದ ಐದಾರು ಲಕ್ಷ ರೈತರು ತಾವು ಬೆಳೆದ ಬೆಳೆಯ ಫೋಟೋಗಳನ್ನು ರವಾನಿಸಿದ್ದಾರೆ. ಉಳಿದವರು ಸೆ.24ರೊಳಗೆ ರವಾನಿಸಬೇಕು. ಗೂಗಲ್‌ ಪ್ಲೇಸ್ಟೋರ್‌ನಲ್ಲಿ farmers crop survey ಎಂಬ ಆ್ಯಪ್‌ ಲಭ್ಯವಿದೆ. ಅದನ್ನು ಡೌನ್‌ಲೋಡ್‌ ಮಾಡಿಕೊಂಡು, ಅದಕ್ಕೆ ಫೋಟೋ ಅಪ್ಲೋಡ್‌ ಮಾಡಬೇಕು ಎಂದು ಕೋರಿದರು.

ರೈತರಿಗೆ ಗುಡ್ ನ್ಯೂಸ್ : ಶೀಘ್ರ ರೈತರಿಗೆ ಸಿಗಲಿದೆ ಯೂರಿಯಾ...

ರೈತರು ತಮ್ಮ ಜಮೀನಿನ ಬೆಳೆಯ ಮುಂದೆ ನಿಂತು ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡು ಸರ್ಕಾರಕ್ಕೆ ಆಪ್‌ಲೋಡ್‌ ಮಾಡಬೇಕು. ಬೆಳೆ ಹಾನಿಯಾದರೆ ಸರ್ಕಾರದಿಂದ ಪರಿಹಾರ ಪಡೆಯಲು ಇದು ಸಹಕಾರಿಯಾಗಲಿದೆ. ಈಗಾಗಲೇ ನಿಗದಿಯಂತೆ ಆ.24ರೊಳಗೆ ಬೆಳೆ ಸಮೀಕ್ಷೆ ಮುಗಿಯಬೇಕಿತ್ತು. ಆದರೆ, ಸಚಿವ ಸಂಪುಟ ಸಭೆ ತಡವಾಗಿದ್ದರಿಂದ ಮತ್ತು ರೈತರಿಗೆ ಮಾಧ್ಯಮ ಮೂಲಕ ತಿಳಿಸುವುದು ತಡವಾಗಿರುವ ಕಾರಣ ಫೋಟೋ ಕಳುಹಿಸುವ ಅವಧಿಯನ್ನು ಸೆ.24ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದರು.

ಕಿಸಾನ್‌ ಸಮ್ಮಾನ ಪ್ರೋತ್ಸಾಹಧನ ಪಡೆಯಲು ಸಾಲ ಅಡ್ಡಿ: ಸಂಕಷ್ಟದಲ್ಲಿ ಅನ್ನದಾತ..

ಕೃಷಿ ಬೆಳೆ ಸಮೀಕ್ಷೆಗೆ ಸ್ಥಳೀಯವಾಗಿ ಒಬ್ಬರನ್ನು ನಿಯೋಜಿಸಿ ಮೊಬೈಲ್‌ ಮೂಲಕ ಆಪ್‌ಲೋಡ್‌ ಮಾಡುವ ಕ್ರಮ ಅನುಸರಿಸಲಾಗಿತ್ತು. ಆದರೆ, ಈ ವಿಧಾನವನ್ನು ಕೈಬಿಟ್ಟು, ಸಂಬಂಧಪಟ್ಟರೈತರೇ ಬೆಳೆ ಸಮೀಕ್ಷೆ ನಡೆಸುವ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ಈಗಾಗಲೇ ರೈತರೇ ಬೆಳೆ ಸಮೀಕ್ಷೆ ನಡೆಸುವ ಕಾರ್ಯ ಪ್ರಾರಂಭವಾಗಿದೆ. ಸುಮಾರು 5-6 ಲಕ್ಷ ಮಂದಿ ತಮ್ಮ ಜಮೀನಿನಲ್ಲಿ ಬೆಳೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ವಿವರಿಸಿದರು.