ಬೆಂಗಳೂರು(ಮೇ.29): ನೂತನವಾಗಿ ನಿರ್ಮಿಸಿರುವ ಮೇಲ್ಸೇತುವೆಗೆ ನಾಮಕರಣ ಮಾಡುವ ವಿಷಯ ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟ ಬೆನ್ನಲ್ಲೆ ಕೆಲವರು ಸೇತುವೆ ಮೇಲೆ ವೀರ ಸಾವರ್ಕರ್‌ ಹೆಸರು ಬರೆದಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ವಿವಿಧ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿ ಮೇಲ್ಸೇತುವೆಗೆ ಸಾವರ್ಕರ್‌ ಹೆಸರಿಡಲು ಒತ್ತಾಯಿಸಿವೆ.

ಉಪನಗರದ ಮದರ್‌ ಡೈರಿ ವೃತ್ತದಲ್ಲಿ 34ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮೇಲ್ಸೇತುವೆಯನ್ನು ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿ, ಸ್ವಾತಂತ್ರ್ಯ ಹೋರಾಟಗಾರ ವೀರ ಸೇನಾನಿ ಸಾವರ್ಕರ್‌ ಅವರ ಹೆಸರಿಡಲು ಬಿಬಿಎಂಪಿ ಯೋಜಿಸಿತ್ತು. ಆದರೆ ರಾಜಕೀಯ ಕೆಸರೆರಚಾಟದಿಂದ ಗುರುವಾರ ಫ್ಲೈಓವರ್‌ ಉದ್ಘಾಟನೆ ಸರ್ಕಾರ ಮುಂದೂಡಿತ್ತು.

ಗಾಂಧಿ-ನೆಹರು ಓಕೆ! ಸಾವರ್ಕರ್ ಯಾಕೆ? ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರನಾ? ಹೇಡಿನಾ?

ಇದರ ಬೆನ್ನಲ್ಲೆ ಗುರುವಾರ ಬೆಳಗ್ಗೆ ನೂತನ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದಾಗ ಮೇಲ್ಸೇತುವೆ ಪ್ರಾರಂಭದಲ್ಲಿ ಸ್ವಾತಂತ್ರ್ಯ ಹೊರಾಟಗಾರ ವೀರ ಸಾವರ್ಕರ್‌ ಮೇಲ್ಸೇತುವೆ ಎಂದು ಬರೆಯಲಾಗಿದೆ. ಇದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ರಸ್ತೆಯ ಎರಡೂ ಕಡೆ ಹಾಗೂ ಕೆಳಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಈ ನಡುವೆ ವಿವಿಧ ಸಂಘಟನೆಗಳು ಹಾಗೂ ಬಿಜೆಪಿ ಯಲಹಂಕ ಕ್ಷೇತ್ರದ ಕಾರ್ಯಕರ್ತರು ಬಿಬಿಎಂಪಿ ಅಧಿಕಾರಿಗಳಿಗೆ ಹಾಗೂ ತಾಲೂಕು ತಹಸೀಲ್ದಾರ್‌ ರಘುಮೂರ್ತಿ ಅವರಿಗೆ ಮನವಿ ಸಲ್ಲಿಸಿ ಸ್ವತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಹೆಸರನ್ನೇ ಇಡಬೇಕು. ದೇಶಭಕ್ತ ಯುವಕರಿಗೆ ಇವರ ಹೆಸರು ಸ್ಪೂರ್ತಿಯಾಗಬೇಕು ಎಂದು ಸರ್ಕಾರಕ್ಕೆ ಆಗ್ರಸಿದರು.

'ಯಲಹಂಕ ಫ್ಲೈ ಓವರ್‌ಗೆ ವೀರ ಸಾವರ್ಕರ್ ಹೆಸರೇ ಇಡುತ್ತೇವೆ; ಬದಲಾವಣೆ ಪ್ರಶ್ನೆಯೇ ಇಲ್ಲ'

ಮೇಲ್ಸೇತುವೆಗೆ ಸಾವರ್ಕರ್‌ ಹೆಸರಿಡುವ ವಿಚಾರದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ. ಲಾಕ್‌ಡೌನ್‌ ಮುಗಿದ ನಂತರ ದಿನಾಂಕ ನಿರ್ಧಾರ ಮಾಡಿ ಉದ್ಘಾಟಿಸಲಾಗುವುದು. ಸಾವರ್ಕರ್‌ ಅವರ ಜೀವನ ಚರಿತ್ರೆ ಓದಿದವರು ಯಾರೂ ಅವರ ಹೆಸರಿಡಲು ವಿರೋಧ ವ್ಯಕ್ತಪಡಿಸುವುದಿಲ್ಲ. ಕಾಂಗ್ರೆಸ್‌ನವರು ಮೂಲ ಮನಸ್ಥಿತಿಯನ್ನು ವಿಶಾಲ ಮಾಡಿಕೊಳ್ಳಬೇಕು. ಯಾರೋ ತಪ್ಪು ಮಾಡಿದ್ದನ್ನು ಮುಂದುವರಿಸಿಕೊಂಡು ಬರಬಾರದು. ವೀರ ಸಾರ್ವರ್ಕರ್‌ ಹೆಸರನ್ನೇ ಇಡಬೇಕು ಎಂಬುದು ಸ್ಥಳೀಯ ನಾಗರಿಕರ ಭಾವನೆಯಾಗಿದೆ. ಇದಕ್ಕೆ ಧಕ್ಕೆ ತರಬಾರದು ಎಂದು ಯಲಹಂಕ ಕ್ಷೇತ್ರದ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರು ಹೇಳಿದ್ದಾರೆ.