"

ಬೆಂಗಳೂರು[ಡಿ.18]: ರಾಜ್ಯದ ಜನರಿಗೆ ಎರಡು ದಿನಗಳ ಬಂದ್ ಬಿಸಿ ತಟ್ಟಲಿದೆ ಎಂಬ ಮಾಹಿತಿಯುಳ್ಳ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಈ ಸುದ್ದಿ ಸಾರ್ವಜನಿಕರನ್ನು ಹಾಗೂ ಪೋಷಕರನ್ನು ಗೊಂದಲಕ್ಕೀಡು ಮಾಡಿದೆ. ಹಾಗಾದ್ರೆ ನಿಜಕ್ಕೂ ಬಂದ್ ಇದೆಯಾ? ಇಲ್ಲಿದೆ ವೈರಲ್ ವಿಡಿಯೋ ಹಿಂದಿನ ಸತ್ಯ.

ಎರಡು ದಿನಗಳ ಭಾರತ್ ಬಂದ್‌ಗೆ ಕರೆ ನೀಡಲಾಗಿದ್ದು, ಜನರಿಗೆ ಬಂದ್ ಬಿಸಿ ತಟ್ಟಲಿದೆ ಎಂಬ ಸುವರ್ಣ ನ್ಯೂಸ್ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಪೋಷಕರನ್ನು ಗೊಂದಲಕ್ಕೀಡು ಮಾಡಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಬೇಕೇ ಎಂಬ ಚಿಂತೆ ಶುರುವಾಗಿದೆ. ಆದರೆ ಪೋಷಕರು ಹಾಗೂ ಜನ ಸಾಮಾನ್ಯರು ಚಿಂತೆಗೀಡಾಗುವುದು ಬೇಡ.

ಜನವರಿಯಲ್ಲಾದ ಬಂದ್ ವಿಡಿಯೋ, ಪೋಷಕರೇ ಚಿಂತೆ ಬಿಡಿ

ಈ ವಿಡಿಯೋ 2019ರ ಜನವರಿ 6ರದ್ದಾಗಿದೆ. ಜನವರಿಯಲ್ಲಿ ಕಾರ್ಮಿಕ ಸಂಘಟನೆಗಳು ಹಲವು ಬೇಡಿಕೆಗಳನ್ನು ಈಡೇರಿಕೆಗೆ ಮನವಿ ಮಾಡಿ ಕರೆದಿದ್ದ ಭಾರತ್ ಬಂದ್ ವಿಡಿಯೋ ಇದಾಗಿದೆ.

ಹೀಗಾಗಿ ಪೋಷಕರು ನಿಶ್ಚಿಂತೆಯಿಂದ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬಹುದಾಗಿದೆ. ಸಾರ್ವಜನಿಕರು ಕೂಡಾ ಯಾವುದೇ ಆತಂಕವಿಲ್ಲದೇ ಓಡಾಡಬಹುದು. ಎಲ್ಲಾ ಸೌಲಭ್ಯಗಳು ದಿನ ನಿತ್ಯದಂತೆ ಲಭ್ಯವಿರಲಿದೆ.