ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಖ್ಯಾತ ಸಾಹಿತಿಯಾಗಿರುವ ಎಚ್‌.ಎಸ್.ವೆಂಕಟೇಶ್ ‌ಮೂರ್ತಿ ಕೆಂಗೇರಿಯ‌ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಕನ್ನಡ ಸಾಹಿತ್ಯ ಲೋಕಕ್ಕೆ ಇದು ತುಂಬಲಾರದ ನಷ್ಟವಾಗಿದೆ.

ಬೆಂಗಳೂರು (ಮೇ.30): ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಖ್ಯಾತ ಸಾಹಿತಿಯಾಗಿರುವ ಎಚ್‌.ಎಸ್.ವೆಂಕಟೇಶ್ ‌ಮೂರ್ತಿ ಕೆಂಗೇರಿಯ‌ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಕನ್ನಡ ಸಾಹಿತ್ಯ ಲೋಕಕ್ಕೆ ಇದು ತುಂಬಲಾರದ ನಷ್ಟವಾಗಿದೆ. ಎಚ್.ಎಸ್. ವೆಂಕಟೇಶಮೂರ್ತಿ (ಎಚ್ಎಸ್‌ವಿ ) ಕನ್ನಡ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಮತ್ತು ಪ್ರಾಧ್ಯಾಪಕರಾಗಿ ದುಡಿದಿದ್ದಾರೆ. ಅವರು 1944ರ ಜೂನ್ 23ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ಜನಿಸಿದರು. ಎಚ್ಎಸ್‌ವಿ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಮ್.ಎ ಪದವಿ ಪಡೆದಿದ್ದಾರೆ.

ಅವರು ಸುಮಾರು 30 ವರ್ಷಗಳ ಕಾಲ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. "ಕನ್ನಡದಲ್ಲಿ ಕಥನ ಕವನಗಳು" ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದಿದ್ದಾರೆ. ಅಲ್ಲದೇ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇನ್ನು ಎಚ್‌ಎಸ್‌ವಿ ಅವರು ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ,ವಿಮರ್ಶೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ನಿವೃತ್ತಿಯ ನಂತರ ಎಚ್‌ಎಸ್‌ವಿ ಬೆಂಗಳೂರಿನಲ್ಲಿ ವಾಸವಾಗಿದ್ದರು.

ಮಕ್ಕಳಿಗಾಗಿ ಕವಿತೆ, ನಾಟಕ, ಕಥೆಗಳನ್ನೂ ಬರೆದಿದ್ದಾರೆ. ಇವರು ಅನುವಾದಿಸಿದ ಕಾಳಿದಾಸನ ‘ಋತುಸಂಹಾರ‘ ಕಾವ್ಯಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರವನ್ನು ಪಡೆದಿದೆ ಕ್ರಿಯಾಪರ್ವ‘, ‘ಎಷ್ಟೊಂದು ಮುಗಿಲು‘, ‘ನದೀತೀರದಲ್ಲಿ‘, ‘ಉತ್ತರಾಯಣ‘ ಮೊದಲಾದವು ಇವರ ಮುಖ್ಯ ಕಾವ್ಯಕೃತಿಗಳು. ‘ಅಗ್ನಿವರ್ಣ’, ‘ಚಿತ್ರಪಟ’, ‘ಉರಿಯ ಉಯ್ಯಾಲೆ‘, ‘ಮಂಥರೆ‘ ಮೊದಲಾದುವು ಇವರ ಮುಖ್ಯ ನಾಟಕಗಳು. ‘ಈ ಮುಖೇನ‘ ಇವರ ವೈಚಾರಿಕ ಪ್ರಬಂಧಗಳ ಸಂಪುಟ. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ, ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ – ಇವು ಎಚ್‌ಎಸ್‌ವಿ ಅವರು ಪಡೆದ ಕೆಲವು ಮುಖ್ಯ ಗೌರವ ಪುರಸ್ಕಾರಗಳು.

ಎಚ್. ಎಸ್. ವೆಂಕಟೇಶ ಮೂರ್ತಿ ಮುಖ್ಯ ಕೃತಿಗಳು
ಕವನ ಸಂಕಲನಗಳು
ಸಿಂದಬಾದನ ಆತ್ಮಕಥೆ
ಕ್ರಿಯಾಪರ್ವ
ಒಣಮರದ ಗಿಳಿಗಳು
ಎಷ್ಟೊಂದು ಮುಗಿಲು
ನದೀತೀರದಲ್ಲಿ
ಉತ್ತರಾಯಣ ಮತ್ತು…

ನಾಟಕಗಳು
ಅಗ್ನಿವರ್ಣ
ಚಿತ್ರಪಟ
ಉರಿಯ ಉಯ್ಯಾಲೆ
ಮಂಥರೆ
ಕಂಸಾಯಣ

ಮಕ್ಕಳ ಕೃತಿಗಳು
ಹಕ್ಕಿಸಾಲು
ಅಳಿಲು ರಾಮಾಯಣ
ಅಜ್ಜೀ ಕಥೆ ಹೇಳು
ಚಿನ್ನಾರಿ ಮುತ್ತ

ಜೀವನ ಪ್ರೀತಿಯ ಕವಿಗೆ ಭಾವಪೂರ್ಣ ವಿದಾಯ
ಕಾವ್ಯ-ಕವಿತೆಗಳನ್ನು ಕವಿ ಏಕೆ ರಚಿಸುತ್ತಾರೆ ? ಎಂಬ ಪ್ರಶ್ನೆಗೆ ಮೈಸೂರು ಮಲ್ಲಿಗೆಯ ಕವಿ ನರಸಿಂಹ ಸ್ವಾಮಿಯವರ ಉತ್ತರ ಸಾರ್ವಕಾಲಿಕ . ಕಥೆ-ಕವಿತೆಗಳನು ಬರೆಯುವುದು ಕ್ರಾಂತಿ ಮಾಡುವ ಉದ್ದೇಶದಿಂದಲ್ಲ ಆದರೆ ಕಂಬನಿ ಒರೆಸುವ ಉದ್ದೇಶದಿಂದ …. ಆಹಾ ! ನೋವು ತಡೆಯಲು ಆಗದಿದ್ದರೂ ನೋವು ಸಹಿಸುವ ಸಾಂತ್ವನ ಒಳ್ಳೆಯ ಸಾಹಿತ್ಯಕ್ಕೆ ಸರ್ವಥಾ ಇದೆ. 70-80ರ ದಶಕ ಕನ್ನಡ ನಾಡಿನ ಸುವರ್ಣ ಯುಗ . ಕವಿಯ ಕವಿತೆಗಳು ಮನೆ ಮನೆಗೆ ತಲುಪಿದ ಸಮಯವದು . ಕುವೆಂಪು , ಬೇಂದ್ರೆ , ಅಡಿಗ, ನರಸಿಂಹ ಸ್ವಾಮಿ, ಶಿವರುದ್ರಪ್ಪ, ಪುತಿನ , ಲಕ್ಷ್ಮೀ ನಾರಾಯಣ ಭಟ್ಟ, ನಿಸ್ಸಾರರ ಕಲ್ಪನೆಯ ಸಾಲುಗಳು ಹಾಡಾಗಿ ಕನ್ನಡಿಗರ ಎದೆಯ ಬಡಿದ ಕಾಲಮಾನ!!!

ಕವಿಯ ಭಾವನೆಗಳು ಹಾಡಾಗಿ ಕೇಳುಗನ ಎದೆಯಲ್ಲಿ ಗುನುಗಿ ನಾಲಿಗೆ ಮೇಲೆ ನಲಿದರೆ ಕವಿ -ಕೇಳಗನಿಗದು ಧನ್ಯತೆಯ ಪರಮಾನಂದ . ಬೇರೆಲ್ಲೂ ಅಷ್ಟಾಗಿ ಕಾಣಸಿಗದ ಸುಗಮ ಸಂಗೀತ ಪರಂಪರೆ ಕನ್ನಡ ನಾಡಿನಲ್ಲಿ ಬೆಳೆದು ಜನಪ್ರಿಯವಾದ ಪರಿ ಅಚ್ಚರಿ ಎನಿಸುವಷ್ಟು ದಟ್ಟ ! ಆದೇ ಆ ಸುವರ್ಣ ಯುಗವನ್ನು ಇಂದಿಗೂ ಬೆಸೆಯುವ ಕೊಂಡಿಯಾಗಿದ್ದವರು ನಮ್ಮ ಪ್ರೀತಿಯ ಕವಿ ಡಾ. ಎಚ್ .ಎಸ್. ವೆಂಕಟೇಶ ಮೂರ್ತಿ ( HSV ) … ಮನಕೆ ಎಟುಕದೆ ಹೋದ ಅದೆಷ್ಟೋ ಸಾಹಿತ್ಯದ ರಾಶಿಗಳಲಿ ಪ್ರೀತಿಯಿಂದ ಅಪ್ಪಿ ಎತ್ತಿಹಿಡಿವ ಸಾಹಿತ್ಯದ ಸಾಲಿನ ದೀಪ ಹಚ್ಚಿದವರು HSV .

“ಸಾವಿರ ದಳ ಕಮಲಿನಿ ಓ ಭಾರತಿ “ ಈ ಸಾಲುಗಳು ಎದೆಯಲ್ಲಿ ದೇಶಭಕ್ತಿಯ ಕಿಚ್ಚು ಹತ್ತಿಸುವುದಿಲ್ಲವೇ ? “ಇರಬೇಕು ಇರುವಂತೆ …. ತೊರೆದು ಸಾವಿರ ಚಿಂತೆ … ಮಳೆ ಸುರಿಸಿ ಹಗುರಾದ ಮುಗಿಲಿನಂತೆ” !!! ಸಾಲು ಕೇಳಿದಾಕ್ಷಣ ಮನಸ್ಸು ಹಗುರವಾಗುವುದಿಲ್ಲವೆ ?!!! “ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ …. ಅರಿತೆವೇನು ನಾವು ನಮ್ಮ ಅಂತರಾಳವ?!!” ಎಂಬ ಸಾಲು ಕೇಳಿದಾಗ ಆಂತರ್ಯದ ಪೊಳ್ಳುತನಕ್ಕೊಂದು ಪ್ರಶ್ನೆ ಕಾಡುವುದಿಲ್ಲವೇ? ಒಬ್ಬ ಸೃಜನ ಶೀಲ ಕವಿ ನೋವಿನ ಜಾಡನ್ನು ಅರಸುತ್ತಾ ಹೋದರೆ ಈ ತರಹದ ಮನೋಜ್ಞ ಸಾಲುಗಳು ಹುಟ್ಟುತ್ತಲೇ ಇರುತ್ತದೆ HSV ಇದಕ್ಕೆ ಜೀವಂತ ನಿದರ್ಶನ !!!

ಕನ್ನಡ ಕಾವ್ಯ ಪರಂಪರೆಯಲ್ಲಿ ಕೃಷ್ಣ ಭಾವದಲ್ಲಿ ಮತ್ತೆ ಮತ್ತೆ ಮುಳುಗಿ ತೇಲುತ್ತಿರುವ ಕವಿ ಎಂದರೆ ನಿಶ್ಶಂಸಯವಾಗಿ ಅದು HSV . ಕೃಷ್ಣನನ್ನು ದೇವನಾಗಿ ನೋಡದೆ ಪ್ರೀತಿಯ ಸಖನಾಗಿ, ವಿರಹದಿ ಕಾಡುವ ಪ್ರಿಯತಮನಾಗಿ, ದಾರಿ ತೋರಿದ ಗೆಳೆಯನಾಗಿ, ಬೆನ್ನೆಗೆ ನಿಂತ ಮಿತ್ರನಾಗಿ HSV ಭಾವಿಸಿ ತಮ್ಮ ಕವನಗಳಲ್ಲಿ ಕೃಷ್ಣನನ್ನು ಕಟ್ಟಿಹಾಕಿದ ರೀತಿ ಬಲು ಅನನ್ಯ. “ಅಮ್ಮ ನಾನು ದೇವರಾಣೆ”, “ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು” , “ಪ್ರೀತಿ ಕೊಟ್ಟ ರಾಧೆಗೆ ಮಾತು ಕೊಟ್ಟ ಮಾಧವ“ , “ಲೋಕದ ಕಣ್ಣಿಗೆ ರಾಧೆಯು ಕೂಡ” “ಮಧುರೆಗೆ ಹೋದನು ಮಾಧವ” ಹೀಗೆ ಹತ್ತು ಹಲವು ಕೃಷ್ಣನ ಕುರಿತಾದ ಹಾಡುಗಳನ್ನು ಭಾವಗೀತೆಯನ್ನು ಪ್ರೀತಿಸುವ ಕನ್ನಡಿಗರಿಗೆ ಕೊರತೆ ಇದೆಯೇ ?!!

ವೆಂಕಟೇಶ ಮೂರ್ತಿಯವರು ತಲೆ ಓಡಿಸಿ ಸಾಹಿತ್ಯ ಬರೆದವರಲ್ಲ ಹೃದಯದ ಬೆಚ್ಚನೆಯ ಜೀವನ ಪ್ರೀತಿಯಲ್ಲಿ ಕವಿಯಾದರು ! ಹಾಗಾಗಿ ಅವರ ಕವಿತೆಗಳು ಬರಿಯ ಪದಪುಂಜಗಳಲ್ಲ ಅವು ಸಾಂತ್ವನದ ಸೆಲೆಗಳು ! ಇಂದು HSVಯವರು ಧೀರ್ಘಕಾಲದ ಅನಾರೋಗ್ಯದ ನರಳಾಟಕ್ಕೆ ಮುಕ್ತಾಯ ಬರೆದಿದ್ದಾರೆ . ಎಂಭತ್ತು ದಾಟಿದ ವ್ಯಕ್ತಿ ಮನಸ್ಸಿನಿಂದ ಮಾಗುವುದು ಒಬ್ಬ ಸೃಜನಶೀಲ ವ್ಯಕ್ತಿಯ ಸಹಜ ಗುಣ . ಅಂದು ಕೃಷ್ಣ ರಾಧೆಯ ಸರಸದ ಕಚಗುಳಿಯ ಕವಿತೆಯಿಂದ ಬುದ್ಧಚರಣದಂತ ವೈರಾಗ್ಯಮೂರ್ತಿಯ ಮಹಾಕಾವ್ಯ ಬರೆದು ನಿರಂತರ ಜೀವನ ಪ್ರೀತಿ ಮೆರೆದಿದ್ದಾರೆ.

ಅವರದೇ ಜನಪ್ರಿಯ ಸಾಲುಗಳು ಈಗ ನೆನಪಾಗುತ್ತಿದೆ “ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ…. ಬೇವಾಗಿವ ಸವಿಗಾನದ ಹಕ್ಕಿ ಹಾಡಿ ಹಾಡಿ ಮುಕ್ತ … ಹೌದು , ಒಬ್ಬ ಸಹೃದಯ ಕವಿ ಜೀವನ ಪ್ರೀತಿಯ ಸಾಲುಗಳನ್ನು ಸೃಜಿಸಿ ಮತ್ತೆ ಮತ್ತೆ ಮುಕ್ತನಾಗುತ್ತಾನೆ ಎಂದು ನಾನು ಬಲವಾಗಿ ನಂಬುತ್ತೇನೆ. HSV ಆ ಹಳೆಯ ತಲೆಮಾರಿನ ಗೇಯ ಪದ್ಯಕಬ್ಬಿಗರ ಪರಂಪರೆಯ ಕೊನೆಯ ಕವಿ … ಎಷ್ಟೋ ಬಾರಿ ಅವರ ಕವಿತೆ ಓದಿದಾಗ ಕುವೆಂಪು , ಅಡಿಗ, ಬೇಂದ್ರೆ , ಶಿವರುದ್ರಪ್ಪ ನರಸಿಂಹಸ್ವಾಮಿಯಂತವರು ನೆನಪಾಗುತ್ತಾರೆ ….. HSV ಬಿಟ್ಟುಹೋದ ಭಾವಗೀತೆಗಳ ಪ್ರಪಂಚವಷ್ಟೇ ನಮ್ಮ ಪಾಲಿಗೆ ಉಳಿದಿದೆ .

ನೆಚ್ಚಿನ ನಲ್ಮೆಯ ಕವಿಗೆ ಆತ್ಮೀಯ ಬೀಳ್ಕೊಡಿಗೆ
-ವಿನಯ್ ಶಿವಮೊಗ್ಗ