ಬೆಂಗಳೂರಿನಲ್ಲಿ ಬ್ರಾಯ್ಲರ್‌ ಕೋಳಿಯಲ್ಲಿ ಮಾರಕ ಕೊರೋನಾವೈರಸ್‌ ಪತ್ತೆಯಾಗಿದೆ ಎಂಬ ಸಂದೇಶ ಫೇಸ್‌ಬುಕ್‌ನಲ್ಲಿ ಮೂರ್ನಾಲ್ಕು ದಿನಗಳಿಂದ ವೈರಲ್‌ ಆಗಿದೆ. ರೋಗಪೀಡಿತ ಕೋಳಿಯ ಫೋಟೋದ ಜೊತೆಗೆ ಈ ಸಂದೇಶವನ್ನು ಹರಿಬಿಡಲಾಗಿದೆ.

Fact check: ಕೊರೋನಾದಿಂದ ಮುಕ್ತಿ ಕೋರಿ ಮಸೀದಿಗೆ ಮೊರೆ ಹೋದ ಕ್ಸಿ!

ಇದನ್ನು ನೂರಾರು ಜನರು ಶೇರ್‌ ಮಾಡುತ್ತಿದ್ದು, ಚೀನಾದಲ್ಲಿ ಸಾವಿರಾರು ಜನರನ್ನು ಬಲಿ ಪಡೆದ ರೋಗ ಬೆಂಗಳೂರಿನಲ್ಲಿ ಕೋಳಿಯ ಮೂಲಕ ಹರಡತೊಡಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

 

ಈ ಕುರಿತು ದಿ ಲಾಜಿಕಲ್‌ ಇಂಡಿಯನ್‌ ವೆಬ್‌ಸೈಟ್‌ ಪರಿಶೀಲನೆ ನಡೆಸಿದಾಗ ನಾಲ್ಕೈದು ದಿನಗಳ ಹಿಂದೆ ‘ಮುಂಬೈನಲ್ಲಿ ಬ್ರಾಯ್ಲರ್‌ ಕೋಳಿಯಲ್ಲಿ ಕೊರೋನಾವೈರಸ್‌ ಪತ್ತೆ’ ಎಂಬ ಕ್ಯಾಪ್ಷನ್‌ ಜೊತೆ ಇದೇ ಫೋಟೋ ಪ್ರಕಟವಾಗಿದ್ದು ಪತ್ತೆಯಾಗಿದೆ. ಅದರ ಬೆನ್ನಲ್ಲೇ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಇನ್ನಷ್ಟುಹುಡುಕಾಟ ನಡೆಸಿದಾಗ ಇದು ‘ರಾಣಿಖೇತ್‌’ ಎಂಬ ರೋಗಪೀಡಿತ ಕೋಳಿ ಎಂದು ತಿಳಿದು ಬಂದಿದೆ.

ರಾಣಿಖೇತ್‌ ಎಂಬುದು ಪಕ್ಷಿಗಳಲ್ಲಿ ಕಾಣಿಸಿಕೊಳ್ಳುವ ಮಾರಕ ಸಾಂಕ್ರಾಮಿಕ ರೋಗವಾಗಿದ್ದು, ಪೌಲ್ಟಿ್ರಗಳಲ್ಲಿ ಕೋಳಿಗಳನ್ನು ಸಾಯಿಸುವ ನಂ.1 ರೋಗವೆಂದು ಕುಖ್ಯಾತಿ ಪಡೆದಿದೆ. ಈಗ ವೈರಲ್‌ ಆದ ‘ಕೋಳಿಗಳಲ್ಲಿ ಕೊರೋನಾವೈರಸ್‌’ ಸುದ್ದಿ ಸುಳ್ಳು ಎಂದು ಹೈದರಾಬಾದ್‌ ಮಹಾನಗರ ಪಾಲಿಕೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಇದು ರಾಣಿಖೇತ್‌ ಸೋಂಕುಪೀಡಿತ ಕೋಳಿಯ ಚಿತ್ರ ಎಂದು ಖಚಿತಪಡಿಸಿದೆ.

ಜೊತೆಗೆ ಖ್ಯಾತ ವೈದ್ಯರು ಕೂಡ ಕೊರೋನಾವೈರಸ್‌ ಹಕ್ಕಿಗಳ ಮೂಲಕ ಹರಡುವುದಿಲ್ಲ. ಕೋಳಿಗಳಲ್ಲಿ ಕೊರೋನಾವೈರಸ್‌ ಕಾಣಿಸಿಕೊಂಡಿರುವುದು ಸುಳ್ಳು. ಭಾರತದಲ್ಲಿ ಯಾವುದೇ ಪಕ್ಷಿಯಲ್ಲಿ ಕೊರೋನಾವೈರಸ್‌ ಕಾಣಿಸಿಕೊಂಡಿರುವುದು ಇಲ್ಲಿಯವರೆಗೂ ಖಚಿತಗೊಂಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

- ವೈರಲ್ ಚೆಕ್