Asianet Suvarna News Asianet Suvarna News

ಮುಂದಿನ ತಿಂಗಳೇ ಕೊರೋನಾ 3ನೇ ಅಲೆ..?

*  ಜನರು, ಸರ್ಕಾರ ಎಚ್ಚರ ಮರೆತರೆ ಈ ತಿಂಗಳ ಅಂತ್ಯಕ್ಕೇ ಪ್ರವೇಶ ಸಂಭವ
* ಲಸಿಕೆ ಪಡೆದಿದ್ದರೂ ಸೋಂಕಿನಿಂದ ರಕ್ಷಣೆ ಇಲ್ಲ: ಕೋವಿಡ್‌ ತಜ್ಞರ ಎಚ್ಚರಿಕೆ
* ಊರ ಹಬ್ಬ, ಹೆಚ್ಚು ಜನ ಸೇರುವ ಮದುವೆಗಳ ಬಗ್ಗೆ ಗಮನಹರಿಸಿ
 

Experts Warned About Corona 3rd Wave in Karnataka grg
Author
Bengaluru, First Published Aug 7, 2021, 7:17 AM IST
  • Facebook
  • Twitter
  • Whatsapp

ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ಆ.07):  ರಾಜ್ಯದಲ್ಲಿ ಸೆಪ್ಟೆಂಬರ್‌ ಮೂರು ಅಥವಾ ನಾಲ್ಕನೇ ವಾರದಲ್ಲೇ ಕೊರೋನಾ ಮೂರನೇ ಅಲೆ ತೀವ್ರ ಸ್ವರೂಪ ಪಡೆಯುವುದು ಬಹುತೇಕ ಖಚಿತ. ಸಾರ್ವಜನಿಕರು ಹಾಗೂ ಸರ್ಕಾರ ಸೂಕ್ತ ಮುನ್ನೆಚ್ಚರಿಕಾ ಕ್ರಮ ಪಾಲಿಸದಿದ್ದರೆ ಇನ್ನೂ ಶೀಘ್ರವಾಗಿಯೇ ಸೋಂಕು ಉಲ್ಬಣವಾಗಲಿದೆ. ಪ್ರತಿಕಾಯ (ಆ್ಯಂಟಿಬಾಡಿಸ್‌) ಹೊಂದಿದ್ದರೂ ಸೋಂಕು ತಪ್ಪಿದ್ದಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಹಾಗೂ ಕೇರಳದಲ್ಲಿ ಒಂದೇ ಸಮಯದಲ್ಲಿ ಎರಡನೇ ಅಲೆ (ಮೇ ಮೊದಲ ವಾರ) ಉತ್ತುಂಗಕ್ಕೆ ತಲುಪಿತ್ತು. ಕೇರಳದಲ್ಲಿ ಕರ್ನಾಟಕಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕೊರೋನಾ ಲಸಿಕೆ ನೀಡಲಾಗಿದೆ. ಹೀಗಿದ್ದರೂ ಈಗಾಗಲೇ ಮೂರನೇ ಅಲೆ ಶುರುವಾಗಿದ್ದು, ಕರ್ನಾಟಕದಲ್ಲೂ ದಿನಗಣನೆ ಶುರುವಾಗಿದೆ. ಪ್ರಸ್ತುತ ಹೆಚ್ಚು ಜನ ಗುಂಪುಗೂಡದೆ ಇರಲು ಇರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸೆಪ್ಟೆಂಬರ್‌ 3-4ನೇ ವಾರದವರೆಗೆ ಮೂರನೇ ಅಲೆ ನಿಯಂತ್ರಿಸಬಹುದು. ಎಚ್ಚರ ತಪ್ಪಿದರೆ ಇದೇ ತಿಂಗಳ (ಆಗಸ್ಟ್‌) ಕೊನೆಯ ವಾರದಿಂದಲೇ 3ನೇ ಅಲೆ ಶುರುವಾಗಿ ಸೆಪ್ಟೆಂಬರ್‌ನಲ್ಲಿ ತಾರಕಕ್ಕೇರಲಿದೆ.

ಹೀಗಂತ ಸರ್ಕಾರದ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸದಸ್ಯರೇ ಆತಂಕ ವ್ಯಕ್ತಪಡಿಸಿದ್ದು, ಸೋಂಕಿನ ವೇಗ ಇದೇ ರೀತಿಯಲ್ಲಿ ಸಾಗಿದರೆ ಸೆಪ್ಟೆಂಬರ್‌ ಅಂತಿಮ ವಾರ ಅಥವಾ ಅಕ್ಟೋಬರ್‌ ಮೊದಲ ವಾರದಲ್ಲಿ ನಿತ್ಯ ಅತಿ ಹೆಚ್ಚು (ಪೀಕ್‌) ಸೋಂಕು ಪ್ರಕರಣಗಳು ವರದಿಯಾಗಲಿವೆ ಎನ್ನುತ್ತಾರೆ.

ಅಂತಾರಾಜ್ಯ ವಾಹನ ಚಾಲಕರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ಸೆಪ್ಟೆಂಬರ್‌ನಲ್ಲಿ 3ನೇ ಅಲೆ- ಡಾ. ಮಂಜುನಾಥ್‌:

ಈ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿದ ಟಿಎಸಿ ಸದಸ್ಯರಾದ ಡಾ.ಸಿ.ಎನ್‌. ಮಂಜುನಾಥ್‌, ಜನ ಗುಂಪು ಸೇರಿದಷ್ಟೂವೇಗವಾಗಿ 3ನೇ ಅಲೆಯನ್ನು ಸ್ವಾಗತಿಸಬೇಕಾಗುತ್ತದೆ. ಪ್ರಸ್ತುತ ಮದುವೆ ಸಮಾರಂಭಗಳಿಗೆ 100 ಜನ, ಶುಭ ಸಮಾರಂಭಗಳಿಗೆ 20 ಜನರ ಮಿತಿ ಇದೆ. ಊರ ಹಬ್ಬ, ಜಾತ್ರೆ, ರಥೋತ್ಸವದಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಿಲ್ಲ. ಹೀಗಿದ್ದರೂ ಮದುವೆಗಳಿಗೆ 1 ಸಾವಿರಕ್ಕೂ ಹೆಚ್ಚು ಜನರು ಸೇರುತ್ತಿರುವ ಉದಾಹರಣೆಗಳಿವೆ. ಹಲವೆಡೆ ಊರ ಹಬ್ಬ, ಆಚರಣೆಗಳು ನಡೆಯುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ, ತಹಸೀಲ್ದಾರ್‌ಗಳು ಹಾಗೂ ಪೊಲೀಸ್‌ ಇಲಾಖೆ ಗಮನ ಹರಿಸಬೇಕು. ಇದರಿಂದ ಸೆಪ್ಟೆಂಬರ್‌ ಅಂತಿಮ ವಾರ ಅಥವಾ ಅಕ್ಟೋಬರ್‌ ಮೊದಲ ವಾರದವರೆಗೂ 3ನೇ ಅಲೆಯನ್ನು ಮುಂದೂಡಬಹುದು. ಎಚ್ಚರ ತಪ್ಪಿದರೆ ಅದಕ್ಕೂ ಮೊದಲೇ ಕೊರೋನಾ 3ನೇ ಅಲೆ ಶುರುವಾಗಲಿದೆ ಎಂದು ಎಚ್ಚರಿಸಿದರು.

ರಾಜ್ಯಾದ್ಯಂತ ಕಠಿಣ ಕ್ರಮ ಅಗತ್ಯ:

ಈಗಾಗಲೇ ಸೋಂಕು ಹೆಚ್ಚಾಗಿರುವ ಗಡಿ ಜಿಲ್ಲೆಗಳಲ್ಲಿ ಹಲವು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷೆ ಹೆಚ್ಚಳ, ಗಡಿ ಭಾಗದಲ್ಲಿ ಪರೀಕ್ಷೆ, ಸೋಂಕಿತರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸುವಂತಹ ಕ್ರಮ ಜರುಗಿಸಲಾಗುತ್ತಿದೆ. ರಾಜ್ಯಾದ್ಯಂತ ವಿಸ್ತರಣೆ ಮಾಡುವ ಅಗತ್ಯವಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೂ ತಂದಿದ್ದೇವೆ. ಸಾರ್ವಜನಿಕರು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸದ್ಯದಲ್ಲೇ ಆಘಾತ:

ಸಮಿತಿಯ ಮತ್ತೊಬ್ಬ ಸದಸ್ಯರು ಮಾತನಾಡಿ, ರಾಜ್ಯದಲ್ಲಿ 2ನೇ ಅಲೆ ವೇಳೆ ಏಪ್ರಿಲ್‌ 3-4 ನೇ ವಾರದಲ್ಲಿ ಪ್ರಕರಣ ಹೆಚ್ಚುತ್ತಾ ಹೋಗಿ ಮೇ ಮೊದಲನೇ ವಾರ ಪ್ರಕರಣಗಳ ಸಂಖ್ಯೆ ಉತ್ತುಂಗಕ್ಕೆ ತಲುಪಿತ್ತು. ಕೇರಳದಲ್ಲಿ ಮೇ 2ನೇ ವಾರ ಅತಿ ಹೆಚ್ಚು ಪ್ರಕರಣಗಳು (ಸರಾಸರಿ 40 ಸಾವಿರ) ವರದಿಯಾಗಿದ್ದವು. 2ನೇ ಅಲೆಯಲ್ಲಿ ರಾಜ್ಯಕ್ಕಿಂತ ಒಂದು ವಾರ ಹಿಂದಿದ್ದ ಕೇರಳದಲ್ಲಿ ಈಗಾಗಲೇ 3ನೇ ಅಲೆ ಕಾಣಿಸಿಕೊಂಡಿದೆ.

ಕೇರಳದಲ್ಲಿ ಈಗಾಗಲೇ ಶೇ.52ರಷ್ಟು ವಯಸ್ಕರಿಗೆ ಕನಿಷ್ಠ ಒಂದು ಡೋಸ್‌ ಹಾಗೂ ಶೇ.21 ರಷ್ಟುಮಂದಿಗೆ ಎರಡೂ ಡೋಸ್‌ ಕೊರೋನಾ ಲಸಿಕೆ ಹಾಕಲಾಗಿದೆ. ಆದರೆ, ರಾಜ್ಯದಲ್ಲಿ ಶೇ.13 ರಷ್ಟುಮಂದಿಗೆ (70.63 ಲಕ್ಷ) ಮಂದಿಗೆ ಮಾತ್ರ ಎರಡೂ ಡೋಸ್‌ ಲಸಿಕೆ ಹಾಕಲಾಗಿದೆ. ಹೀಗಾಗಿ ಕೊರೋನಾ ಲಸಿಕೆ ಮೂರನೇ ಅಲೆಯನ್ನು ತಡೆಯುತ್ತದೆ ಎಂಬ ಭ್ರಮೆಯಿಂದ ಹೊರ ಬರಬೇಕು. ಲಸಿಕೆಯ ನಡುವೆಯೇ ಎಚ್ಚರವಹಿಸಬೇಕು. ಇಲ್ಲದಿದ್ದರೆ ಸದ್ಯದಲ್ಲೇ ಆಘಾತ ಕಾದಿದೆ ಎಂದು ಎಚ್ಚರಿಸಿದರು.

ಪ್ರತಿಕಾಯ ಇದ್ದರೂ ಕೊರೋನಾ ಬರುತ್ತೆ: ಚಿಕಿತ್ಸೆ ಅನಿವಾರ್ಯ

ಕೊರೋನಾ ಸೋಂಕು ಬಂದು ವಾಸಿಯಾದ 4-5 ತಿಂಗಳವರೆಗೆ ಸೋಂಕಿನ ಪ್ರತಿಕಾಯಗಳು ದೇಹದಲ್ಲಿ ಇರುತ್ತವೆ. ಲಸಿಕೆ ಪಡೆದರೂ ಪ್ರತಿಕಾಯಗಳು ಸೃಷ್ಟಿಯಾಗುತ್ತವೆ. ಆದರೆ, ಪ್ರತಿಕಾಯಗಳು ದೇಹದಲ್ಲಿದ್ದರೂ ಕೊರೋನಾ ಸೋಂಕು ತಗುಲುವುದಿಲ್ಲ ಎಂದೇನಲ್ಲ. ಪ್ರತಿಕಾಯಗಳು ಇದ್ದರೂ ಕೊರೋನಾ ಸೋಂಕು ತಗುಲುತ್ತದೆ. ತೀವ್ರತೆ ಸ್ವಲ್ಪ ಕಡಿಮೆ ಇರಬಹುದಷ್ಟೇ ಎಂದು ಡಾ.ಸಿ.ಎನ್‌. ಮಂಜುನಾಥ್‌ ಹೇಳುತ್ತಾರೆ. ಅಲ್ಲದೆ, ಕೊರೋನಾ ಎರಡೂ ಡೋಸ್‌ ಲಸಿಕೆ ಪಡೆದವರಲ್ಲೂ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತದೆ. ಎರಡೂ ಡೋಸ್‌ ಪಡೆದವರಲ್ಲಿ ತೀವ್ರತೆ ಕಡಿಮೆ ಇರುತ್ತದೆ ಹಾಗೂ ಗಂಭೀರ ಸ್ಥಿತಿಗೆ ಹೋಗುವುದಿಲ್ಲ. ಹಾಗಂತ ಚಿಕಿತ್ಸೆ ಪಡೆಯದೆ ಇರಬಾರದು ಎಂದು ಅವರು ವಿವರಿಸಿದರು.
 

Follow Us:
Download App:
  • android
  • ios