ನವದೆಹಲಿ[ಜ.09]: ಬೆಂಗಳೂರು ಸಿಟಿ ರೈಲು ನಿಲ್ದಾಣ, ಮಹಾರಾಷ್ಟ್ರದ ಮನ್ಮಾಡ್‌ ಹಾಗೂ ಭುಸಾವಲ್‌ ರೈಲು ನಿಲ್ದಾಣಗಳಲ್ಲಿ ‘ಫೇಸ್‌ ರೆಕಗ್ನಿಷನ್‌’ ತಂತ್ರಜ್ಞಾನವನ್ನು ರೈಲ್ವೆ ಇಲಾಖೆ ಅಳವಡಿಸಿದೆ. ಇದರಿಂದಾಗಿ ಕ್ರಿಮಿನಲ್‌ಗಳೇನಾದರೂ ಈ ರೈಲು ನಿಲ್ದಾಣಗಳಲ್ಲಿ ಸಂಚರಿಸಿದರೆ ಅವರ ಮುಖವನ್ನು ಸುಲಭವಾಗಿ ಪತ್ತೆ ಮಾಡಿ, ಅವರ ಇರುವಿಕೆ ಸ್ಥಳವನ್ನು ಗುರುತಿಸಲು ಪೊಲೀಸರಿಗೆ ಸಾಧ್ಯವಾಗಲಿದೆ.

ಈಗಾಗಲೇ ಅಪರಾಧ ಹಾಗೂ ಅಪರಾಧಿಗಳ ಪತ್ತೆ ಜಾಲ ತಂತ್ರಜ್ಞಾನದಲ್ಲಿ ಶಂಕಿತರ ಮುಖಚಹರೆಗಳು ಲಭ್ಯವಿವೆ. ಈ ತಂತ್ರಜ್ಞಾನದ ಜತೆ ‘ಫೇಸ್‌ ರೆಕಗ್ನಿಷನ್‌ ಸಿಸ್ಟಂ’ಅನ್ನು ಸಂಯೋಜಿಸುವುದು ರೈಲ್ವೆಯಲ್ಲಿನ ಭದ್ರತೆ ನೋಡಿಕೊಳ್ಳುವ ರೈಲ್ವೆ ರಕ್ಷಣಾ ದಳದ (ಆರ್‌ಪಿಎಫ್‌) ಉದ್ದೇಶವಾಗಿದೆ. ಇದರಿಂದ ಕ್ರಿಮಿನಲ್‌ಗಳೇನಾದರೂ ತಲೆಮರೆಸಿಕೊಂಡು ರೈಲ್ವೆ ನಿಲ್ದಾಣಗಳಲ್ಲಿ ಓಡಾಡುತ್ತಿದ್ದರೆ, ಆ ಕ್ಷಣದಲ್ಲೇ ಅವರ ಗುರುತನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಹಕಾರದೊಂದಿಗೆ ‘ಫೇಸ್‌ ರಿಕಗ್ನಿಷನ್‌ ಸಿಸ್ಟಂ’ ಗುರುತಿಸಿ ಪೊಲೀಸರಿಗೆ ಸಂದೇಶ ರವಾನಿಸುತ್ತದೆ. ಆಗ ಇಂಥವರನ್ನು ಸ್ಥಳದಲ್ಲೇ ಬಂಧಿಸಲು ಸಾಧ್ಯವಾಗುತ್ತದೆ.

ಇಲ್ಲಿ ಈ ವ್ಯವಸ್ಥೆಯು ಯಶಸ್ವಿಯಾಗಿ ಕೆಲಸ ಮಾಡಿದರೆ ದೇಶದ ಇತರ ರೈಲು ನಿಲ್ದಾಣಗಳಲ್ಲೂ ಅಳವಡಿಸುವ ಆಲೋಚನೆಯನ್ನು ರೈಲ್ವೆ ಇಲಾಖೆ ಹೊಂದಿದೆ.

ವಿಡಿಯೋ ನಿಗಾ ವ್ಯವಸ್ಥೆ:

ಇದೇ ವೇಳೆ, ‘ನಿರ್ಭಯಾ ನಿಧಿ’ ಅಡಿಯಲ್ಲಿ ರೈಲ್ವೆಗೆ 250 ಕೋಟಿ ರು. ದೊರೆತಿದ್ದು, ಹಲವು ರೈಲು ನಿಲ್ದಾಣಗಳಲ್ಲಿ ‘ವಿಡಿಯೋ ಸರ್ವೇಕ್ಷಣಾ ವ್ಯವಸ್ಥೆ’ ಅಳವಡಿಸಲಾಗಿದೆ. ಅತ್ಯಾಧುನಿಕ ಕ್ಯಾಮರಾಗಳನ್ನು ನಿಲ್ದಾಣಗಳಲ್ಲಿ ಅಳವಡಿಸಿ ಅವುಗಳನ್ನು ಆರ್‌ಪಿಎಫ್‌ನ ಕಂಟ್ರೋಲ್‌ ರೂಂಗೆ ಸಂಯೋಜಿಸಲಾಗುತ್ತದೆ. ಈ ಮೂಲಕ ಪ್ರಯಾಣಿಕರ ಚಲನವಲನಗಳನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ.

ಈಗಾಗಲೇ ಈ ವ್ಯವಸ್ಥೆಯನ್ನು ನೈಋುತ್ಯ ರೈಲ್ವೆ ಬಳ್ಳಾರಿ, ಬೆಳಗಾವಿ, ಬೆಂಗಳೂರು ಕಂಟೋನ್ಮೆಂಟ್‌, ಬಂಗಾರಪೇಟೆ, ಹಾಸನ, ಶಿವಮೊಗ್ಗ ಟೌನ್‌, ವಾಸ್ಕೋ, ಸತ್ಯಸಾಯಿ ಪ್ರಶಾಂತಿ ನಿಲಯಂನಲ್ಲಿ ನಿಲ್ದಾಣಗಳಲ್ಲಿ ಅಳವಡಿಸಿದೆ. ದೇಶದ 200 ರೈಲು ನಿಲ್ದಾಣಗಳಲ್ಲಿ ಇದರ ಅಳವಡಿಕೆಯ ಗುರಿ ಹೊಂದಲಾಗಿದೆ.

ಇದೇ ವೇಳೆ ಏಕೀಕೃತ ಭದ್ರತಾ ವ್ಯವಸ್ಥೆಯನ್ನು ಬೆಂಗಳೂರು, ಮೈಸೂರು ಹಾಗೂ ಯಶವಂತಪುರದಲ್ಲಿ ಅಳವಡಿಸಲಾಗಿದೆ. ಈ ಮೂಲಕ ಸ್ಟೇಶನ್‌ ಕಂಟ್ರೋಲ್‌ ರೂಂನಲ್ಲಿ ಮಾತ್ರವಲ್ಲ, ಆಯಾ ವಿಭಾಗದ ಮುಖ್ಯ ಕಚೇರಿಗಳಲ್ಲಿ ಕೂಡ ಈ ನಿಲ್ದಾಣಗಳಲ್ಲಿನ ಕ್ಯಾಮರಾ ಸೆರೆಹಿಡಿದಿರುವ ದೃಶ್ಯ ನೋಡಬಹುದಾಗಿದೆ