Asianet Suvarna News Asianet Suvarna News

ಬೆಳ್ತಂಗಡಿ ಏತ ನೀರಾವರಿ ಮಾರ್ಚ್‌ಗೆ ಲೋಕಾರ್ಪಣೆ: ಸಚಿವ ಗೋವಿಂದ ಕಾರಜೋಳ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅನುಷ್ಠಾನಗೊಳ್ಳುತ್ತಿರುವ 240 ಕೋಟಿ ರುಪಾಯಿ ವೆಚ್ಚದ ಬೆಳ್ತಂಗಡಿ ಏತ ನೀರಾವರಿ ಯೋಜನೆಯು ಮುಂಬರುವ ಮಾರ್ಚ್‌ ತಿಂಗಳಾಂತ್ಯದ ಒಳಗಾಗಿ ಲೋಕಾರ್ಪಣೆಗೊಳ್ಳಲಿದೆ ಎಂದು ರಾಜ್ಯ ಜಲ ಸಂಪನ್ಮೂಲ ಖಾತೆ ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ. 

Belthangadi Irrigation Project inaugurated in March says minister govinda karajola gvd
Author
First Published Sep 3, 2022, 1:22 AM IST

ಉಪ್ಪಿನಂಗಡಿ (ಸೆ.03): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅನುಷ್ಠಾನಗೊಳ್ಳುತ್ತಿರುವ 240 ಕೋಟಿ ರುಪಾಯಿ ವೆಚ್ಚದ ಬೆಳ್ತಂಗಡಿ ಏತ ನೀರಾವರಿ ಯೋಜನೆಯು ಮುಂಬರುವ ಮಾರ್ಚ್‌ ತಿಂಗಳಾಂತ್ಯದ ಒಳಗಾಗಿ ಲೋಕಾರ್ಪಣೆಗೊಳ್ಳಲಿದೆ ಎಂದು ರಾಜ್ಯ ಜಲ ಸಂಪನ್ಮೂಲ ಖಾತೆ ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ. ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿ ನೇತ್ರಾವತಿ ನದಿಗೆ ನಿರ್ಮಿಸಲಾಗುತ್ತಿರುವ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣ ಕಾರ್ಯ ಹಾಗೂ ಅದರಿಂದ ಬೆಳ್ತಂಗಡಿ ತಾಲೂಕಿನ 16 ಗ್ರಾಮಗಳಿಗೆ ನೀರುಣಿಸಲಿರುವ ಏತ ನೀರಾವರಿ ಯೋಜನೆಯ ಕಾಮಗಾರಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ದ.ಕ. ಜಿಲ್ಲೆಯ ಇತಿಹಾಸದಲ್ಲಿ ಈ ಹಿಂದೆ ದೊಡ್ಡ ನೀರಾವರಿ ಯೋಜನೆಗಳು ಬಂದಿರಲಿಲ್ಲ. ಇಲ್ಲಿನ ತೂಗು ಸೇತುವೆ ಭಾರಿ ನೆರೆಗೆ ಕೊಚ್ಚಿ ಹೋದಾಗ, ಪರ್ಯಾಯ ತೂಗು ಸೇತುವೆ ರಚನೆಯ ಬದಲು ಸರ್ವಕಾಲಿಕ ಸೇತುವೆಯ ನಿರ್ಮಾಣಕ್ಕೆ ಶಾಸಕರು ಆದ್ಯತೆ ನೀಡಿದ್ದರು. ಸೇತುವೆಯ ನಿರ್ಮಾಣದ ಜೊತೆ ಜೊತೆಗೆ ಕಿಂಡಿ ಅಣೆಕಟ್ಟು ನಿರ್ಮಿಸಿ ತಾಲೂಕಿನ ಹಲವು ಗ್ರಾಮಗಳ ನೀರಿನ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕಳೆದ ಅವಧಿಯಲ್ಲಿ ಸತತ ಮಳೆಯಿಂದಾಗಿ ಕೇವಲ 3 ತಿಂಗಳು ಮಾತ್ರ ಕಾಮಗಾರಿಗೆ ಅವಕಾಶ ಲಭಿಸಿದ್ದು, ಈ ಬಾರಿ ಪ್ರಕೃತಿ ಸಹಕರಿಸಿದರೆ ಮುಂದಿನ ಐದು ತಿಂಗಳ ಒಳಗಾಗಿ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದರು.

ಮೋದಿ ಮಂಗಳೂರು ಸಮಾವೇಶಕ್ಕೆ ಎಂಟ್ರಿ ಕೊಡಲು ಉದ್ಯಮಿ ಬಿ ಆರ್‌ ಶೆಟ್ಟಿ ಹರಸಾಹಸ

66 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸಲು ಯೋಜನೆ: ಪ್ರಸಕ್ತ ರಾಜ್ಯಸರ್ಕಾರ 66 ಲಕ್ಷ ಹೆಕ್ಟೇರು ಕೃಷಿ ಭೂಮಿಗೆ ನೀರುಣಿಸಲು ಯೋಜನೆ ರೂಪಿಸಿದ್ದು, ಈ ಪೈಕಿ 40 ಲಕ್ಷ ಹೆಕ್ಟೇರು ಕೃಷಿ ಭೂಮಿಗೆ ಬೃಹತ್‌ ಮತ್ತು ಮಧ್ಯಮ ಗಾತ್ರದ ನೀರಾವರಿ ಯೋಜನೆಯ ಮೂಲಕ 10 ಲಕ್ಷ ಹೆಕ್ಟೇರು ಕೃಷಿ ಭೂಮಿಗೆ ಸಣ್ಣ ನೀರಾವರಿ ಯೋಜನೆಯ ಮೂಲಕ ನೀರುಣಿಸುವ ಗುರಿ ಸಾಧಿಸಲಾಗುತ್ತಿದೆ ಎಂದರು.

ಅಂತಾರಾಜ್ಯ ಹರಿಯುವ ನೀರಿನ ಹಂಚಿಕೆಯಲ್ಲಿ ರಾಜ್ಯದ ಪಾಲನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸರ್ಕಾರ ಬದ್ಧವಾಗಿದೆ. ಕೃಷ್ಣ ಮೇಲ್ದಂಡೆ ಯೋಜನೆಗೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯ ಸರ್ಕಾರ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಯೋಜನೆಯ ಅನುಷ್ಠಾನ ವಿಳಂಬವಾಗಿದೆ. ಮೇಕೆದಾಟು ಯೋಜನೆಯಲ್ಲಿ ರಾಜ್ಯದ 4.75 ಟಿಎಂಸಿ ನೀರಿನ ಪಾಲು ದೊರತರೆ ಬೆಂಗಳೂರು ಮತ್ತದರ ಸುತ್ತಮುತ್ತಲ ಪ್ರದೇಶಗಳ ಜನರ ಕುಡಿಯುವ ನೀರಿನ ಬೇಡಿಕೆ ಈಡೇರಿಸಬಹುದಾಗಿದೆ. ತಮಿಳುನಾಡು ಸರ್ಕಾರ ಇದರ ಬಗ್ಗೆ ದಾವೆ ಹೂಡಿರುವುದರಿಂದ ಯೋಜನೆಯ ಅನುಷ್ಠಾನ ವಿಳಂಬವಾಗಿದೆ ಎಂದರು.

ಎತ್ತಿನಹೊಳೆ ಕಾಮಗಾರಿ ಪ್ರಗತಿಯಲ್ಲಿದ್ದು, ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಯೋಜನೆಯ ಒಟ್ಟು ಕಾಮಗಾರಿಯು ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ. ಮಹಾದಾಯಿ ಯೋಜನೆಯಿಂದ ರಾಜ್ಯದ ಪಾಲಾದ 3.9 ಟಿಎಂಸಿ ನೀರಿನ ಲಭ್ಯತೆಗಾಗಿ ಕೇಂದ್ರ ಸರ್ಕಾರದ ಅನುಮತಿ ಪಡೆದು ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು. ಕಾಮಗಾರಿ ವೀಕ್ಷಣೆಗೆ ಆಗಮಿಸಿದ ಸಚಿವರನ್ನು ಹಾಗೂ ಶಾಸಕ ಹರೀಶ್‌ ಪೂಂಜ ಅವರನ್ನು ಮೊಗೇರಡ್ಕ ಮೂವರು ದೈವಗಳ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಕ್ಷೇತ್ರದ ವತಿಯಿಂದ ಗೌರವ ಸಲ್ಲಿಸಲಾಯಿತು. 

Modi In Mangaluru ದಾರಿಯುದ್ದಕ್ಕೂ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ಕೋರಿದ ಜನ

ಜಲ ಸಂಪನ್ಮೂಲ ಇಲಾಖೆಯ ಮೇಲ್ವಿಚಾರಣೆ ಎಂಜಿನಿಯರ್‌ ಭೀಮಾ ನಾಯಕ್‌, ಕಾರ್ಯಪಾಲ ಎಂಜಿನಿಯರ್‌ ನಟರಾಜ ಪಟೇಲ್‌, ಸಹಾಯಕ ಎಂಜಿನಿಯರ್‌ ಪ್ರಸನ್ನ, ದಾಸೇಗೌಡ, ವಿಜಯ್‌ ಶೆಟ್ಟಿ, ಎನ್‌.ಜಿ. ಭಟ್‌ ಪೂರಕ ಮಾಹಿತಿ ನೀಡಿದರು. ಬಂದಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪರಮೇಶ್ವರಿ, ಉಪಾಧ್ಯಕ್ಷ ಗಂಗಾಧರ ಪೂಜಾರಿ, ಸದಸ್ಯ ಬಾಲಕೃಷ್ಣ ಗೌಡ, ದೈವಸ್ಥಾನ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಅಂತರ, ಮನೊಹರ್‌ ಅಂತರ, ಕೇಶವ ಗೌಡ ಜಾಲ್ನಡೆ, ಸುಧಾಕರ ಮೈಮಾರು, ರಾಮಣ್ಣ ಗೌಡ ಎರ್ಮಾಲು, ಬಾಬು ಗೌಡ ಮತ್ತಿತರರು ಇದ್ದರು.

Follow Us:
Download App:
  • android
  • ios