ಬೆಂಗಳೂರು : ತನ್ನ ಕಷ್ಟಕ್ಕೆ ಪರಿಹಾರ ಕೇಳಲು ಬಂದಿದ್ದ ರೈತನೊಬ್ಬ ಮುಖ್ಯಮಂತ್ರಿ ಸಿಗಲಿಲ್ಲ ಎಂಬ ಕಾರಣಕ್ಕೆ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸರ್ದಾರ್‌ ಅಲ್ಲಾದೀನ್‌ ಕಳವಂತ (65) ಆತ್ಮಹತ್ಯೆಗೆ ಯತ್ನಿಸಿದ ರೈತ. ಸದ್ಯ ಸರ್ದಾರ್‌ ಬೌರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಸರ್ದಾರ್‌ ವಿಜಯಪುರದಲ್ಲಿ ಜಮೀನು ಹೊಂದಿದ್ದು, ಬೆಳೆ ಬೆಳೆಯಲು ಲಕ್ಷಾಂತರ ರುಪಾಯಿ ಸಾಲ ಮಾಡಿಕೊಂಡಿದ್ದರು. ಜಮೀನಿನಲ್ಲಿ ಹಲವು ಬಾರಿ ಕೊಳವೆ ಬಾವಿ ಕೊರೆಸಿದ್ದರೂ ನೀರು ಸಿಕ್ಕಿರಲಿಲ್ಲ. ಹೀಗಾಗಿ ತನ್ನ ಮೂರೂವರೆ ಎಕರೆ ಜಮೀನು ಮಾರಾಟ ಮಾಡಿ ತುಸು ಕೈ ಸಾಲ ತೀರಿಸಿದ್ದರು. ಆದರೂ ಸಂಪೂರ್ಣವಾಗಿ ಸಾಲ ತೀರಿರಲಿಲ್ಲ. ಸಾಲಗಾರರ ಒತ್ತಡ ಹೆಚ್ಚಿದ್ದರಿಂದ ನೊಂದಿದ್ದ ರೈತ ತನ್ನ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಕಷ್ಟಕ್ಕೆ ಪರಿಹಾರ ಪಡೆಯಲು ಬೆಂಗಳೂರಿಗೆ ಬಂದಿದ್ದರು.

ಶನಿವಾರ ಬೆಳಗ್ಗೆ 8.30ರ ಸುಮಾರಿಗೆ ರೈತ ಸರ್ದಾರ್‌ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ವಿಧಾನಸೌಧಕ್ಕೆ ಬಂದಿದ್ದರು. ಶನಿವಾರ ಮುಖ್ಯಮಂತ್ರಿಗಳು ಮತ್ತು ಕ್ಷೇತ್ರದ ಶಾಸಕರು ವಿಧಾನಸೌಧದಲ್ಲಿ ಇರಲಿಲ್ಲ.

ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ರೈತನನ್ನು ವಿಧಾನಸೌಧ ಪಶ್ಚಿಮ ದ್ವಾರದಲ್ಲಿ ತಡೆದು ವಾಪಸ್‌ ಕಳುಹಿಸಿದ್ದರು. ಇದರಿಂದ ಹತಾಶೆಗೊಂಡ ರೈತ ಸರ್ದಾರ್‌ ವಿಧಾನಸೌಧ ಪಶ್ಚಿಮ ದ್ವಾರದಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ವಿಧಾನಸೌಧ ಭದ್ರತೆಗಿದ್ದ ಪೊಲೀಸರು ಈತ ನರಳಾಡುತ್ತಿರುವುದನ್ನು ಗಮನಿಸಿ ಹೊಯ್ಸಳದಲ್ಲಿ ಬೌರಿಂಗ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದರು. ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.