ಕೇರಳ ಚರ್ಚಲ್ಲಿ ಸ್ಫೋಟ; ರಾಜ್ಯದಲ್ಲಿ ಕಟ್ಟೆಚ್ಚರವಹಿಸುವಂತೆ ಗೃಹ ಸಚಿವ ಪರಮೇಶ್ವರ ಸೂಚನೆ
ಕೇರಳದಲ್ಲಿ ಬಾಂಬ್ ಸ್ಫೋಟದ ಬೆನ್ನಲ್ಲೇ ರಾಜ್ಯದ ಎಲ್ಲ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಮಂಗಳೂರು (ಅ.30) : ಕೇರಳದಲ್ಲಿ ಬಾಂಬ್ ಸ್ಫೋಟದ ಬೆನ್ನಲ್ಲೇ ರಾಜ್ಯದ ಎಲ್ಲ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕೇರಳದಲ್ಲಿ ಬಾಂಬ್ ಸ್ಫೋಟವನ್ನು ಯಾರು ಮಾಡಿದ್ದು ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಕೇರಳದಲ್ಲಿ ಸರಣಿ ಸ್ಫೋಟದ ಬೆನ್ನಲ್ಲೇ ರಾಜಧಾನಿಯಲ್ಲಿ ಪೊಲೀಸರ ಕಟ್ಟೆಚ್ಚರ
ರಾಜ್ಯದಲ್ಲಿ ಡ್ರಗ್ಸ್ ವಿರುದ್ಧ ಕ್ರಮ ಮುಂದುವರಿದಿದ್ದು, ಮಂಗಳೂರಿನಲ್ಲಿ ಕಳೆದ ಮೂರು ತಿಂಗಳಿನಿಂದೀಚೆಗೆ 72 ಪ್ರಕರಣಗಳಲ್ಲಿ 113 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ 19 ಮಂದಿ ಪ್ರಮುಖ ಡ್ರಗ್ಸ್ ಪೆಡ್ಲರ್‌ಗಳಾಗಿದ್ದರೆ, 94 ಮಂದಿ ಡ್ರಗ್ಸ್ ಸೇವಿಸಿದವರಾಗಿದ್ದಾರೆ. ಸುಮಾರು 90 ಲಕ್ಷ ರು.ಮೌಲ್ಯದ ಮಾದಕ ವಸ್ತುಗಳನ್ನು ಈ ಅವಧಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಗೊಳಿಸಲಾಗುವುದು. ಇದನ್ನು ಮಟ್ಟ ಹಾಕಲು ಇದೀಗ ಐಟಿ ಮತ್ತು ಗೃಹ ಇಲಾಖೆಯ ಜಂಟಿ ಸಮಿತಿ ರಚಿಸಲಾಗಿದೆ. ಈ ಸಮಿತಿಯ ಶಿಫಾರಸ್ಸಿನ ಮೇರೆಗೆ ಈಗಿರುವ ಕಾನೂನುಗಳ ಜತೆ ಇನ್ನಷ್ಟು ಕಠಿಣ ಕಾನೂನು ಸೇರಿಸಿ ಜಾರಿಗೆ ತರಲಾಗುವುದು ಎಂದರು.
ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿದ ಬಳಿಕ ಸೈಬರ್ ಅಪರಾಧಿಗಳು ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡುತ್ತಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಅಪರಾಧಿಗಳು ಕಾವೇರಿ ತಂತ್ರಾಂಶವನ್ನು ಹ್ಯಾಕ್ ಮಾಡಿದ್ದಾರೆ. ಮಂಗಳೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ಮೂವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲೇ ಈ ವಂಚನೆ ಯಾಕೆ ನಡೆಯುತ್ತಿದೆ ಎನ್ನುವುದನ್ನು ಕಂಡುಹಿಡಿಯಲಿದ್ದೇವೆ ಎಂದು ತಿಳಿಸಿದರು.
ಕೇರಳ ಬಾಂಬ್ ಸ್ಫೋಟದಲ್ಲಿ ಮೃತರ ಸಂಖ್ಯೆ 2ಕ್ಕೆ ಏರಿಕೆ, ಐವರ ಸ್ಥಿತಿ ಚಿಂತಾಜನಕ!
ಇಲಾಖೆಯಲ್ಲಿ 18 ಸಾವಿರ ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಪಿಎಸ್‌ಐ ಹುದ್ದೆಗಳೂ ಖಾಲಿ ಇವೆ. ಈಗಾಗಲೇ ಪಿಎಸ್‌ಐ ನೇಮಕಾತಿ ಹಗರಣ ನ್ಯಾಯಾಲದಲ್ಲಿದೆ. ಕೋರ್ಟ್ ತೀರ್ಪು ಏನು ಬರಲಿದೆಯೋ ಅದರಂತೆ ಕ್ರಮ ವಹಿಸಲಾಗುವುದು ಎಂದರು.
ದೇಶದಲ್ಲೇ ಮೊದಲ ಕಮಾಂಡ್ ಸೆಂಟರ್:
ದೇಶದಲ್ಲೇ ಮೊದಲ ಬಾರಿಗೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳ ಪ್ರತಿಕ್ಷಣದ ಚಲನವಲನಗಳ ಮೇಲೆ ನಿಗಾ ಇರಿಸಲು ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್‌ನ್ನು ಶೀಘ್ರ ಆರಂಭಿಸಲಾಗುವುದು. ರಾಜ್ಯದ ಪ್ರತಿ ಠಾಣೆಯ ಎಲ್ಲ ಆಗುಹೋಗುಗಳು ಸೆಕೆಂಡುಗಳಲ್ಲಿ ಬೆಂಗಳೂರಿನ ಕಮಾಂಡ್ ಸೆಂಟರ್‌ಗೆ ಲಭ್ಯವಾಗಲಿವೆ. ಇದರಿಂದ ತಕ್ಷಣದ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ. ಕಮಾಂಡ್ ಸೆಂಟರ್‌ನ ಕಟ್ಟಡ ಕೆಲಸ ನಡೆಯುತ್ತಿದ್ದು, ಇನ್ನು 2-3 ತಿಂಗಳೊಳಗೆ ಕಾರ್ಯಾರಂಭವಾಗುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದರು.