ಕೂಡಲಸಂಗಮ ಪಂಚಮಸಾಲಿ ಪೀಠದ ಮಾಜಿ ಪೀಠಾಧಿಕಾರಿ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬೆಂಗಳೂರಿನ ಮಹಿಳೆಯೊಬ್ಬಳು ತಮಗೆ 3 ಕೋಟಿ ರೂ.ಗೆ ಬೇಡಿಕೆ ಇಟ್ಟು, ಹಣ ನೀಡದಿದ್ದಕ್ಕೆ ಹಲ್ಲೆ ನಡೆಸಿದ್ದಾಳೆಂದು ಆರೋಪಿಸಿದ್ದಾರೆ.
ವಿಜಯಪುರ (ಏ.8): ಬೆಂಗಳೂರು ಮೂಲದ ಮಹಿಳೆಯೊಬ್ಬಳು ತಮಗೆ 3 ಕೋಟಿ ರು.ಗೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದಕ್ಕೆ ಫೆಬ್ರವರಿ 11ರಂದು ವಿಜಯಪುರ ತಾಲೂಕಿನ ಕಗ್ಗೋಡ ಬಳಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಮಾಜಿ ಪೀಠಾಧಿಕಾರಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರೋಪಿಸಿದ್ದು, ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಏ.4ರಂದು ದೂರು ದಾಖಲಿಸಿದ್ದಾರೆ.
ಪಂಚಮಸಾಲಿ ಹೋರಾಟಕ್ಕೆ ಸಾಥ್ ನೀಡುತ್ತೇನೆಂದು ಪರಿಚಯ:
ಬೆಂಗಳೂರು ಮೂಲದ ಮಹಿಳೆ, ಪೃಥ್ವಿಗೌಡ, ಯಶವಂತ ಹಾಗೂ ಎಂ.ಡಿ.ವೀರೇಶ ಎಂಬುವವರ ವಿರುದ್ಧ ಸ್ವಾಮೀಜಿ ದೂರು ನೀಡಿದ್ದಾರೆ. ‘2-3 ವರ್ಷಗಳ ಹಿಂದೆ ಮಹಿಳೆ ಬೆಂಗಳೂರಿನಲ್ಲಿ ತನ್ನ ಸಹೋದರನೊಂದಿಗೆ ಭೇಟಿಯಾಗಿದ್ದಳು. ತಾನು ಲಿಂಗಾಯತ ಸಮಾಜದವಳು, ಫೌಂಡೇಶನ್ ವೊಂದರ ಮುಖ್ಯಸ್ಥೆ ಎಂದು ಪರಿಚಯ ಮಾಡಿಕೊಂಡಿದ್ದಳು. ಬಡ ಹಾಗೂ ಅನಾಥ ಮಕ್ಕಳನ್ನು ಸಾಕುತ್ತೇನೆ. ಪಂಚಮಸಾಲಿ ಹೋರಾಟಕ್ಕೂ ಸಾಥ್ ನೀಡುತ್ತೇನೆ ಎಂದು ಹೇಳಿದ್ದಳು.
ಪೌಂಡೇಶನ್‌ಗೆ ಹಣ ನೀಡುವಂತೆ ಒತ್ತಾಯ
ನಂತರ, ಫೌಂಡೇಶನ್ ಗೆ ಹಣ ನೀಡುವಂತೆ ಒತ್ತಾಯಿಸಿದ್ದಳು. ಯಾರಾದರೂ ದಾನಿಗಳಿದ್ದರೆ ಸಹಾಯ ಮಾಡಿಸುವುದಾಗಿ ಆಕೆಗೆ ಭರವಸೆ ನೀಡಿದ್ದೆ. ನಂತರ, ಆಕೆ ಹಣಕ್ಕಾಗಿ ನನ್ನನ್ನು ಪೀಡಿಸಲು ಆರಂಭಿಸಿದಳು. ಹಣ ನೀಡದ ಕಾರಣ, ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ, ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ‘ ಎಂದು ಸ್ವಾಮೀಜಿ ದೂರಿನಲ್ಲಿ ತಿಳಿಸಿದ್ದಾರೆ.
‘ಫೆಬ್ರವರಿ 11ರಂದು ನಾನು ಕಗ್ಗೋಡದಿಂದ ಬರುವಾಗ ನನ್ನ ವಾಹನ ಅಡ್ಡಗಟ್ಟಿ, ಬೆದರಿಸಿ, ಹಣಕ್ಕಾಗಿ ಬೇಡಿಕೆ ಇಟ್ಟರು. ಹಣ ನೀಡದ ಕಾರಣ ನನ್ನ ಹಲ್ಲೆ ನಡೆಸಿದ್ದಾರೆ. ನನ್ನ ಕಾರಿಗೂ ಹಾನಿ ಮಾಡಿದ್ದಾರೆ. ಈ ವೇಳೆ, ನನ್ನ ಬೆಂಗಾವಲು ಸಿಬ್ಬಂದಿ ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ಬಳಿಕ, ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಿಸಿದರು. ಬಳಿಕ, ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಇಂತಹ ಸುದ್ದಿ ಪ್ರಸಾರಕ್ಕೆ ನಾನು ತಡೆಯಾಜ್ಞೆ ತಂದರೂ, ಖಾಸಗಿ ವಾಹಿನಿಯಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಿಸಿದ್ದಾಳೆ.
ಬಳಿಕ, ನನ್ನ ಶಿಷ್ಯ ರಾಜಕುಮಾರ ಸಿ.ಎಂ.ಎಂಬುವರಿಗೆ ಕರೆ ಮಾಡಿ, ₹3 ಕೋಟಿಗೆ ಬೇಡಿಕೆಯಿಟ್ಟಿದ್ದಾಳೆ. ಹಣ ನೀಡದಿದ್ದರೆ ವಿಡಿಯೋ ಬಿಡುಗಡೆ ಮಾಡಿ, ನನ್ನ ವಿರುದ್ಧ ಅಪಪ್ರಚಾರ ನಡೆಸುವುದಾಗಿ, ಅತ್ಯಾ೧ಚಾರದ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ. ಪಂಚಮಸಾಲಿ ಹೋರಾಟ ಹತ್ತಿಕ್ಕಲು, ನನ್ನ ತೇಜೋವಧೆ ಮಾಡಲು ಆಕೆ ಇಂತಹ ಕೆಲಸ ಮಾಡುತ್ತಿದ್ದಾಳೆ. ಹೀಗಾಗಿ, ಆಕೆ ಹಾಗೂ ಆಕೆಯ ಈ ಕೃತ್ಯಕ್ಕೆ ಸಹಕರಿಸುತ್ತಿರುವ ಮೂವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ‘ ಎಂದು ಸ್ವಾಮೀಜಿ ದೂರಿನಲ್ಲಿ ಆರೋಪಿಸಿದ್ದಾರೆ.


