ಏಪ್ರಿಲ್ 5, 9ಕ್ಕೆ ಗ್ರಾಪಂ ಚುನಾವಣೆ: ಇದು #FakeNews
ರಾಜ್ಯದ ಕೆಲವು ಜಿಲ್ಲೆಗಳ ಗ್ರಾಮ ಪಂಚಾಯತಿಗಳಿಗೆ ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿದೆ ಎಂಬ ಕರ್ನಾಟಕ ರಾಜ್ಯಪತ್ರವೊಂದು ಎಲ್ಲೆಡೆ ಹರಿದಾಡುತ್ತಿದ್ದು, ಈ ಬಗ್ಗೆ ಕನ್ನಡದ ಕೆಲವು ಪ್ರತಿಷ್ಠಿತ ಮಾಧ್ಯಮಗಳೂ ಸುದ್ದಿ ಪ್ರಕಟಿಸಿವೆ. ಇದು ನಿಜವೇ?
ಬೆಂಗಳೂರು (ಜ.11): ರಾಜ್ಯದ ಕೆಲವು ಜಿಲ್ಲೆಗಳ ಗ್ರಾಮ ಪಂಚಾಯತಿಗಳಿಗೆ ಏಪ್ರಿಲ್ 5 ಮತ್ತು 9ಕ್ಕೆ ಚುನಾವಣೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯಪತ್ರ ಪ್ರಕಟಿಸಿದ ಪ್ರಕಟಣೆ ಎಲ್ಲೆಡೆ ಹರಿದಾಡುತ್ತಿದ್ದು, ಈ ಸುದ್ದಿಯನ್ನು ರಾಜ್ಯದ ಪ್ರತಿಷ್ಠಿತ ಮಾಧ್ಯಮಗಳೂ ಪ್ರಕಟಿಸಿವೆ. ಆದರೆ, ಇದೊಂದು ಫೇಕ್ ರಾಜ್ಯಪತ್ರವೆಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಸುಳ್ಳು ಸುದ್ದಿ ಇರುವ ಕರ್ನಾಟಕ ರಾಜ್ಯಪತ್ರ ಎಲ್ಲೆಡೆ ಹರಿದಾಡುತ್ತಿರುವ ಬಗ್ಗೆ ಸುವರ್ಣ ನ್ಯೂಸ್.ಕಾಮ್ ವೈರಲ್ ಚೆಕ್ ಮಾಡಿದೆ.
"
ಅಕ್ಟೋಬರ್ 21, 2019ರಂದು ಪ್ರಕಟಿಸಿದೆ ಎನ್ನಲಾದ ಕರ್ನಾಟಕ ರಾಜ್ಯಪತ್ರ ಎಲ್ಲೆಡೆ ಹರಿದಾಡುತ್ತಿದ್ದು, ಇದನ್ನು ತಿರುಚಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ರಾಜ್ಯದ ಕೆಲವು ಗ್ರಾಮ ಪಂಚಾಯತಿಗಳಿಗೆ ಮೇ ಹಾಗೂ ಜೂನ್ ನಡುವೆ ಚುನಾವಣೆ ನಡೆಯಬೇಕಾಗಿದ್ದು, ಆದರೆ, ಆಯೋಗ ಇನ್ನೂ ಯಾವುದೇ ದಿನಾಂಕ ಪ್ರಕಟಿಸಿಲ್ಲ ಎನ್ನುವುದನ್ನೂ ಆಯೋಗ ಸ್ಪಷ್ಟಪಡಿಸಿದೆ.
ಸುದ್ದಿಯನ್ನು ಫಾರ್ವರ್ಡ್ ಮಾಡೋ ಮುನ್ನ ಇಲ್ಲಿ ಒಮ್ಮೆ ಕ್ಲಿಕ್ಕಿಸಿ
ಏನಿದೆ ಹರಿದಾಡುತ್ತಿರುವ ರಾಜ್ಯಪತ್ರದಲ್ಲಿ?
2020ನೇ ಸಾಲಿನಲ್ಲಿ ಗ್ರಾಪಂ ಚುನಾವಣೆಯನ್ನು ಏಪ್ರಿಲ್ 5 ಮತ್ತು ಏ.9 ಕ್ಕೆ ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಚುನಾವಣಾ ಆಯೋಗ ನಡೆಸಲಿದೆ. ಮೊದಲ ಹಂತದಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಮೈಸೂರು, ಮಂಡ್ಯ, ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ನಡೆಸಲಿದ್ದು ಎರಡನೇ ಹಂತದ ಚುನಾವಣೆಯನ್ನು ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದಲ್ಲಿ ಆಯೋಜಿಸಲಿದೆ. ಈ ಬಾರಿಯೂ ಗ್ರಾಪಂ ಚುನಾವಣೆಗೆ ವಿದ್ಯುನ್ಮಾನ ಮತ ಯಂತ್ರಗಳನ್ನು ಬಳಸಲಾಗುತ್ತದೆ. ಬೆಳಗ್ಗೆ 6 ರಿಂದ ಸಂಜೆ 6ರವರೆಗೂ ಚುನಾವಣಾ ಮತಗಟ್ಟೆಗಳು ತೆರೆದಿರುತ್ತದೆ, ಎಂದಿದೆ. ಜೊತೆಗೆ ಅಭ್ಯರ್ಥಿಗಳ ನಡವಳಿಯ ಅಧಿನಿಯಮವನ್ನೂ ಹರಿದಾಡುತ್ತಿರುವ ಫೇಕ್ ರಾಜ್ಯಪತ್ರದಲ್ಲಿ ಸೂಚಿಸಲಾಗಿದೆ.
ಆದರೆ, ಸಾಮಾನ್ಯವಾಗಿ ಚುನಾವಣೆಗೆ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ನಡೆಯುತ್ತದೆ. ಭಾರತದ ಈಶಾನ್ಯ ಭಾಗದಲ್ಲಿ ಹೊರತು ಪಡಿಸಿದರೆ, ಬೇರೆಡೆ ಮತದಾನದ ಪ್ರಕ್ರಿಯೆ ಸಂಜೆ 6ರೊಳಗೆ ಮುಗಿಯುತ್ತದೆ. ಆದರೆ, ಈ ರಾಜ್ಯಪತ್ರದಲ್ಲಿ ಚುನಾವಣಾ ಪ್ರಕ್ರಿಯೆ ಬೆಳಗ್ಗೆ 6ಕ್ಕೇ ಆರಂಭವಾಗುತ್ತದೆ ಎನ್ನಲಾಗಿದೆ.
#Fack Check: ರಾಜಕಾರಣಿಗಳು ಫೋಟೋ ಶೇರ್ ಮಾಡಿಕೊಂಡರೆ ಜೈಲಾಗುತ್ತಾ?
ಯಾವುದೋ ರಾಜ್ಯಪತ್ರವನ್ನು ತಿರುಚಿ, ಹರಿಯಬಿಟ್ಟಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಆಂತರಿಕ ತನಿಖೆ ನಡೆಸಲಾಗುತ್ತಿದೆ, ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.